ನವದೆಹಲಿ: ತನ್ನ ಪತಿಗೆ ಡ್ರಗ್ಸ್ ನೀಡಿ, ಬಳಿಕ ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 30 ವರ್ಷದ ಮಹಿಳೆಯನ್ನು ದೆಹಲಿಯ ಪೀತಾಂಪುರದ ಪೊಲೀಸರು ಬಂಧಿಸಿದ್ದಾರೆ. ಶನಿವಾರ 32 ವರ್ಷದ ತನ್ನ ಮಗನನ್ನು ಕೊಲೆ ಮಾಡಿದ ಬಳಿಕ ತನ್ನ ಅಪ್ರಾಪ್ತ ಮಗನನ್ನು ಕರೆದುಕೊಂಡು ಹೋಗಿ ಗಂಡನ ಶವವನ್ನು (Deadbody) ಗೋಣಿಚೀಲದಲ್ಲಿ ತುಂಬಿ ತನ್ನ ಸ್ಕೂಟಿಯಲ್ಲಿಟ್ಟುಕೊಂಡು ಹೋಗಿ ಪಾರ್ಕ್‌ನಲ್ಲಿ ಬಿಸಾಡಲು ಪ್ರಯತ್ನಿಸಿದ್ದಾಳೆ. ಆ ವೇಳೆ ಆಕೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ಗಂಡ ನಿರುದ್ಯೋಗಿಯಾಗಿದ್ದು, ವಿಪರೀತ ಮದ್ಯವ್ಯಸನಿಯಾಗಿದ್ದ. ಯಾವಾಗಲೂ ತನಗೆ ಹಿಂಸೆ ನೀಡುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಲಕ್ಷ್ಮಿ ದೇವಿ ಎಂಬ ಆರೋಪಿಯು ತನ್ನ ಪತಿ ಭರತ್ ಲಾಲ್ ತನ್ನ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ನಡೆಸುತ್ತಿದ್ದ ದೌರ್ಜನ್ಯದಿಂದ ಬೇಸತ್ತು ಅವನನ್ನು ಕೊಲ್ಲಲು ನಿರ್ಧರಿಸಿದಳು.
ಏಪ್ರಿಲ್ 11ರಂದು ಪಿತಾಂಪುರದ ಮಹಿಳಾ ಪಾರ್ಕ್ ಪ್ರವೇಶ ದ್ವಾರದ ಬಳಿ ಸೆಣಬಿನ ಚೀಲದಲ್ಲಿ ವ್ಯಕ್ತಿಯ ಶವವನ್ನು ಬಿಸಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆ ಗೋಣಿಚೀಲವನ್ನು ಕಟ್ಟಲು ಕಬ್ಬಿಣದ ತಂತಿಯನ್ನು ಬಳಸಲಾಗಿತ್ತು. ಅಲ್ಲದೆ, ಮೃತಪಟ್ಟ ವ್ಯಕ್ತಿಯ ಕುತ್ತಿಗೆಯಲ್ಲಿ ತಂತಿಯ ಗುರುತುಗಳು ಮತ್ತು ಮೃತನ ಮೂಗಿನಲ್ಲಿ ರಕ್ತ ಕಂಡುಬಂದಿತ್ತು. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 301 ಮತ್ತು 201ರ ಅಡಿಯಲ್ಲಿ ಪಿಎಸ್ ಮೌರ್ಯ ಎನ್‌ಕ್ಲೇವ್‌ನಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆಯನ್ನು ಪ್ರಾರಂಭಿಸಲಾಗಿತ್ತು.
ಮೃತ ಭರತ್ ಲಾಲ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪಿತಾಂಪುರದಲ್ಲಿ ವಾಸವಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು. ತನ್ನ ಪತಿ ಏಪ್ರಿಲ್ 9ರಂದು ರಾತ್ರಿ 10 ಗಂಟೆ ಸುಮಾರಿಗೆ ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋದಾಗ ನಾಪತ್ತೆಯಾಗಿದ್ದಾನೆ ಎಂದು ತನಿಖೆಯ ವೇಳೆ ಲಕ್ಷ್ಮಿ ಪೊಲೀಸರಿಗೆ ತಿಳಿಸಿದ್ದಳು. ಭರತ್‌ಗಾಗಿ ಹುಡುಕಾಟ ನಡೆಸಿದ್ದೆ, ಆದರೆ ಆತ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಹೇಳಿದ್ದಳು.
ಆದರೆ, ವಿಚಾರಣೆ ವೇಳೆ ಲಕ್ಷ್ಮಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಲೇ ಇದ್ದಳು. ಆಕೆಯ ಹೇಳಿಕೆಯಲ್ಲಿ ಕೆಲವು ವ್ಯತ್ಯಾಸಗಳು ಕಂಡಿದ್ದರಿಂದ ಇದು ತನಿಖಾ ತಂಡವನ್ನು ಅನುಮಾನಿಸುವಂತೆ ಮಾಡಿತು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದಾಗ ಆಕೆ ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಮತ್ತು ಭರತ್ ಹದಿನೈದು ವರ್ಷಗಳ ಹಿಂದೆ ಮಧ್ಯಪ್ರದೇಶದ ಮಹೋಬಾ ಜಿಲ್ಲೆಯ ಸಿಲ್ಲಾರ್‌ಪುರ ಗ್ರಾಮದಲ್ಲಿ ಮದುವೆಯಾಗಿರುವುದಾಗಿ ಲಕ್ಷ್ಮಿ ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಪ್ರಕಾರ, ಭರತ್ ಕೆಲಸವಿಲ್ಲದವನಾಗಿದ್ದು, ಕುಡಿತದ ಚಟ ಹೊಂದಿದ್ದ ಮತ್ತು ಆಗಾಗ ಅವಳಿಗೆ ಮನಬಂದಂತೆ ಹೊಡೆಯುತ್ತಿದ್ದ. ಆತನ ಚಿತ್ರಹಿಂಸೆ, ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರದಿಂದ ಬೇಸತ್ತ ಅವಳು ಅವನನ್ನು ಕೊಲ್ಲಲು ನಿರ್ಧರಿಸಿದಳು.
“ಕೆಲವು ತಿಂಗಳ ಹಿಂದೆ ನಾನು ಅನಾರೋಗ್ಯದ ನೆಪದಲ್ಲಿ ತನ್ನ ಸಮೀಪದ ಮೆಡಿಕಲ್ ಶಾಪ್ನಿಂದ ನಿದ್ರೆ ಮಾತ್ರೆಗಳನ್ನು ಖರೀದಿಸಿದೆ. ಏಪ್ರಿಲ್ 9ರಂದು ರಾತ್ರಿ 11 ಗಂಟೆಗೆ ನಾನು ನನ್ನ ಗಂಡನ ಮದ್ಯದ ಬಾಟಲಿಯಲ್ಲಿ 15 ಮಾತ್ರೆಗಳನ್ನು ಬೆರೆಸಿದೆ. ನನ್ನ ಗಂಡ ಮದ್ಯ ಸೇವಿಸಿ ನಿದ್ರೆಗೆ ಜಾರಿದಾಗ ತಂತಿಯಿಂದ ಕತ್ತು ಹಿಸುಕಿದೆ. ಮರುದಿನ ಬೆಳಿಗ್ಗೆ ಮಹಿಳೆ ನನ್ನ ಮಗನ ಸಹಾಯದಿಂದ ಸ್ಕೂಟಿಯಲ್ಲಿ ಶವವಿರುವ ಗೋಣಿಚೀಲವನ್ನು ಹೊತ್ತುಕೊಂಡು ಹೋಗಿ ಪಾರ್ಕ್‌ನಲ್ಲಿ ಎಸೆದೆ.” ಎಂದಿದ್ದಾರೆ.
ಆಕೆ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದ ಮದ್ಯದ ಬಾಟಲಿ, ಕತ್ತು ಹಿಸುಕಲು ಬಳಸಿದ ಡ್ರಾಸ್ಟ್ರಿಂಗ್ ಮತ್ತು ಅಪರಾಧ ಮಾಡುವಾಗ ಆಕೆ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!
Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ