ಪಾಕುರ್: ಪ್ರೇಮಿಗಳ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಇದೇ ಸಣ್ಣಪುಟ್ಟ ಕಾರಣಗಳಿಗೆ ಸಂಬಂಧವೇ ಮುರಿದುಬಿದ್ದಿರುವ ಉದಾಹರಣೆಗಳೂ ಇವೆ. ಆದರೆ, ಜಾರ್ಖಂಡ್‌ನಲ್ಲಿ ಪ್ರೇಮಿಗಳ ನಡುವಿನ ಜಗಳದಿಂದ ಒಂದು ಪ್ರಾಣವೇ ಹೋಗಿದೆ. ಜಾರ್ಖಂಡ್ನ ಪಾಕುರ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿ ತನಗೆ ಉಡುಗೊರೆಯಾಗಿ ನೀಡಿದ್ದ ಸ್ಮಾರ್ಟ್‌ಫೋನ್ ಹಿಂತಿರುಗಿಸಲು ನಿರಾಕರಿಸಿದ ಕಾರಣಕ್ಕೆ ಆಕೆಯ ಪ್ರಿಯಕರನೇ ಆಕೆಯನ್ನು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಮಹೇಶ್‌ಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿರುವ ಯುವತಿ ಭಾನುವಾರ ರಾತ್ರಿಯಿಂದ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸಲು 20 ವರ್ಷದ ತನ್ನ ಗೆಳೆಯನ ಜೊತೆ ಹೊರಗೆ ಹೋದವಳು ನಾಪತ್ತೆಯಾಗಿದ್ದಳು. ಸೋಮವಾರ ಬೆಳಗ್ಗೆ ನಿಗೂಢ ಸ್ಥಳದಲ್ಲಿ ಆಕೆಯ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಆಕೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದ ಎಂದು ಯುವತಿಯ ಚಿಕ್ಕಪ್ಪ ತಿಳಿಸಿದ್ದಾರೆ. ಅವನು ಆಗಾಗ ಯುವತಿಯ ಮನೆಗೆ ಭೇಟಿ ನೀಡುತ್ತಿದ್ದ ಮತ್ತು ಅವಳ ಮನೆಯಲ್ಲೇ ಕೆಲವು ರಾತ್ರಿಗಳನ್ನು ಕಳೆದಿದ್ದ. ಆದರೆ, ಆರೋಪಿಯ ಮದುವೆಯನ್ನು ಆತನ ಮನೆಯವರು ಬೇರೊಬ್ಬರೊಂದಿಗೆ ನಿಶ್ಚಯಿಸಿದ್ದರು. ಹೀಗಾಗಿ, ಆತ ತಾನು ತನ್ನ ಹಳೇ ಪ್ರೇಯಸಿಗೆ ಉಡುಗೊರೆಯಾಗಿ ನೀಡಿದ್ದ ಸ್ಮಾರ್ಟ್‌ಫೋನ್ ವಾಪಾಸ್ ಪಡೆಯಲು ಬಯಸಿದ್ದ. ಆದರೆ ಆಕೆ ಅದನ್ನು ಹಿಂದಿರುಗಿಸಲು ಒಪ್ಪಿರಲಿಲ್ಲ.
ಈ ವಿಚಾರವಾಗಿ ಜಗಳವಾಡಿ ನಂತರ ಅವರಿಬ್ಬರೂ ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳಿದ್ದರು. ಮಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂಕರಬೋನಾದಿಂದ ಬಂಧಿತ ಆರೋಪಿ, ಪಂದ್ಯ ಮುಗಿಸಿ ಹಿಂತಿರುಗುವಾಗ ಆಕೆ ಮೊಬೈಲ್ ಹಿಂತಿರುಗಿಸಲು ನಿರಾಕರಿಸಿದ್ದರಿಂದ ಚೂಪಾದ ವಸ್ತುವಿನಿಂದ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಉಪವಿಭಾಗದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಕೆಯನ್ನು ಕೊಲೆ ಮಾಡಿದ ನಂತರ ಆತ ಮೊಬೈಲ್ ಫೋನ್‌ನೊಂದಿಗೆ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಅತ್ಯಾಚಾರಿಯನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಮಹಿಳೆಯರು!
Murder: ಪ್ರೀತಿಸಲು ನಿರಾಕರಿಸಿದ್ದಕ್ಕೆ ಹಾಡಹಗಲೇ ಯುವತಿಯ ಕುತ್ತಿಗೆ ಸೀಳಿದ ಪಾಗಲ್ ಪ್ರೇಮಿ