ಮಿತ್ರ ದ್ರೋಹ: ತಂಗಿ ಜೊತೆ ಲವ್ವಿಡವ್ವಿ; ಗೆಳೆಯನಿಗೆ ಚಟ್ಟ ಕಟ್ಟಿದ ಸ್ನೇಹಿತರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಸ್ನೇಹಿತರೇ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಹುಡುಗಿ ವಿಚಾರಕ್ಕೆ ಶುರುವಾದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಓರ್ವ ಅಪ್ರಾಪ್ತ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮಿತ್ರ ದ್ರೋಹ: ತಂಗಿ ಜೊತೆ ಲವ್ವಿಡವ್ವಿ; ಗೆಳೆಯನಿಗೆ ಚಟ್ಟ ಕಟ್ಟಿದ ಸ್ನೇಹಿತರು
ಕೊಲೆಯಾದ ಸ್ನೇಹಿತ
Edited By:

Updated on: Dec 17, 2025 | 3:24 PM

ದೇವನಹಳ್ಳಿ, ಡಿಸೆಂಬರ್​ 17: ಅವರೆಲ್ಲಾ ಆಪ್ತಮಿತ್ರರು (friends). ನಿತ್ಯ ಜೊತೆಯಲ್ಲೇ ಓಡಾಟ, ಮೋಜು, ಮಸ್ತಿ ಮಾಡುತ್ತಿದ್ದರು. ಇಷ್ಟು ಚೆನ್ನಾಗಿದ್ದ ಆ ಸ್ನೇಹಿತರ ಮಧ್ಯೆ ಹುಡುಗಿಯ ವಿಚಾರವಾಗಿ ಕೆಲ ದಿನಗಳಿಂದ ಕಲಹ ಶುರುವಾಗಿತ್ತು. ಆ ಕಲಹವೇ ಇದೀಗ ಜೊತೆಯಲ್ಲಿದ್ದ ಸ್ನೇಹಿತನ ಬಲಿ (murder) ಪಡೆದಿದೆ. ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂದೀಪ್​, ಮಂಜು, ಉದಯ್, ಹೇಮಂತ್​​ ಇವರೆಲ್ಲಾ ದೊಡ್ಡಬಳ್ಳಾಪುರದವರು. ಕಂಪನಿಯೊಂದರಲ್ಲಿ ಚಾಲಕ ಹಾಗೂ ಇತರೆ ಕೆಲಸ ಮಾಡಿಕೊಂಡಿದ್ದರು. ಮಚ್ಚಾ, ಮಗಾ, ಬಾಮೈದಾ ಅಂತ ಗ್ಯಾಂಗ್ ಕಟ್ಟಿಕೊಂಡು ಹವಾ ತೋರಿಸಲು ಹೋಗಿ ಜೊತೆಯಲ್ಲಿದ್ದವನಿಗೆ ಚಟ್ಟ ಕಟ್ಟಿ ಇದೀಗ ಸೆರೆಮನೆ ಸೇರಿದ್ದಾರೆ.

ಸ್ನೇಹಿತನ ತಂಗಿ ಜೊತೆ ಲವ್ವಿಡವ್ವಿ: ಕೊಲೆ

ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್ ಠಾಣೆಯಿಂದ ಮುನ್ನೂರು ಮೀಟರ್ ದೂರದಲ್ಲೇ ಈ ಕಿರಾತಕರು ಡಿ.4ರಂದು ಪವನ್ ಎನ್ನುವ ತಮ್ಮ ಗೆಳೆಯನನ್ನೇ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಪಾಕ್ಸ್​​ಕಾನ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪವನ್, ಇತ್ತೀಚೆಗೆ ಕೆಲಸ ಬಿಟ್ಟು ಆಟೋ ಓಡಿಸಿಕೊಂಡಿದ್ದ.

ಇದನ್ನೂ ಓದಿ: Dharwad: ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಯುವತಿ; ಸಿಕ್ಕಿದ್ದು ಎರಡೆರಡು ಡೆತ್​​ನೋಟ್​​!

ಡಿ. 4ರಂದು ರಾತ್ರಿ 9 ಗಂಟೆ ಸುಮಾರಿಗೆ ಆಟೋದಲ್ಲಿ ಒಬ್ಬನೇ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ, ಐದು ಜನರು ಪವನ್​​ನನ್ನ ಅಡ್ಡಗಟ್ಟಿ ಸಾರ್ವಜನಿಕರ ಮುಂದೆಯೇ ಲಾಗು, ಮಚ್ಚುಗಳಿಂದ ಅಟ್ಯಾಕ್ ಮಾಡಿ ಹತ್ಯೆಗೈದಿದ್ದರು.

ಇತ್ತ ಮನೆಗೆ ಆಧಾರವಾಗಿದ್ದ ಒಬ್ಬನೇ ಮಗನನ್ನ ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರು ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ನಡು ರಸ್ತೆಯಲ್ಲಿ ರೋಧಿಸಿದ್ದರು. ಅಲ್ಲದೆ ಲವ್​​ ವಿಚಾರಕ್ಕೆ ನನ್ನ ಮಗನನ್ನ ಕಿರಾತಕರು ಬರ್ಬರವಾಗಿ ರಸ್ತೆ ಮಧ್ಯೆಯೇ ಹತ್ಯೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ಸ್ನೇಹಿತನ ತಂಗಿ ಜೊತೆಗೆ​​ ಸಂಬಂಧ: ಓರ್ವ ಅಪ್ರಾಪ್ತ ಸೇರಿ ಐವರ ಬಂಧನ

ನಡು ರಸ್ತೆಯಲ್ಲಿ ನಡೆದಿದ್ದ ಈ ಕೊಲೆಯನ್ನ ಗಂಭೀರವಾಗಿ ಪರಿಗಣಿಸಿದ್ದ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಇದೀಗ ಹತ್ಯೆಗೈದಿದ್ದ ಓರ್ವ ಅಪ್ರಾಪ್ತ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಪವನ್​ನ ಸ್ನೇಹಿತನ ತಂಗಿ ಜೊತೆಗೆ ಸಂದೀಪ್​​ ಸಂಬಂಧ ಹೊಂದಿದ್ದು, ಅದೊಂದು ದಿನ ಆಕೆಯ ಜೊತೆ ಮನೆಯಲ್ಲಿ ಸಿಕ್ಕಿಬಿದ್ದಿದ್ದ. ಈ ಕಾರಣಕ್ಕೆ ಪವನ್​​, ಸಂದೀಪನಿಗೆ ಥಳಿಸಿದ್ದ. ಅಷ್ಟೇ ಅಲ್ಲದೆ ಹೀಗೆ ಮುಂದುವರೆದರೆ ಕಥೆ ಮುಗಿಸುವುದಾಗಿ ವಾರ್ನಿಂಗ್ ಕೂಡ ನೀಡಿದ್ದನಂತೆ.

ಈ ಘಟನೆಯಿಂದ ಪವನ್​ ಮೇಲೆ ಸಂದೀಪ್​ನಿಗೆ ದ್ವೇಷ ಬೆಳೆದಿದ್ದು, ನನಗೆ ವಾರ್ನಿಂಗ್ ಕೊಡುತ್ತಾನೆ ಅಂತ ತನ್ನ ಸ್ನೇಹಿತರ ಜೊತೆಗೂಡಿ ಆಟೋದಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಅಡ್ಡಗಟ್ಟಿ ಕೊಲೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ಪತ್ನಿ ಜೊತೆ ಸಹೋದರನ ಚಕ್ಕಂದ: ತೋಟಕ್ಕೆ ಕರೆದೊಯ್ದು ತಮ್ಮನನ್ನು ಅಣ್ಣನೇ ಕೊಂದ!

ಒಟ್ಟಾರೆ ಹುಡುಗಿ ಜೊತೆಗಿನ ಸಂಬಂಧದ ವಿಚಾರಕ್ಕೆ ಶುರುವಾಗಿದ್ದ ಕಿರಿಕ್​ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದ್ದು ನಿಜಕ್ಕೂ ದುರಂತ. ಮಾಡಿದ ತಪ್ಪಿಗೆ ಕಿರಾತಕರು ಮುದ್ದೆ ಮುರಿಯಲು ಪರಪ್ಪನ ಅಗ್ರಹಾರ ಜೈಲು ಸೇರಿದರೆ, ಇತ್ತ ಕೂಲಿ ಮಾಡಿ ಕಷ್ಟಪಟ್ಟು ಸಾಕಿ ಸಲುಹಿದ ತಾಯಿಯ ನೋವು ಹೇಳತೀರದು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:23 pm, Wed, 17 December 25