Dharwad: ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಯುವತಿ; ಸಿಕ್ಕಿದ್ದು ಎರಡೆರಡು ಡೆತ್ನೋಟ್!
ಬಳ್ಳಾರಿ ಮೂಲದ ಯುವತಿಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಾಗಿ ನಗರಕ್ಕೆ ಆಗಮಿಸಿದ್ದ ಯುವತಿ ನೇಮಕಾತಿ ಪ್ರಕ್ರಿಯೆ ಆಗದಿರೋದಕ್ಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರಂಭದಲ್ಲಿ ಅಪಪ್ರಚಾರ ನಡೆದಿತ್ತು. ಆದರೆ ಪೊಲೀಸ್ ತನಿಖೆ ವೇಳೆ ವೈಯಕ್ತಿಕ ಕಾರಣಗಳಿಂದ ಆಕೆ ಸೂಸೈಡ್ ಮಾಡಿಕೊಂಡಿರೋದು ಗೊತ್ತಾಗಿದೆ. ಡೆತ್ನೋಟ್ ಕೂಡ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರವಾಡ, ಡಿಸೆಂಬರ್ 17: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ. ಬಳ್ಳಾರಿ ಮೂಲದ ಪಲ್ಲವಿ(24) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು,ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಾಗಿ ಧಾರವಾಡಕ್ಕೆ ಬಂದಿದ್ದಳು ಎನ್ನಲಾಗಿದೆ. ಯುವತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಪರೀಕ್ಷಿಸಿದಾಗ ಆಕೆಯ ಪ್ಯಾಂಟ್ ಕಿಸೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ.
ಎರಡು ಡೆತ್ನೋಟ್ ಪತ್ತೆ
ಮೃತ ಪಲ್ಲವಿಯ ಪ್ಯಾಂಟ್ ಕಿಸೆಯಲ್ಲಿ ಎರಡು ಪುಟಗಳ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಂದೆ-ತಾಯಿ ಬಗ್ಗೆ ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನಗೆ ಯಾವತ್ತೂ ನೀವು ಪ್ರೀತಿ ನೀಡಿಲ್ಲ. ಹಾಸ್ಟೆಲ್ನಲ್ಲೇ ನನ್ನ ಬೆಳೆಸಿದ್ದೀರಿ. ನನ್ನ ಬೇಕು ಮತ್ತು ಬೇಡಗಳನ್ನು ನೀವು ಕೇಳದ ಕಾರಣ ನಾನು ನೋವುಂಡಿದ್ದೇನೆ ಎಂದು ಬರೆದಿರೋದು ಕಂಡುಬಂದಿದೆ. ಮತ್ತೊಂದು ಡೆತ್ನೋಟ್ ಆಕೆಯ ರೂಮಿನಲ್ಲಿ ಸಿಕ್ಕಿದ್ದು, ಅದರಲ್ಲಿ ಪ್ರೀತಿಸುತ್ತಿದ್ದ ಯುವಕನ ಬಳಿ ಪಲ್ಲವಿ ಕ್ಷಮೆ ಕೇಳಿದ್ದಾಳೆ. ನಮ್ಮವರು ನಿನ್ನೊಡನೆ ಬದುಕಲು ಅವಕಾಶ ಕೊಡಲಿಲ್ಲ. ಇದರಿಂದಾಗಿ ನನ್ನ ಮನಸ್ಸಿಗೆ ನೋವಾಗಿದೆ. ನನ್ನನ್ನು ನೀನು ಕ್ಷಮಿಸು, ಈ ನನ್ನ ಸಾವಿಗೆ ನಾನೇ ಕಾರಣ ಎಂದು ಪಲ್ಲವಿ ಸ್ಪಷ್ಟವಾಗಿ ತಿಳಿಸಿದ್ದಾಳೆ.
ಇದನ್ನೂ ಓದಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್ಗಳು ಭಸ್ಮ
ಪಲ್ಲವಿ ಮತ್ತು ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ನಿವಾಸಿ ಯುವಕ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಪಲ್ಲವಿ ಮನೆಯಲ್ಲೂ ಇವರು ಪ್ರಸ್ತಾಪಿಸಿದ್ದು, ಆ ವೇಳೆ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ತಾಯಿಯ ಸಂಬಂಧಿಕರೊಬ್ಬರ ಜೊತೆ ಪಲ್ಲವಿಯ ಮದುವೆ ನಿಶ್ಚಯ ಕೂಡ ಮಾಡಲಾಗಿತ್ತು. ಹೀಗಾಗಿ ಆಕೆ ಬಹಳ ನೊಂದಿದ್ದಳು ಎಂಬ ವಿಷಯ ಕೂಡ ತನಿಖೆ ವೇಳೆ ಗೊತ್ತಾಗಿದೆ.
‘ಅಪಪ್ರಚಾರ ಮಾಡಿದ್ರೆ ಕಠಿಣ ಕ್ರಮ’
ಇನ್ನು ಘಟನೆ ಸಂಬಂಧ ಹುಬ್ಬಳ್ಳಿಯಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ನೇಮಕಾತಿ ಪ್ರಕ್ರಿಯೆ ಆಗದಿರೋದಕ್ಕೆ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ಪಲ್ಲವಿ ಸಾವಿಗೂ ಉದ್ಯೋಗ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆಕೆಯ ಜೇಬಿನಲ್ಲಿ ಎರಡು ಡೆತ್ನೋಟ್ಗಳು ಪತ್ತೆಯಾಗಿವೆ. ವೈಯಕ್ತಿಕ ವಿಚಾರಕ್ಕೆ ಆತ್ಮಹತ್ಯೆ ಎಂದು ಅದರಲ್ಲಿ ಉಲ್ಲೇಖಿಸಿರುವ ಕಾರಣ, ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯುವತಿ ಆತ್ಮಹತ್ಯೆಗೆ ಬೇರೆ ಬಣ್ಣ ಕಟ್ಟುವ ಕೆಲಸ ಮಾಡಬಾರದು ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




