ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಎಎಸ್ಐ ಪತ್ನಿ ಸೇರಿದಂತೆ ನಾಲ್ವರ ಸಾವು
ಕಾರು ಮತ್ತು ಬೈಕ್ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ನಲ್ಲಿ ನಡೆದಿದೆ.
ಬೆಳಗಾವಿ: ಕಾರು ಮತ್ತು ಬೈಕ್ಗೆ, ಲಾರಿ ಡಿಕ್ಕಿ (Accident) ಹೊಡೆದ ಪರಿಣಾಮ ಎಎಸ್ಐ (ASI) ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಸವದತ್ತಿ (Savadatti) ತಾಲೂಕಿನ ಬೂದಿಗೊಪ್ಪ ಕ್ರಾಸ್ನಲ್ಲಿ ನಡೆದಿದೆ. ಬೆಳಗಾವಿ ನಿವಾಸಿ, ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು ಚಾಲಕ ನಿಖಿಲ್ ಕದಂ(24), ಬೈಕ್ನಲ್ಲಿದ್ದ ವೃದ್ಧೆ ಹನುಮವ್ವಾ ಚಿಕ್ಕಲಕಟ್ಟಿ ಮೃತ ದುರ್ದೈವಿಗಳು. ರುಕ್ಮಿಣಿ, ಕುಡಚಿ ಪೊಲೀಸ್ ಠಾಣೆಯ ಎಎಸ್ಐ ವೈ.ಎಂ.ಹಲಕಿರವರ ಪತ್ನಿ. ಬೆಳಗಾವಿ-ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್ನಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಬೆಳಗಾವಿಯತ್ತ ಬರುತ್ತಿತ್ತು.
ಈ ವೇಳೆ ಸ್ವಿಫ್ಟ್ ಡಿಸೈರ್ ಕಾರು ಮತ್ತು ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು, ಬೈಕ್ನಲ್ಲಿದ್ದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿದ್ದಾರೆ. ಅಪಘಾತದ ಸುದ್ದಿ ತಿಳಿದು ಎಎಸ್ಐ ವೈ.ಎಂ. ಹಳಕಿ ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಾಲಾ ಆವರಣದಲ್ಲಿನ ಮರ ಕಡಿಯುವಾಗ ಮರದ ರೆಂಬೆ ಬಿದ್ದು ವ್ಯಕ್ತಿ ಸಾವು
ಬೀದರ್: ಶಾಲಾ ಆವರಣದಲ್ಲಿನ ಮರ ಕಡಿಯುವಾಗ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದಿದೆ. ಹೊನ್ನಿಕೇರಿ ಗ್ರಾಮದ ಸಿದ್ಧಪ್ಪ (42) ಮೃತ ದುರ್ದೈವಿ. ಹೊನ್ನಿಕೇರಿ ಸರ್ಕಾರಿ ಮಾದರಿ ಶಾಲೆಯಲ್ಲಿ ಗಾಳಿಯಿಂದ ಶಾಲಾ ಆವರಣಲ್ಲಿನ ಮರದ ಸ್ವಲ್ಪ ಭಾಗ ನೆಲ್ಲಕ್ಕೆ ಬಿದ್ದಿತ್ತು. ಹೀಗಾಗಿ ಸಂಪೂರ್ಣ ಮರವನ್ನು ಕಡೆಯುತ್ತಿದ್ದಾಗ ರೆಂಬೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆಗೆ ಶವ ಸಾಗಿಸಲಾಗಿದೆ. ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಯಾಂಟರ್ ವಾಹನ ಮತ್ತು TVS ಎಕ್ಸೆಲ್ ನಡುವೆ ಡಿಕ್ಕಿ; ಇಬ್ಬರು ಸಾವು
ಮೈಸೂರು: ಕ್ಯಾಂಟರ್ ವಾಹನ ಮತ್ತು TVS ಎಕ್ಸೆಲ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಟ್ಟೆಹುಂಡಿ ಸಮೀಪ ನಡೆದಿದೆ. ಟಿವಿಎಸ್ ಎಕ್ಸೆಲ್ನಲ್ಲಿದ್ದ ತಂದೆ ನಾಗ(45), ಮಗ ಕಾರ್ತಿಕ್(15) ಮೃತ ದುರ್ದೈವಿಗಳು. ತಂದೆ ಮತ್ತು ಮಗ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಅವಘಡ ಸಂಭವಿಸಿದೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೊಟ್ಟಿಯಲ್ಲಿ ಬಿದ್ದು 11 ತಿಂಗಳ ಮಗು ಸಾವು
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿದೆ. ದೇವರಾಜ್-ಅನುಷಾ ದಂಪತಿಯ ಗಂಡು ಮಗು ಅಕ್ಷಯ್ (11) ಮೃತ ಬಾಲಕ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ