11 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಬೆಂಗಳೂರು ಮೂಲದ ಯುವಕ ಅರೆಸ್ಟ್
ಗೋವಾ ಪೊಲೀಸರು ಬೆಂಗಳೂರಿನ 23 ವರ್ಷದ ಯುವಕನನ್ನು ಗಾಂಜಾ ಸಾಗಾಟದ ಆರೋಪದ ಮೇಲೆ ಬಂಧಿಸಿದ್ದಾರೆ. ಯುವಕನ ಬಳಿ ಇದ್ದ 11.6 ಕೋಟಿ ರೂಪಾಯಿ ಮೌಲ್ಯದ 11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಇದು ಗೋವಾ ಪೊಲೀಸರ ಇತಿಹಾಸದಲ್ಲೇ ಅತಿ ದೊಡ್ಡ ಮಾದಕ ವಸ್ತು ಜಪ್ತಿಯಾಗಿದೆ. ಯುವಕ ನೇಪಾಳದಿಂದ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.

ಪಣಜಿ/ಬೆಂಗಳೂರು, ಮಾರ್ಚ್ 09: 11.6ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಸಾಗಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು (Bengaluru) ಮೂಲದ 23 ವರ್ಷದ ಯುವಕನನ್ನು ಗೋವಾ ಪೊಲೀಸರು (Goa Police) ಶನಿವಾರ (ಮಾರ್ಚ್.08) ಬಂಧಿಸಿದ್ದಾರೆ. ಯುವಕನ ಬಳಿ ಇದ್ದ 11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಗೋವಾ ಪೊಲೀಸರ ಪ್ರಕಾರ, ಮಾದಕ ದ್ರವ್ಯ ವಿರುದ್ಧ ನಡೆಸಿದ ಕಾರ್ಯಾಚರಣೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಡೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದು ಇದೇ ಮೊದಲಾಗಿದೆ.
ಯುವಕ ನೇಪಾಳದಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದನು. ಈತನ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಕಳೆದೊಂದು ತಿಂಗಳಿನಿಂದ ನಿಗಾ ಇಟ್ಟಿತ್ತು. ಮಾದಕ ದ್ಯವ್ಯ ತೆಗೆದುಕೊಂಡು ಗೋವಾಕ್ಕೆ ಬಂದಿದ್ದ ಯುವಕನ ಬಗ್ಗೆ ರಾಜ್ಯ ಗುಪ್ತರಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧರಿಸಿ, ಗುಯಿರಿಮ್‌ನಲ್ಲಿ ಯುವಕನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಮಾತನಾಡಿ, ಮಾದಕ ದ್ರವ್ಯ ವಿರುದ್ಧ ನಡೆಸಿದ್ದ ಕಾರ್ಯಾಚರಣೆ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ಮಾದಕ ದ್ರವ್ಯ ಜಪ್ತಿ ಇದಾಗಿದೆ. ಯುವಕನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಪ್ರಕರಣ ಸಂಬಂಧ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಸರ್ಕಾರವು ಮಾದಕ ದ್ರವ್ಯ ಸರಬರಾಜು ಮತ್ತು ಸೇವಿಸುವರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮಾದಕ ದ್ರವ್ಯ ಕಳ್ಳಸಾಗಣಿಕೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತು ಎನ್ಡಿಪಿಎಸ್ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಗೋವಾ ಪೊಲೀಸರು, ಅಪರಾಧ ವಿಭಾಗದ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು. ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಟ್ಟಾಗಿ ನಿಂತು ಸುರಕ್ಷಿತ, ಆರೋಗ್ಯಕರ ಮತ್ತು ಮಾದಕವನ್ನು ಮುಕ್ತ ಗೋವಾವನ್ನಾಗಿ ಮಾಡೋಣ ಎಂದು ಕರೆ ನೀಡಿದರು.
ರಾಜ್ಯದಲ್ಲಿನ ಮಾದಕ ವ್ಯಾಪಾರವನ್ನು ಮಟ್ಟ ಹಾಕಲು ಗೋವಾ ಪೊಲೀಸರು ‘ಆಪರೇಷನ್ ಪ್ರಹಾರ್‘ ಅನ್ನು ಪ್ರಾರಂಭಿಸಿದ್ದಾರೆ. 2025 ರ ಮೊದಲ ಎರಡು ತಿಂಗಳಲ್ಲಿ ಉತ್ತರ ಗೋವಾದಲ್ಲಿ 18 ಜನರನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಬಂಧಿತ 18 ಜನರಲ್ಲಿ 10 ಮಂದಿ ಗೋವಾದವರಲ್ಲ. ಏಳು ಮಂದಿ ಗೋವಾದವರು ಮತ್ತು ಓರ್ವ ವಿದೇಶಿಗ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 36 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಕಸ್ಟಮ್ಸ್
ಮಾದಕ ವಸ್ತು ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ 2024 ರಲ್ಲಿ ಗೋವಾದಲ್ಲಿ ಪೊಲೀಸರು ಒರ್ವ ವ್ಯಕ್ತಿಯನ್ನು ಬಂಧಿಸಿದ್ದರು. ಗೋವಾ ಪೊಲೀಸರು 2024 ರಲ್ಲಿ 10 ಕೋಟಿ ರೂ. ಮೌಲ್ಯದ 274 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. 188 ಜನರನ್ನು ಬಂಧಿಸಿದ್ದರು. ಈ 188 ಜನರಲ್ಲಿ 54 ಜನರು ಗೋವಾದವರು, 111 ಜನರು ಗೋವಾದವರಲ್ಲ ಮತ್ತು 23 ಜನರು ವಿದೇಶಿಗರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.