ಚಪಲಕ್ಕೆ ಬಿದ್ದವಳಿಂದ ಗಂಡನ ಕೊಲೆ: ಬೇತಮಂಗಲ, ವೈಟ್ಫೀಲ್ಡ್, ಕೋಗಿಲಹಳ್ಳಿ, ಚಿಂತಾಮಣಿ ಸುತ್ತು ಬಳಸಿ ನಡೆದಿದ್ದ ಕೊಲೆ ಕೇಸ್ ಬಹಿರಂಗ
ಚಪಲಕ್ಕೆ ಬಿದ್ದ ಹೆಣ್ಣು ಸುಂದರವಾಗಿದ್ದ ಸಂಸಾರವನ್ನು ಹೇಗೆ ಹಾಳು ಮಾಡಬಹುದು ಅನ್ನೋದಕ್ಕೆ ಇದೊಂದು ಜೀವಂತ ಸಾಕ್ಷಿ, ತಾನೇ ಮುಂದೆ ನಿಂತು ತನ್ನ ಗಂಡನನ್ನು ಕೊಲ್ಲಿಸಿ, ತನ್ನ ಸಂಸಾರಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು, ಕೊನೆಗೆ ತಾನೂ ಜೈಲುಪಾಲಾಗಿದ್ದು ಮಾತ್ರ ನಿಜಕ್ಕೂ ದುರಂತ.
ಆ ದಂಪತಿ ಹದಿನೈದು ವರ್ಷಗಳ ಹಿಂದೆ ಗ್ರಾಮದಲ್ಲಿ ಸರಿಯಾಗಿ ನೀರಿಲ್ಲದೆ ಮಳೆ ಬಾರದ ಹಿನ್ನೆಲೆ ವ್ಯವಸಾಯ ಮಾಡಲಾಗದೆ ದೂರದ ಬೆಂಗಳೂರು ಸೇರಿಕೊಂಡಿದ್ರು, ಬೆಂಗಳೂರಲ್ಲಿ ಒಂದು ಟೀ ಅಂಗಡಿ ಹಾಕಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದರು, ಆದರೆ ಇತ್ತೀಚೆಗೆ ಹೆಂಡತಿಯ ಪರಪುರುಷನೊಂದಿಗಿನ ಅಕ್ರಮ ಸಂಬಂಧ ತನ್ನ ಪತಿಯನ್ನು ಕೊಂದು ಹಾಕುವಂತೆ ಪ್ರೇರೇಪಿಸುತ್ತು.
ಅದು ಡಿಸೆಂಬರ್ 29 ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಕೋಗಿಲಹಳ್ಳಿ ಗ್ರಾಮದಿಂದ ಬೇತಮಂಗಲ ಪೊಲೀಸ್ ಠಾಣೆಗೆ ಸುನಂದ ಎಂಬ ಮಹಿಳೆಯೊಬ್ಬರು ತನ್ನ ಪತಿ ಶಂಕರ್ ರೆಡ್ಡಿ ಕಾಣೆಯಾಗಿದ್ದಾರೆಂದು ದೂರು ನೀಡಿದ್ದರು. ದೂರಿನ ಹಿನ್ನೆಲೆ ಬೇತಮಂಗಲ ಪೊಲೀಸರು ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಶಂಕರ್ ರೆಡ್ಡಿಯ ಸಂಬಂಧಿಕ ಬಾಬು ರೆಡ್ಡಿ ಎಂಬಾತ ಮತ್ತೊಂದು ದೂರು ನೀಡಿದ್ದರು.
ಶಂಕರ್ ರೆಡ್ಡಿ ಪತ್ನಿ ಸುನಂದ ಹಾಗೂ ಆಕೆಯ ಸ್ನೇಹಿತ ವೆಂಕಟೇಶ್ ಎಂಬುವರು ತನ್ನ ಸಂಬಂಧಿ ಶಂಕರ್ ರೆಡ್ಡಿ ಅವರನ್ನು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದ. ಈ ಎರಡು ದೂರನ್ನು ಸ್ವೀಕರಿಸಿದ್ದ ಬೇತಮಂಗಲ ಪೊಲೀಸರು ಕಳೆದ ಹತ್ತು ದಿನಗಳಿಂದ ಕಾಣೆಯಾದವನು ಜೀವಂತವಾಗಿದ್ದಾನಾ, ಇಲ್ವಾ? ಒಂದು ವೇಳೆ ಅವನು ಕೊಲೆಯಾಗಿದ್ದರೆ ಆತನ ಶವ ಎಲ್ಲಿದೆ ಅನ್ನೋದನ್ನು ಪೊಲೀಸರು ಹುಡುಕಾಡಿದರು. ಸುಮಾರು ಹತ್ತು ದಿನಗಳ ಕಾಲ ಹುಡುಕಾಟ ನಡೆಸಿದ ಪೊಲೀಸರಿಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಷ್ಟೇ ಅಲ್ಲದೆ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದ ಸುನಂದ ಪ್ರಿಯಕರ ವೆಂಕಟೇಶ್ ಕೂಡಾ ನಾಪತ್ತೆಯಾಗಿದ್ದ.
ಹಾಗಾಗಿ ಪೊಲೀಸರಿಗೆ ಇದೊಂದು ಪ್ರಕರಣ ಗೊಂದಲದ ಗೂಡಾಗಿತ್ತು. ಈ ವೇಳೆ ಜನವರಿ 6 ರಂದು ಇದ್ದಕ್ಕಿದಂತೆ ವೆಂಕಟೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಸುನಂದ ಪ್ರಿಯಕರ ವೆಂಕಟೇಶ್ನನ್ನು ಬಂಧಿಸಿ ವಿಚಾರಣೆ ಮಾಡಿದ ಪೊಲೀಸರಿಗೆ ಪ್ರಕರಣದ ಅಸಲಿಯತ್ತು ಒಂದೊಂದಾಗಿ ಬಯಲಾಗಿತ್ತು. ಅಲ್ಲದೆ ಶಂಕರ್ ರೆಡ್ಡಿಯೂ ಕೊಲೆಯಾಗಿರುವುದು ಖಚಿತವಾಗಿತ್ತು.
ಅಷ್ಟಕ್ಕೂ ಆಗಿದ್ದಾದ್ರು ಏನು ಅಂತ ನೋಡಿದ್ರೆ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಕೋಗಿಲಹಳ್ಳಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಂಕರ್ರೆಡ್ಡಿ ಹಾಗೂ ಸುನಂದ ದಂಪತಿ. ಸರಿಯಾಗಿ ಮಳೆ ಬೆಳೆ ಆಗುತ್ತಿಲ್ಲ ಎಂದು ಜೀವನ ನಡೆಸಲು ಕೋಗಿಲಹಳ್ಳಿ ತೊರೆದು ಅಲ್ಲಿಂದ ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ನಲ್ಲೂರಹಳ್ಳಿ ಬಳಿ ಟೀ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನೆಡೆಸುತ್ತಿದ್ದರು.
ಅಲ್ಲೇ ಪುಟ್ಟದೊಂದು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು, ಜೀವನ ತಕ್ಕಮಟ್ಟಿಗೆ ನಡೆದುಕೊಂಡು ಹೋಗುತ್ತಿತ್ತು,ಆದರೆ ಕೆಲವು ವರ್ಷಗಳ ಹಿಂದೆ ಅಲ್ಲೇ ಡ್ರೈವರ್ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಎಂಬಾತ ಶಂಕರ್ರೆಡ್ಡಿ ವಾಸವಿದ್ದ ಮನೆಯ ಬಳಿ ಬಾಡಿಗೆಗೆ ಬಂದಿದ್ದ, ವೆಂಕಟೇಶ್ಗೆ ಶಂಕರ್ರೆಡ್ಡಿ ಕುಟುಂಬದೊಂದಿಗೆ ಪರಿಚಯವಾಗಿತ್ತು ಅದೇ ಪರಿಚಯ ಸಲುಗೆಯಾಗಿ ಬೆಳೆದಿತ್ತು, ವೆಂಕಟೇಶ್ ಇವರ ಮನೆಗೆ ಬಂದು ಹೋಗುತ್ತಾ ಶಂಕರ್ರೆಡ್ಡಿ ಪತ್ನಿ ಸುನಂದಾ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.
ಇದನ್ನೂ ಓದಿ: ಹಾವೇರಿಯಲ್ಲಿ ನೈತಿಕ ಪೊಲೀಸ್ಗಿರಿ: ಲಾಡ್ಜ್ನಲ್ಲಿ ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿತ
ಆ ವಿಷಯ ಶಂಕರ್ರೆಡ್ಡಿಗೆ ತಿಳಿದು ಆತ ಬೆಂಗಳೂರು ಬಿಟ್ಟು ಮತ್ತೆ ಕೋಗಿಲಹಳ್ಳಿ ಗ್ರಾಮಕ್ಕೆ ವಾಪಸ್ಸಾಗಿದ್ದ, ಡಿಸೆಂಬರ್ 24 ರಂದು ಊರಿಗೆ ಬಂದಿದ್ದ. ಆದರೆ ಇದು ಸುನಂದಾಗೆ ಇಷ್ಟವಿರಲಿಲ್ಲ. ಹಾಗಾಗಿ ಇಬ್ಬರೂ ಸೇರಿ ಪ್ಲಾನ್ ಮಾಡಿ ಡಿಸೆಂಬರ್ 27 ರಂದು ವೆಂಕಟೇಶ್ ಶಂಕರ್ರೆಡ್ಡಿಯನ್ನು ಕರೆದುಕೊಂಡುಹೋಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚಾರ್ಲಹಳ್ಳಿ ಬಳಿ ಜಾಕ್ ರಾಡ್ನಿಂದ ಹೊಡೆದು ಕೊಲೆ ಮಾಡಿ ನಂತರ ಶವವನ್ನು ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂಹಳ್ಳಿ ಬಳಿಯ ದೊಡ್ಡ ಚರಂಡಿಯೊಂದಕ್ಕೆ ಬಿಸಾಡಿ ನಂತರ ತಲೆ ಮರೆಸಿಕೊಂಡಿದ್ದ. ಆದರೆ ಗ್ರಾಮದ ಜನರು ಹಾಗೂ ಶಂಕರ್ರೆಡ್ಡಿ ಸಂಬಂಧಿಕರ ಅನುಮಾನ ನಿಜವಾಗಿದ್ದು. ಶಂಕರ್ರೆಡ್ಡಿ ಅವರನ್ನು ಕೊಲೆ ಮಾಡಿದ ಪತ್ನಿ ಸುನಂದಾ ಹಾಗೂ ವೆಂಕಟೇಶ್ನನ್ನು ಬಂಧಿಸಿದ್ದಾರೆ.
ಒಟ್ಟಾರೆ ಚಪಲಕ್ಕೆ ಬಿದ್ದ ಹೆಣ್ಣು ಸುಂದರವಾಗಿದ್ದ ಸಂಸಾರವನ್ನು ಹೇಗೆ ಹಾಳು ಮಾಡಬಹುದು ಅನ್ನೋದಕ್ಕೆ ಇದೊಂದು ಜೀವಂತ ಸಾಕ್ಷಿ, ತಾನೇ ಮುಂದೆ ನಿಂತು ತನ್ನ ಗಂಡನನ್ನು ಕೊಲ್ಲಿಸಿ, ತನ್ನ ಸಂಸಾರಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು, ಕೊನೆಗೆ ತಾನೂ ಜೈಲುಪಾಲಾಗಿದ್ದು ಮಾತ್ರ ನಿಜಕ್ಕೂ ದುರಂತ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.