ಬೆಂಗಳೂರು: ತಾಯಿ, ಸಹೋದರನ ಕಣ್ಣುಮುಂದೆಯೇ ತಂದೆ ಕೊಂದ ಮಗ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2024 | 10:12 PM

ಕುಡಿತದ ಚಟಕ್ಕೆ ದಾಸನಾಗಿದ್ದ ಆತ ಹೆತ್ತ ತಂದೆಗೂ ಕುಡಿಯುವಂತೆ ಪೀಡಿಸುತ್ತಿದ್ದ. ನಿನ್ನೆ(ಅ.13) ರಾತ್ರಿ ಸಹ ತಮ್ಮನಿಗೆ ಹೇಳಿ ಎಣ್ಣೆ ತರಿಸಿದ್ದ ಅಸಾಮಿ, ಅಪ್ಪನಿಗೂ ಕುಡಿಸಿ ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಸಹೋದರನ ಕಣ್ಣ ಮುಂದೆಯೇ ತಂದೆಯ ಕತ್ತು ಸೀಳಿ ಕೊಂದು ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೆಂಗಳೂರು: ತಾಯಿ, ಸಹೋದರನ ಕಣ್ಣುಮುಂದೆಯೇ ತಂದೆ ಕೊಂದ ಮಗ
ತಂದೆ ಕೊಂದ ಮಗ
Follow us on

ಬೆಂಗಳೂರು, ಅ.13: ಹೆತ್ತ ತಾಯಿ ಹಾಗೂ ಸಹೋದರನ ಕಣ್ಣುಮುಂದೆಯೇ ತಂದೆಯನ್ನ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೇಲಾಯುಧನ್(76),ಇಳಿವಯಸ್ಸಿನಲ್ಲಿ ನೆರಳಾಗಬೇಕಿದ್ದ ಮಗನಿಂದಲೇ ಬರ್ಬರವಾಗಿ ಹತ್ಯೆಯಾದ ನತದೃಷ್ಟ ತಂದೆ. ಮೂಲತಃ ಕೇರಳದ ಏರಿಮಲೈ ವಾಸಿಯಾದ ಈತ ಬೆಂಗಳೂರಿನ(Bengaluru) ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದು, ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮಗ ವಿನೋದ್ ಕುಮಾರ್ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಚಡ್ಡಿ ಬದಲು ಪಂಚೆ ತೋಡು ಎಂದಿದ್ದಕ್ಕೆ ತಂದೆಯ ಕುತ್ತು ಸೀಳಿದ ಮಗ

ತಮ್ಮ ವಿಫುಲ್ ಕುಮಾರ್​ಗೆ 300 ರೂಪಾಯಿ ಹಣ ನೀಡಿ ಎಣ್ಣೆ ತರಿಸಿದ ವಿನೋದ್, ಎಂದಿನಂತೆ ತಂದೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ. ಬರಿ ಚಡ್ಡಿ ಧರಿಸಿ ಓಡಾಡುತ್ತಿರುವುದನ್ನು ಕಂಡು ಪಂಚೆ ಉಟ್ಟುಕೊಳ್ಳುವಂತೆ ಹೇಳಿದಕ್ಕೆ ವ್ಯಾಘ್ರಗೊಂಡ ಮಗ ವಿನೋದ್, ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಗೋಡೆಗೆ ತಲೆಯನ್ನು ಗುದ್ದಿ ಕೆಳಗೆ ಬೀಳಿಸಿದ್ದಾನೆ. ಅಷ್ಟಕ್ಕೇ ಬಿಡದೆ ಕಾಲಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆ; ಪತಿಯೇ ಕೊಲೆ ಮಾಡಿದನಾ?

ಇನ್ನು ಆರೋಪಿ ವಿನೋದ್ ಕುಮಾರ್ ಕುಡಿತದ ಚಟಕ್ಕೆ ದಾಸನಾಗಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನು. ಈ ಹಿಂದೆ ಕೂಡ ತಂದೆ ವೇಲಾಯುಧನ್ ಮತ್ತು ತಮ್ಮ ವಿಫುಲ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದು, ರಕ್ತ ಗಾಯಗಳಾಗಿತ್ತು. ಕೆಲಸಕ್ಕೆ ಹೋಗದೆ ಸದಾ ಮನೆಯಲ್ಲಿಯೇ ಇರುತ್ತಿದ್ದ ವಿನೋದ್, ತಂದೆ ಪೆನ್ಷನ್ ಹಣವನ್ನು ಬೆದರಿಸಿ ಕಸಿಯುತ್ತಿದ್ದನು. ತಾಯಿ ಕ್ಯಾನ್ಸರ್ ರೋಗಿ, ತಮ್ಮ ಮಾನಸಿಕವಾಗಿ ದುರ್ಬಲನಾಗಿದ್ದು, ತಂದೆಯ ಪೆನ್ಷನ್ ಹಣದಿಂದ ಹೇಗೋ ಸಂಸಾರ ಸಾಗುತ್ತಿತ್ತು. ಆದ್ರೆ, ಈಗ ಮನೆಗೆ ಅಧಾರವಾಗಿದ್ದ ತಂದೆ ಸಾವನ್ನಪ್ಪಿದ್ದು, ಮಗ ಜೈಲು ಸೇರಿದ್ದಾನೆ. ಕ್ಯಾನ್ಸರ್ ಪೀಡಿತ ತಾಯಿಯನ್ನು ಮಾನಸಿಕವಾಗಿ ದುರ್ಬಲನಾಗಿರುವ ಮಗ ನೋಡಿಕೊಳ್ಳಬೇಕಿದೆ.

ಒಟ್ಟಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಳಿವಯಸ್ಸಿನ ತಂದೆಯನ್ನು ಕೊಂದು ಮಗ ಜೈಲು ಸೇರಿದ್ದು, ಕ್ಯಾನ್ಸರ್ ಪೀಡಿತ ತಾಯಿ ಮತ್ತು ಮಾನಸಿಕವಾಗಿ ದುರ್ಬಲನಾಗಿರುವ ಸಹೋದರನಿಗೆ ದಿಕ್ಕು ತೋಚದಂತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ