ಅಪ್ಪನ ಪ್ರಾಣಕ್ಕೆ ಕುತ್ತು ತಂದ ಮಗನ ಪ್ರೇಮ ವಿವಾಹ! ಪ್ರೇಮ ದ್ವೇಷ -ಆಸ್ತಿ ಕಲಹಕ್ಕೆ ಬಿತ್ತು ಉದ್ಯಮಿಯ ಹೆಣ
ಮಲ್ಲಿಕಾರ್ಜುನನ ಕೊಲೆಗೆ ಶ್ವೇತಾಳ ಸಹೋದರ, ಸೇಡಂ ನಿವಾಸಿಗಳಾಗಿದ್ದ ವಿಜಯಕುಮಾರ್, ಅವಿನಾಶ್, ಕಿರಣ್ ಅನ್ನೋರಿಗೆ 10 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದನಂತೆ. ಅಡ್ವಾನ್ಸ್ ಆಗಿ ಐದು ಲಕ್ಷ ಹಣ ಕೂಡಾ ನೀಡಿದ್ದನಂತೆ. ಸುಪಾರಿ ಪಡೆದಿದ್ದ ಅವಿನಾಶ್, ಕಿರಣ್, ವಿಜಯಕುಮಾರ್, ನವಂಬರ್ 14 ರಂದು, ರಾತ್ರಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಹೊರಗೆ ಬಂದಿದ್ದ ಮಲ್ಲಿಕಾರ್ಜುನನನ್ನು ಕೊಲೆ ಮಾಡಿದ್ದರು.
ಕಲಬುರಗಿ: ಅನೇಕ ಸಂದರ್ಭಗಳಲ್ಲಿ ಮಕ್ಕಳಿಂದ ಹೆತ್ತವರ ಹೆಸರು, ಕೀರ್ತಿ ಹೆಚ್ಚಾಗುತ್ತದೆ. ಅನೇಕ ಸಲ ಮಕ್ಕಳು ಮಾಡೋ ಕೆಲಸಗಳಿಂದ ಹೆತ್ತವರ ಜೀವ ಕೂಡಾ ಹೋಗುತ್ತದೆ. ಕಲಬುರಗಿ (Kalaburagi) ಜಿಲ್ಲೆಯಲ್ಲಿ ಕೂಡಾ ಉದ್ಯಮಿಯೋರ್ವರ ಕೊಲೆಗೆ (murder) ಮಗನ ಪ್ರೇಮ ವಿವಾಹವೇ ಕಾರಣವಾಗಿದೆ. ಇದು ಅಚ್ಚರಿಯಾದರು ಕೂಡಾ ಸತ್ಯ.
ಇದೇ ನವೆಂಬರ್ 14 ರಂದು ಮಧ್ಯರಾತ್ರಿ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ (sedam police) ಉದ್ಯಮಿಯೋರ್ವನ ಬರ್ಬರ ಕೊಲಯಾಗಿತ್ತು. ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದ ಮುಂದಿರುವ ರಸ್ತೆಯಲ್ಲಿನ ಎಲೆಕ್ಟ್ರಾನಿಕ್ ಅಂಗಡಿಯ ಹಿಂಭಾಗ, ದುಷ್ಕರ್ಮಿಗಳು ಉದ್ಯಮಿಯ ಮರ್ಮಾಂಗಕ್ಕೆ ಇರಿದು, ಕತ್ತು ಹಿಸುಕಿ ಕೊಲೆ ಮಾಡಿದ್ದರು. ಅಂದು ಕೊಲೆಯಾಗಿದ್ದು, ಸೇಡಂ ತಾಲೂಕಿನಾದ್ಯಂತ ಉತ್ತಮ ಹೆಸರು ಹೊಂದಿದ್ದ, ಕೋಲಿ ಸಮಾಜದ ಮುಖಂಡ, ಉದ್ದಿಮೆದಾರ, ರಾಜಕೀಯ ಮುಖಂಡ, ಮಲ್ಲಿಕಾರ್ಜುನ ಮುತ್ಯಾಲ್.
ಸೇಡಂ ಪಟ್ಟಣದ ನಿವಾಸಿಯಾಗಿದ್ದ 64 ವರ್ಷದ ಮಲ್ಲಿಕಾರ್ಜುನ ಮುತ್ಯಾಲ್, ನವೆಂಬರ್ 14 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ, ತನ್ನ ಅಂಗಡಿಯಲ್ಲಿ ಮಲಗಿದ್ದರು. ಆದರೆ ಮುಂಜಾನೆ ಮನೆಗೆ ಬಾರದೇ ಇದ್ದಾಗ, ಮಲ್ಲಿಕಾರ್ಜುನ ಮುತ್ಯಾಲ್ ಪುತ್ರರು ಅಂಗಡಿಗೆ ಹೋಗಿ ನೋಡಿದ್ದರು. ಆದ್ರೆ ಅಂಗಡಿಯ ಹಿಂಭಾಗದಲ್ಲಿ ಮಲ್ಲಿಕಾರ್ಜುನ ಶವವಾಗಿ ಬಿದ್ದಿದ್ದರು. ಮಲ್ಲಿಕಾರ್ಜುನ ಮುತ್ಯಾಲ ಬರ್ಬರ ಕೊಲೆ ಕಂಡು, ಇಡೀ ಪಟ್ಟಣದ ಜನರು ಶಾಕ್ ಆಗಿದ್ದರು.
ಹೀಗಾಗಿ ಕೊಲೆಯಾದ ಸ್ಥಳದಲ್ಲಿ ಸಾವಿರಾರು ಜನರು ಅಂದು ಸೇರಿದ್ದರು. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸೇಡಂ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊಲೆಗೆ ಕಾರಣವೇನು? ಕೊಲೆ ಮಾಡಿದ ಆರೋಪಿಗಳ ಯಾರು? ಅನ್ನೋದನ್ನು ಕಳೆದ ಎರಡು ವಾರಗಳಿಂದ ಪತ್ತೆ ಮಾಡುತ್ತಿದ್ದ ಪೊಲೀಸರು ಕೊನೆಗೂ ಆರೋಪಿಗಳ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಲ್ಲಿಕಾರ್ಜುನ ಕೊಲೆ ಆರೋಪದ ಮೇಲೆ ಇದೀಗ ಇದೇ ಸೇಡಂ ಪಟ್ಟಣದ ನಿವಾಸಿಗಳಾಗಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಮಲ್ಲಿಕಾರ್ಜುನ ಮುತ್ಯಾಲ್ ಕೊಲೆಗೆ ಕಾರಣವಾಗಿದ್ದು, ಆತನ ಪುತ್ರನ ಪ್ರೇಮ ವಿವಾಹ ಮತ್ತು ಆಸ್ತಿ ಎಂಬುದು ಕಹಿ ವಾಸ್ತವ.
ಪುತ್ರನ ಪ್ರೇಮ ವಿವಾಹ, ಆಸ್ತಿಯ ದ್ವೇಷಕ್ಕೆ ಬಿತ್ತು ಉದ್ಯಮಿಯ ಹೆಣ
ಇನ್ನು ಮಲ್ಲಿಕಾರ್ಜನನ ಕೊಲೆಗೆ ಮಗನ ಪ್ರೇಮವೇ ಕಾರಣವಾಗಿದೆ. ಮಲ್ಲಿಕಾರ್ಜುನ ಪುತ್ರ ಶ್ರೀನಿವಾಸ್ ಸೇಡಂ ಪಟ್ಟಣದ ನಿವಾಸಿಯಾಗಿದ್ದ ಶ್ವೇತಾ ಅನ್ನೋ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಇನ್ನು ಶ್ವೇತಾಳ ತಂದೆ ಸಂಗಣ್ಣ, ಶ್ರೀನಿವಾಸ ತಂದೆ ಮಲ್ಲಿಕಾರ್ಜುನ ಆತ್ಮೀಯ ಸ್ನೇಹಿತರಾಗಿದ್ದರಂತೆ. ಆದರೆ ಮಗಳು ಸ್ನೇಹಿತನ ಮಗ ಶ್ರೀನಿವಾಸನನ್ನು ಪ್ರೀತಿಸುತ್ತಿದ್ದ ವಿಷಯ ಕೇಳಿ ಶ್ವೇತಾಳ ತಂದೆ ಸಂಗಣ್ಣ, ಮಲ್ಲಿಕಾರ್ಜುನ ಸ್ನೇಹ ಬಿಟ್ಟಿದ್ದ. ತನ್ನ ಮಗಳ ತಂಟೆಗೆ ಬರದಂತೆ ಎಚ್ಚರಿಕೆ ಕೂಡಾ ಶ್ರೀನಿವಾಸ್ ಗೆ ನೀಡಿದ್ದನಂತೆ. ಇದಕ್ಕೆ ಕಾರಣ, ಎರಡೂ ಕುಟುಂಬಗಳ ಜಾತಿ ಬೇರೆ ಬೇರೆಯಾಗಿತ್ತು.
ಸೊಸೆಯ ಆಸ್ತಿ ಮೇಲೆ ಕಣ್ಣು ಹಾಕಿದ್ದ ಮಲ್ಲಿಕಾರ್ಜುನ
ಉದ್ಯಮಿ ಮಲ್ಲಿಕಾರ್ಜುನರ ಪುತ್ರ ಶ್ರೀನಿವಾಸ ಮತ್ತು ಶ್ವೇತಾ, ವರ್ಷದ ಹಿಂದೆ ಮದುವೆಯಾಗಿದ್ದರು. ಇನ್ನು ಶ್ವೇತಾ ಮತ್ತು ಶ್ರೀನಿವಾಸರದ್ದು ಅಂತರ್ಜಾತಿ ವಿವಾಹ. ಇದೇ ಕಾರಣಕ್ಕೆ ಶ್ವೇತಾ ಹೆತ್ತವರು ಮದುವೆಗೆ ಒಪ್ಪಿರಲಿಲ್ಲವಂತೆ. ಇನ್ನು ಶ್ವೇತಾಳನ್ನು ಶ್ರೀನಿವಾಸ ಮದುವೆಯಾದ ನಂತರ, ಮಲ್ಲಿಕಾರ್ಜುನ ಸುಮ್ಮನಿರದೇ, ಶ್ವೇತಾಳಿಗೆ ಬರಬೇಕಾದ ಆಸ್ತಿಯನ್ನು ಪಡೆಯುತ್ತೇನೆ ಅಂತ ಅನೇಕರ ಮುಂದೆ ಹೇಳಿದ್ದನಂತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದು ಶ್ವೇತಾಳ ಹೆತ್ತವರು ಮತ್ತು ಆಕೆಯ ಸಹೋದರನ ಸಿಟ್ಟಿಗೆ ಕಾರಣವಾಗಿತ್ತು. ತಮ್ಮ ಕುಟುಂಬದವರ ಒಪ್ಪಿಗೆ ಇಲ್ಲದೇ ಇದ್ದರೂ, ಶ್ವೇತಾಳನ್ನು ಶ್ರೀನಿವಾಸ ಮದುವೆ ಮಾಡಿಕೊಂಡಿದ್ದಾನೆ. ಇದೀಗ ಆತನ ತಂದೆ ತಮ್ಮ ಕುಟುಂಬದ ಆಸ್ತಿ ಮೇಲೆ ಕಣ್ಣು ಹಾಕಿದ್ದಾನೆ. ಹೀಗೆಯೇ ಬಿಟ್ಟರೆ ನಮ್ಮ ಆಸ್ತಿ ನುಂಗುತ್ತಾರೆ ಅಂತ ತಿಳಿದು, ಶ್ವೇತಾಳ ಸಹೋದರ ಲಿಂಗರಾಜ್ ಮಾದೇನವರ್, ಮಲ್ಲಿಕಾರ್ಜುನನ ಕೊಲೆಗೆ ಮುಂದಾಗಿದ್ದ.
ಉದ್ಯಮಿ ಹತ್ಯೆಗೆ ಹತ್ತು ಲಕ್ಷ ಸುಪಾರಿ ನೀಡಿದ್ದ ಸಹೋದರ
ಹೌದು ಮಲ್ಲಿಕಾರ್ಜುನ ಕೊಲೆಗೆ ಶ್ವೇತಾಳ ಸಹೋದರ, ಸೇಡಂ ನಿವಾಸಿಗಳಾಗಿದ್ದ ವಿಜಯಕುಮಾರ್, ಅವಿನಾಶ್, ಕಿರಣ್ ಅನ್ನೋರಿಗೆ 10 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದನಂತೆ. ಅಡ್ವಾನ್ಸ್ ಆಗಿ ಐದು ಲಕ್ಷ ಹಣ ಕೂಡಾ ನೀಡಿದ್ದನಂತೆ. ಸುಪಾರಿ ಪಡೆದಿದ್ದ ಅವಿನಾಶ್, ಕಿರಣ್, ವಿಜಯಕುಮಾರ್, ನವಂಬರ್ 14 ರಂದು, ರಾತ್ರಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಹೊರಗೆ ಬಂದಿದ್ದ ಮಲ್ಲಿಕಾರ್ಜುನನನ್ನು ಕೊಲೆ ಮಾಡಿದ್ದರು. ಕೊಲೆಯಾದ ನಂತರ, ಆರೋಪಿಗಳು 10 ಕಿಲೋ ಮೀಟರ್ ನಡೆದುಕೊಂಡೇ ಮಳಖೇಡವರಗೆ ಬಂದಿದ್ದರು. ಅಲ್ಲಿಂದ ಲಾರಿಯಲ್ಲಿ ಹತ್ತಿ ಪುಣೆಗೆ ಹೋಗಿದ್ದರು.
ಇನ್ನು ಕೊಲೆಯನ್ನು ಯಾರು ಮಾಡಿದ್ದಾರೆ ಅಂತ ಪತ್ತೆ ಮಾಡುವುದೇ ಪೊಲೀಸರಿಗೆ ಸವಾಲಾಗಿತ್ತು. ಆದರೆ ಮಲ್ಲಿಕಾರ್ಜುನ ಕುಟುಂಬದವರನ್ನು ವಿಚಾರಿಸಿದಾಗ, ಮಲ್ಲಿಕಾರ್ಜುನ ಪುತ್ರ ಶ್ರೀನಿವಾಸನ ಪ್ರೇಮ ವಿವಾಹದ ಮಾಹಿತಿ ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಕೆಲವರ ಕಾಲ್ ಹಿಸ್ಟರಿ ಪರಿಶೀಲಿಸಿದಾಗ ಹತ್ಯೆಯ ನಿಗೂಢತೆ ಗೊತ್ತಾಗಿದೆ. ಶ್ವೇತಾಳ ಸಹೋದರನೇ ಸುಪಾರಿ ನೀಡಿ ಮಲ್ಲಿಕಾರ್ಜುನನ ಕೊಲೆ ಮಾಡಿಸಿದ್ದು ಎಂಬುದು ಈಗ ಬಟಾಬಯಲಾಗಿದೆ. (ವರದಿ: ಸಂಜಯ್ ಚಿಕ್ಕಮಠ, ಟಿವಿ 9, ಕಲಬುರಗಿ)
Also Read: ಖತರ್ನಾಕ್ ಮರ್ಡರ್ ಸ್ಟೋರಿ! ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಕರೆಸಿಕೊಂಡಿದ್ದ ಪ್ರೇಯಸಿ ಮಾಡಿದ್ದು ಏನು ಗೊತ್ತಾ?
Also Read: Hassan: ಜನರಲ್ಲಿ ಹೆಚ್ಚಾಗ್ತಿದೆ ಶ್ವಾನ ಪ್ರೀತಿ, ಅದಕ್ಕೆ ಹಾಸನದಲ್ಲಿ ನಡೆದ ಈ ಡಾಗ್ ಷೋ ಸಾಕ್ಷಿ! ಫೋಟೊ ಗ್ಯಾಲರಿ
Published On - 6:05 pm, Mon, 28 November 22