
ಕೆಡುಕು ಮನದವನಿಗೆ ಸತಿಯಾಗಬೇಡ , ಒಡುಕು ಮನಕೆ ರತಿಯಾಗಬೇಡ…ಕುರುಡು ಪ್ರೀತಿಗೆ ಬಿಂಬವಾಗಬೇಡ…ಯಾರೋ ಬರೆದ ಈ ಸಾಲುಗಳು ದೂರದ ಇಂಗ್ಲೆಂಡ್ನಲ್ಲಿರುವ ಜೈಲರ್ಗೆ ಹೇಳಿ ಮಾಡಿಸಿದಂತಿದೆ. ಏಕೆಂದರೆ ಅಪರಾಧ ಮಾಡಿ ಜೈಲು ಸೇರಿದ್ದ ಕೈದಿಯನ್ನೇ ಪ್ರೀತಿಸಿ ಇದೀಗ ಅದೇ ಜೈಲಿನಲ್ಲಿಆಕೆ ಕೂಡ ಕೈದಿಯಾಗಿದ್ದಾಳೆ. ಲಂಡನ್ ಡರ್ಬಿ ಕ್ರೌನ್ ಜೈಲಿನಲ್ಲಿ ಇಂತಹದೊಂದು ಕತೂಹಲಕಾರಿ ಪ್ರಕರಣ ನಡೆದಿದೆ.
ಮಾರ್ಕಸ್ ಸೊಲೊಮನ್ ಎಂಬ ವ್ಯಕ್ತಿಯು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಜೈಲು ಪಾಲಾಗಿದ್ದ. ಹೀಗೆ ನಾಲ್ಕು ಗೋಡೆಗಳ ನಡುವೆ ಬಂಧಿತನಾಗಿದ್ದ ಕೈದಿಯ ಮೇಲೆ ಅದೇ ಕಾರಾಗೃಹದ ಜೈಲರ್ ಎಮ್ಮಾ ಜಾನ್ಸನ್ ಆತ್ಮೀಯತೆ ಬೆಳೆಸಿಕೊಂಡಿದ್ದಳು.
ಇಬ್ಬರ ನಡುವಣ ಮಾತುಕತೆ ಆ ಬಳಿಕ ಸ್ನೇಹವಾಗಿ, ನಂತರ ಪ್ರೇಮವಾಗಿ, ಇದಾದ ಬಳಿಕ ಕರುಡು ಪ್ರೀತಿಯಾಗಿ ಬದಲಾಗಿದೆ. ಅಷ್ಟೇ ಆಗಿದ್ರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಬದಲಾಗಿ ಎಮ್ಮಾ ಜಾನ್ಸನ್ ತನ್ನ ಪ್ರಿಯಕರನಿಗೆ ಐಫೋನ್ ಮೊಬೈಲ್ ಅನ್ನು ಕೂಡ ಗಿಫ್ಟ್ ಆಗಿ ನೀಡಿದ್ದಾಳೆ. ಇದನ್ನು ಬಳಸಿ ಮಾರ್ಕಸ್ ಜೈಲಿನಿಂದಲೇ ತನ್ನ ಅವ್ಯವಹಾರ ಮುಂದುವರೆಸಿದ್ದ.
ಅಷ್ಟೇ ಯಾಕೆ ಜೈಲರ್ ಪ್ರಿಯತಮೆಯ ನೆರವಿನಿಂದ ಜೈಲಿನಲ್ಲೇ ಮಾರ್ಕಸ್ ಐಫೋನ್ ಮಾರಾಟವನ್ನು ಕೂಡ ಪ್ರಾರಂಭಿಸಿದ್ದ. ಆದರೆ ಯಾವತ್ತೂ ಸಿಕ್ಕಿ ಬಿದ್ದಿರಲಿಲ್ಲ. ಇದಕ್ಕೂ ನೆರವಾಗಿದ್ದು ಎಮ್ಮಾ ಜಾನ್ಸನ್ ಎಂಬುದು ಇಲ್ಲಿ ವಿಶೇಷ. ಅಂದರೆ ಹಿರಿಯ ಅಧಿಕಾರಿ ಜೈಲಿನಲ್ಲಿ ತಪಾಸಣೆಗೆ ಹೋಗುವ ಸಮಯದಲ್ಲಿ ಎಮ್ಮಾ ಜಾನ್ಸನ್ ತನ್ನ ಗೆಳೆಯನಿಗೆ ಮಾಹಿತಿ ರವಾನಿಸುತ್ತಿದ್ದಳು. ಅಲ್ಲದೆ ಮೊಬೈಲ್ಗಳನ್ನು ಎಲ್ಲಿ ಬಚ್ಚಿಡಬೇಕೆಂದು ತಿಳಿಸುತ್ತಿದ್ದಳು. ಹೀಗಾಗಿ ಮಾರ್ಕಸ್ ಮತ್ತು ಇತರೆ ಕೈದಿಗಳು ಸಿಕ್ಕಿ ಬಿದ್ದಿರಲಿಲ್ಲ.
ಇದಾಗ್ಯೂ ಜೈಲಿನೊಳಗೆ ನಡೆಯುತ್ತಿದ್ದ ಕಳ್ಳ-ಪೊಲೀಸ್ ಆಟದ ಬಗ್ಗೆ ಹಿರಿಯ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ ಮಾರ್ಕಸ್ ಹಾಗೂ ಎಮ್ಮಾ ಮೇಲೆ ಕೆಲ ಪೊಲೀಸರು ವಿಶೇಷ ಕಣ್ಣಿಟ್ಟಿದ್ದರು. ಅದರಂತೆ ಇದೀಗ ಎಮ್ಮಾ ಜಾನ್ಸನ್ಗೆ ಕೈದಿಯೊಂದಿಗೆ ಸಂಬಂಧ ಬಹಿರಂಗವಾಗಿದೆ. ಹೀಗಾಗಿ ಇಬ್ಬರನ್ನೂ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಡೆದ ಘಟನೆಗಳನ್ನು ಬಾಯಿಬಿಟ್ಟಿದ್ದಾರೆ.
ಅದರಂತೆ ಪ್ರಕರಣ ದಾಖಲಿಸಿ ಜೈಲರ್ನನ್ನೇ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಡರ್ಬಿ ಕ್ರೌನ್ ಕೋರ್ಟ್ ಆಕೆಯನ್ನು ತಪಿತಸ್ಥಳೆಂದು ಪರಿಗಣಿಸಿದೆ. ಅಷ್ಟೇ ಅಲ್ಲದೆ ಕೈದಿಯನ್ನು ಪ್ರೀತಿಸುವುದರಲ್ಲಿ ತಪ್ಪೇನಿಲ್ಲ. ಆದಾಗ್ಯೂ, ಜೈಲು ಸೂಪರಿಂಟೆಂಡೆಂಟ್ ತನ್ನ ಕೆಲಸದ ಮಹತ್ವವನ್ನು ಮರೆತಿದ್ದಾರೆ. ಅಲ್ಲದೆ ಕೈದಿಗಳಿಗೆ ಮೊಬೈಲ್ ಫೋನ್ಗಳನ್ನು ಬಳಸಲು ಅವಕಾಶ ನೀಡಿದ್ದಾರೆ. ಹೀಗಾಗಿ ಎಮ್ಮಾ ಜಾನ್ಸನ್ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಕೋರ್ಟ್ ತಿಳಿಸಿದೆ.
ಇದೀಗ ಕೆಲಸವನ್ನು ಕಳೆದುಕೊಂಡಿರುವ ಎಮ್ಮಾ ಜಾನ್ಸನ್ ಜೈಲು ಪಾಲಾಗಿದ್ದಾರೆ. ಇಲ್ಲಿ ವಿಶೇಷ ಎಂದರೆ ಮಾರ್ಕಸ್ ಸೊಲೊಮನ್ಗೆ 13 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರೆ, ಆತನ ಜೈಲರ್ ಪ್ರಿಯತಮೆ ಎಮ್ಮಾ ಜಾನ್ಸನ್ಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಒಟ್ಟಿನಲ್ಲಿ ತನ್ನ ಕೆಲಸದ ಮಹತ್ವವನ್ನು ಮರೆತ ಜೈಲರ್ ತಾನು ಕೆಲಸ ಮಾಡುತ್ತಿದ್ದ ಕಾರಾಗೃಹದಲ್ಲೇ ಜೈಲು ಪಾಲಾಗಿರುವುದು ಮಾತ್ರ ವಿಪರ್ಯಾಸ.