ಕೋಲಾರ: ಪ್ರೇಮಿಗಳ ದಿನವೇ ಪ್ರೀತಿಸಿದವಳ ಬರ್ಬರವಾಗಿ ಹತ್ಯೆ ಮಾಡಿದ ಗಂಡ
ಅವರಿಬ್ಬರು ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಕೋಲಾರದ ಕೆಜಿಎಫ್ ನಗರದಲ್ಲಿ ವಾಸವಿದ್ದರು. ಇವರಿಗೆ ಮುದ್ದಾದ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ, ಚಪಲಚೆನ್ನಿಗರಾಯ ಗಂಡ, ಹೆಂಡತಿಯನ್ನ ಬಿಟ್ಟು ಅವಳಿಂದೆ, ಇವಳಿಂದೆ ಓಡಾಡಿಕೊಂಡು, ಹೆಂಡತಿಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದ. ಅಷ್ಟೇ ಅಲ್ಲದೆ ವರದಕ್ಷಿಣೆ ಕೊಡು ಎಂದು ಪೀಡಿಸುತ್ತಿದ್ದ ಗಂಡನಿಂದ ನೊಂದು ಪೊಲೀಸ್ ಠಾಣೆಗೆ ದೂರು ನೀಡಿದ ಹೆಂಡತಿಯನ್ನ ಪ್ರೇಮಿಗಳ ದಿನವೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಕೋಲಾರ, ಫೆ.15: ಗಂಡನ ವಿರುದ್ದ ಹೆಂಡತಿ ವರದಕ್ಷಿಣೆ ಕಿರುಕುಳ ದೂರು ನೀಡಿದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೆಜಿಎಫ್(KGF)ನಲ್ಲಿ ನಡೆದಿದೆ. ‘ಕಳೆದ ಆರು ವರ್ಷಗಳ ಹಿಂದೆ ಕೆಜಿಎಫ್ನ ಸಂಜಯ್ಗಾಂಧಿ ನಗರದ ಪವಿತ್ರ ಹಾಗೂ ಕೋರಮಂಡಲ್ ಏರಿಯಾದ ಲೋಕೇಶ್ ಎಂಬುವವರು ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಜೊತೆಗೆ ಇಬ್ಬರು ಮಕ್ಕಳು ಕೂಡ ಇದ್ದರು. ಹೀಗೆ ಸಂಸಾರ ನಡೆಯಬೇಕಾದರೆ ಕಳೆದ ಕೆಲವು ವರ್ಷಗಳಿಂದ ಪವಿತ್ರ ಪತಿ ಲೋಕೇಶ್, ಹೆಂಡತಿಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ. ಹಣಕ್ಕಾಗಿ ಹೆಂಡತಿ ಪವಿತ್ರಾ ಮೇಲೆ ಹಲ್ಲೆ ಮಾಡೋದು, ಹಣ ತರದೆ ಇದ್ದಾಗ ತನ್ನ ತಾಯಿಯ ಮನೆಗೆ ಕಳಿಸುವುದು ಮಾಡುತ್ತಿದ್ದ.
ಬೇರೆ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಗಂಡ
ಇನ್ನು ಲೋಕೇಶ್ ಮಾತ್ರ ಬೇರೆ ಬೇರೆ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಜೊತೆಗೆ ಅವರ ಜೊತೆಗಿನ ಪೋಟೋಗಳನ್ನು ತನ್ನ ಹೆಂಡತಿಗೆ ಹಾಕಿ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಪವಿತ್ರ, ಕಳೆದ ಎರಡು ವರ್ಷಗಳ ಹಿಂದೆ ಉರಿಗಾಂ ಪೊಲೀಸ್ ಠಾಣೆಗೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಳು. ಅದಾದ ಮೇಲೆ ಇಬ್ಬರೂ ಬೇರೆ ಬೇರೆಯಾಗಿದ್ದರು. ಆದರೂ ಕೂಡ ಅವನ ಕಿರುಕುಳ ಮಾತ್ರ ತಪ್ಪಿರಲಿಲ್ಲ. ಇದರಿಂದ ಕಳೆದ ವಾರವಷ್ಟೇ ಪವಿತ್ರ, ಲೋಕೇಶ್ ವಿರುದ್ದ ಉರಿಗಾಂ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಹಿನ್ನೆಲೆ ಅಲ್ಲಿನ ಪೊಲೀಸರು ಲೋಕೇಶ್ನನ್ನು ಕರೆದು ವಾರ್ನ್ ಮಾಡಿ ಕಳಿಸಿದ್ದರು. ಹೀಗಿರುವಾಗಲೇ ನಿನ್ನೆ(ಫೆ.14) ರಾತ್ರಿ ಪವಿತ್ರ, ಲೋಕೇಶ್ ಮನೆಯಲ್ಲಿದ್ದ ತನ್ನ ಮೊದಲನೆ ಮಗನನ್ನು ಮಾತನಾಡಿಕೊಂಡು ಬರುಲು ಕೋರಮಂಡಲ್ ಏರಿಯಾಗೆ ಹೋಗಿದ್ದಾಳೆ. ಈ ವೇಳೆ ಕೋರಮಂಡಲ್ ಬಳಿ ಇರುವ ನಾರ್ಥ್ ಟ್ಯಾನ್ ಬ್ಲಾಕ್ ಮೈದಾನದಲ್ಲಿ ಲೋಕೇಶ್ ಪವಿತ್ರಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ.
ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಿಗಾಂ ಪೊಲೀಸರು, ವರದಕ್ಷಿಣೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ವರದಕ್ಷಿಣೆ ಕಿರುಕಳ ಹಾಗೂ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಕೊಲೆಯಾದ ಪವಿತ್ರ ತಾಯಿ ದೂರಿನ ಮೇರೆಗೆ ಕೆಜಿಎಫ್ ತಹಶೀಲ್ದಾರ್ ನಾಗವೇಣಿ ಶವಾಗಾರಕ್ಕೆ ಭೇಟಿ ನೀಡಿ ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಟ್ಟಾರೆ ಪ್ರೀತಿಸಿ ಮದುವೆಯಾಗಿ ನೂರು ವರ್ಷ ಒಟ್ಟಾಗಿ ಇರುತ್ತೆನೆ, ಕಷ್ಟದಲ್ಲಿ ಸುಖದಲ್ಲಿ ಜೊತೆಗಿರ್ತೀನಿ ಎಂದಿದ್ದವನು, ಧನದಾಹಕ್ಕೆ ದಾಸನಾಗಿ ಮತ್ತು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿ ಅದನ್ನು ಪ್ರಶ್ನೆ ಮಾಡಿದ ತಾನು ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಅದು ಪ್ರೇಮಿಗಳ ದಿನದಂದೇ ಕೊಲೆ ಮಾಡಿ ವಿಕೃತಿ ಮೆರೆದಿರೋದು ಮಾತ್ರ ನಿಜಕ್ಕೂ ದುರಂತ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ