ಪತ್ನಿ ಕೊಲೆ ಮಾಡಿದ್ದ ಪತಿ 31 ವರ್ಷಗಳ ನಂತರ ಅರೆಸ್ಟ್; ಹೆಸರು ಬದಲಾಯಿಸಿ ಮಸೀದಿಯಲ್ಲಿ ಆಶ್ರಯ!
ತನ್ನ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬೆಂಗಳೂರಿನ ಹೆಬ್ಬಾಳ ಠಾಣಾ ಪೊಲೀಸರು 31 ವರ್ಷಗಳ ನಂತರ ಚಿಕ್ಕಮಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1993ರಲ್ಲಿ ಹೆಬ್ಬಾಳ ನಿವಾಸಿ ಸುಬ್ರಮಣಿ ಎಂಬಾತ ತನ್ನ ಪತ್ನಿ ಸುಧಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಬೆಂಕಿ ಹಚ್ಚಿದ್ದ. ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದಿದ್ದ ಆರೋಪಿ ಬಳಿಕ ತಲೆಮರೆಸಿಕೊಂಡಿದ್ದನು.
ಬೆಂಗಳೂರು, ಫೆ.15: ತನ್ನ ಪತ್ನಿಯನ್ನು ಕೊಲೆ (Murder) ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬೆಂಗಳೂರಿನ (Bengaluru) ಹೆಬ್ಬಾಳ ಠಾಣಾ ಪೊಲೀಸರು 31 ವರ್ಷಗಳ (1993 ರಲ್ಲಿ) ನಂತರ ಚಿಕ್ಕಮಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ನಿಯ ಹತ್ಯೆ ಪ್ರಕರಣದಲ್ಲಿ ಆರೋಪಿ ಸುಬ್ರಮಣಿ ಜಾಮೀನಿನ ಮೇಲೆ ಹೊರಬಂದು ಕೇರಳಕ್ಕೆ ಪರಾರಿಯಾಗಿದ್ದ. ಕೆಲ ವರ್ಷಗಳ ಹಿಂದೆ ಕೇರಳದಿಂದ ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದ. ಈ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಸುಬ್ರಮಣಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಹೆಬ್ಬಾಳ ನಿವಾಸಿ ಸುಬ್ರಮಣಿ 1993 ರಲ್ಲಿ ತನ್ನ ಪತ್ನಿ ಸುಧಾಳಿಗೆ ಅಕ್ರಮ ಸಂಬಂಧ ಇದೆ ಎಂದು ಭಾವಿಸಿ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದನು. ಪ್ರಕರಣ ಸಂಬಂಧ ಆತನನ್ನು ಬಂಧಿಸಲಾಗಿತ್ತು. ನ್ಯಾಯಾಲಯದ ವಿಚಾರಣೆ ವೇಳೆ ಜಾಮೀನು ಪಡೆದ ನಂತರ ಸುಬ್ರಮಣಿ ಕೇರಳಕ್ಕೆ ಪರಾರಿಯಾಗಿದ್ದ. ಆತ ತಲೆಮರೆಸಿಕೊಂಡ ನಂತರ ಪೊಲೀಸರು ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರು.
ಇದನ್ನೂ ಓದಿ: ಅತಿಥಿ ಶಿಕ್ಷಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಂದೆಯ ಕೊಲೆಗೆ ಮಗಳಿಂದಲೇ ಸುಪಾರಿ!
ಕೇರಳಕ್ಕೆ ತಪ್ಪಿಸಿಕೊಂಡ ನಂತರ, ಸುಬ್ರಮಣಿ ತನ್ನ ಹೆಸರನ್ನು ಹುಸೇನ್ ಸಿಕಂದರ್ ಬಾಷಾ ಎಂದು ಬದಲಾಯಿಸಿಕೊಂಡಿದ್ದನು. ಕೇರಳದಲ್ಲಿ ಹಲವಾರು ವರ್ಷಗಳ ಕಾಲ ವಾಸಿಸಿದ ನಂತರ ಆತ ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದನು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ