ಮೈಸೂರು: ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಅಣ್ಣ, ಅತ್ತಿಗೆಯ ಬರ್ಬರ ಕೊಲೆ
ರಾಜಿ ಪಂಚಾಯಿತಿಗೂ ಒಪ್ಪದೆ, 15 ಗುಂಟೆ ಜಮೀನಿಗಾಗಿ ಅಣ್ಣ ಮತ್ತು ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಬಳಿಕ ಆರೋಪಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿರುವ ಘಟನೆ ಮೈಸೂರು ಜಿಲ್ಲೆಯ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೈಸೂರು: ಆಸ್ತಿ ವಿಚಾರಕ್ಕೆ ಅಣ್ಣ ಮತ್ತು ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನರಸೀಪುರ (Narasipura) ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪತಿ ಶಿವಲಿಂಗೇಗೌಡ(55), ಪತ್ನಿ ಭಾರತಿ(47) ಮೃತದುರ್ದೈವಿಗಳು. ಶಿವಲಿಂಗೇಗೌಡ ಸಹೋದರ ಹನುಮಂತೇಗೌಡ (50) ಕೊಲೆ ಮಾಡಿದ ಆರೋಪಿ. ಘಟನಾ ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು (Police) ಭೇಟಿ ನೀಡಿ, ಪರಿಶೀಲನೆ ನಡೆಸಿ ಆರೋಪಿ ಹನುಮಂತೇಗೌಡನನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15 ಗುಂಟೆ ಜಮೀನಿಗಾಗಿ ಸಹೋದರರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಊರಿನ ಹಿರಿಯರು ರಾಜಿ ಪಂಚಾಯಿತಿ ನಡೆಸುತ್ತಾ ಬಂದಿದ್ದರು. ರಾಜೀ ಸಂಧಾನಕ್ಕೂ ಒಪ್ಪದ ಸಹೋದರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಿನ್ನೆ (ಆ.29) ಮದ್ಯಾಹ್ನ ಶಿವಲಿಂಗೇಗೌಡ ಹಾಗೂ ಪತ್ನಿ ಭಾರತಿ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಮೈಕ್ರೋ ನ್ಯಾನೋ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ವಿಜ್ಞಾನಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ, ಹಲ್ಲೆಗೆ ಯತ್ನ
ಈ ವೇಳೆ ಏಕಾಏಕಿ ಗದ್ದೆಗೆ ಬಂದ ಹನುಮಂತೇಗೌಡ ಕೊಡಲಿಯಿಂದ ಅಣ್ಣ ಶಿವಲಿಂಗೇಗೌಡ ಮತ್ತು ಅತ್ತಿಗೆ ಭಾರತಿಯ ಕತ್ತು ಎದೆಗೆ ಮತ್ತು ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಹನುಮಂತೇಗೌಡ ಬನ್ನೂರು ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಸದ್ಯ ಬನ್ನೂರು ಪೊಲೀಸರು ಹನುಮಂತೇಗೌಡನನ್ನು ಬಂಧಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ನುಗ್ಗನಹಳ್ಳಿ ಕೊಪ್ಪಲು ಗ್ರಾಮಕ್ಕೆ ಮೃತದೇಹಗಳನ್ನು ಗ್ರಾಮಸ್ಥರು ತಂದಿದ್ದಾರೆ. ಮೃತ ದೇಹ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆ ಆರೋಪಿ ಹನುಮಂತೆಗೌಡನಿಗೆ ತಕ್ಕ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ