AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಹೆಸರು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್​ಐಆರ್, ಆರೋಪಿ ಸೀದಾ ಜೈಲಿಗೆ

ತಾನು ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​​ ದಾಖಲಾಗಿ, ಬಂಧನಕ್ಕೊಳಗಾಗಿದ್ದಾನೆ.

ಟಿವಿ9 ಹೆಸರು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್​ಐಆರ್, ಆರೋಪಿ ಸೀದಾ ಜೈಲಿಗೆ
ಟಿವಿ9 ಹೆಸರು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್​ಐಆರ್
Sahadev Mane
| Edited By: |

Updated on: Feb 20, 2024 | 9:40 PM

Share

ಬೆಳಗಾವಿ, ಫೆಬ್ರವರಿ 20: ತಾನು ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​​ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಅಥಣಿ ತಾಲೂಕಿನಲ್ಲಿ ಕೆಲ ದಿನಗಳಿಂದ ಮಹಾರಾಷ್ಟ್ರ ಪಶ್ಚಿಮ ಭಾಗದ ಮರಾಠಿ ವಾಹಿನಿ ಮುಖ್ಯಸ್ಥ ಅಂತಾ ರಮಜಾನ್ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನ ನಮ್ಮ ಬೆಳಗಾವಿ ಪ್ರತಿನಿಧಿ ಹಿರಿಯ ವರದಿಗಾರ ಸಹದೇವ ಮಾನೆ ಗಂಭೀರವಾಗಿ ಪರಿಗಣಿಸಿದ್ದರು. ಕೆಲ ದಿನಗಳ ಹಿಂದೆ ಆತ ಅಥಣಿ ಪಟ್ಟಣದಲ್ಲಿ ಸಾರ್ವಜನಿಕರ ಎದುರು ಟಿವಿ9 ಲೆಟರ್ ಹೆಡ್ ನ ನಕಲಿ ದಾಖಲೆ ಹಾಗೂ ಐಡಿ ಕಾರ್ಡ್ ತೋರಿಸಿ ಸುದ್ದಿಗಳನ್ನ ಮಾಡುವುದಾಗಿ ಹೇಳುತ್ತಿದ್ದ.

ಈ ವಿಚಾರವನ್ನ ವರದಿಗಾರ ಸಹದೇವ ಅವರು ಟಿವಿ9 ಕನ್ನಡ ವಾಹಿನಿ ಕಾನೂನು ಸಲಹೆಗಾರ ಸತ್ಯಕುಮಾರ್ ಅವರ ಗಮನಕ್ಕೆ ತಂದಿದ್ದರು. ಅವರ ಸಲಹೆ ಮೇರೆಗೆ ಆತನ ವಿಳಾಸ ಪಡೆದು ಅಥಣಿಯಲ್ಲಿ ಕೇಸ್ ದಾಖಲಿಸುವ ಚಿಂತನೆ ಕೂಡ ನಡೆದಿತ್ತು. ಈ ಬೆಳವಣಿಗೆ ಮಧ್ಯೆ ರಮಜಾನ್ ಮುಜಾವರ್ ಇಂದು ಬೆಳಗಾವಿ ನಗರದಲ್ಲೇ ನಮ್ಮ ವರದಿಗಾರ ಸಹದೇವ ಮಾನೆ ಮುಂದೆ ತಗ್ಲಾಕ್ಕೊಂಡಿದ್ದ.

ಸುದ್ದಿ ನಿಮಿತ್ತ ಸಾಹಿತ್ಯ ಭವನಕ್ಕೆ ಬಂದಿದ್ದ ನಮ್ಮ ವರದಿಗಾರ ಅಲ್ಲೇ ನಿಂತಿದ್ದ ಎರಿಟಿಗಾ ವಾಹನ ಗಮನಸಿದ್ದ. ಅದರ ಬಾನೆಟ್ ಮೇಲೆ ಟಿವಿ9 ಮರಾಠಿ ಅಂತಾ ದೊಡ್ಡದಾಗಿ ಸ್ಟಿಕರ್ ಅಂಡಿಸಿದ್ದನ್ನ ಗಮನಿಸಿದ್ದ. ಅಲ್ಲೇ ಇದ್ದ ವ್ಯಕ್ತಿಯನ್ನ ವಿಚಾರಿಸಿದಾಗ ತಾನು ಟಿವಿ9 ಮರಾಠಿ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದೇನೆ. ಸಾಂಗ್ಲಿ, ಮಿರಜ್, ಕೊಲ್ಲಾಪುರ, ಸತಾರಾ ಸೇರಿ ಪಶ್ಚಿಮ ಭಾಗದ ಹೆಡ್ ಇದ್ದೇನೆ‌. ಈ ಎಲ್ಲ ಭಾಗಗಳ ರಿಪೋರ್ಟರುಗಳು ನನ್ನ ಕೈಕೆಳಗೆ ಕೆಲಸ ಮಾಡ್ತಾರೆ ಅಂತಾನೂ ಹೇಳಿದ್ದ.

ಇದನ್ನ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಾಂಗ್ಲಿ ಜಿಲ್ಲೆಯ ಟಿವಿ9 ಮರಾಠಿ ವಾಹಿನಿ ವರದಿಗಾರರಿಗೆ ನಮ್ಮ ವರದಿಗಾರ ಸಹದೇವ ಕರೆ ಮಾಡಿ ಕೇಳಿದ್ದರು‌. ಈ ವೇಳೆ ಆತ (ರಮಜಾನ್) ನಮಗೆ ಸಂಬಂಧ ಇಲ್ಲ, ಸುಳ್ಳು ಹೇಳ್ತಿದ್ದಾರೆ ಅಂತಾ ಹೇಳಿದ್ದಾರೆ. ಅದರಿಂದ ಮತ್ತಷ್ಟು ಅನುಮಾನ ಹೆಚ್ಚಾಗಿ, ಕೂಡಲೇ ರಮಜಾನ್ ಬಳಿ ಐಡಿ ಕಾರ್ಡ್ ಕೇಳಲಾಗಿದೆ. ಅದಕ್ಕೆ ಆತ ನನ್ನ ಬಳಿ ಅದಿಲ್ಲ ಅಂತಾ ಹೇಳಿದ್ದಾನೆ.

ಇದನ್ನೂ ಓದಿ: ವೀರಪ್ಪ ಮೊಯ್ಲಿ, ನಲಪಾಡ್​ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ತಕ್ಷಣ ಆತನ ಕಾರು ತಪಾಸಣೆ ಮಾಡಿದಾಗ ಕೆಲವು ನಕಲಿ ದಾಖಲೆಗಳು ಸಿಕ್ಕಿವೆ. ಕೂಡಲೇ ಸ್ಥಳೀಯ ಮಾರ್ಕೆಟ್ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಸ್ಥಳಕ್ಕೆ ಕರೆಯಿಸಿಕೊಂಡು ಪಂಚನಾಮೆ ಮಾಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಇದಾದ ಬಳಿಕ ನಮ್ಮ ವರದಿಗಾರ ಸಹದೇವ ಅವರು ಬೆಂಗಳೂರಿನಲ್ಲಿರುವ ಇನ್‌ಪುಟ್ ಮುಖ್ಯಸ್ಥರಾದ ವಿಲಾಸ್ ನಾಂದೋಡ್ಕರ್ ಮತ್ತು ಕಾನೂನು ಸಲಹೆಗಾರ ಸತ್ಯಕುಮಾರ್ ಜಯರಾಮ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಅವರಿಬ್ಬರ ಸೂಚನೆಯ ಮೇರೆಗೆ ಮಾರ್ಕೆಟ್ ಠಾಣೆಯಲ್ಲಿ ಇದೀಗ ಆರೋಪಿ ರಮಜಾನ್ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿ ರಮಜಾನ್ ವಿರುದ್ಧ ಸೆಕ್ಷನ್ 420, 419, 417 ಅಡಿಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಆರೋಪಿಯನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಇತ್ತ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ನಮ್ಮ ವರದಿಗಾರ ಸಹದೇವ ಮಾನೆ ಅವರ ಕಾರ್ಯಕ್ಕೆ ಟಿವಿ9 ವಾಹಿನಿ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ