AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಗೆ ಬರುತ್ತಿದ್ದ ವೇಶ್ಯೆಯರ ಕಾಲ್; ಕೋಪಗೊಂಡ ಪ್ರಿಯಕರನಿಂದ ಡಬಲ್ ಮರ್ಡರ್! ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಬಹಿರಂಗ

ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅದರಂತೆ ಆರೋಪಿಗಳು ಎರಡಲ್ಲ ಮೂರು ಕೊಲೆ ಮಾಡಿರುವ ಮತ್ತು ಐವರ ಕೊಲೆಗೆ ಸಂಚು ರೂಪಿಸಿರುವ ಸತ್ಯ ಸಂಗತಿ ಬಹಿರಂಗವಾಗಿದೆ.

ಪ್ರೇಯಸಿಗೆ ಬರುತ್ತಿದ್ದ ವೇಶ್ಯೆಯರ ಕಾಲ್; ಕೋಪಗೊಂಡ ಪ್ರಿಯಕರನಿಂದ ಡಬಲ್ ಮರ್ಡರ್! ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಬಹಿರಂಗ
ಪ್ರಾತಿನಿಧಿಕ ಚಿತ್ರ
TV9 Web
| Updated By: Rakesh Nayak Manchi|

Updated on: Oct 29, 2022 | 2:11 PM

Share

ಮಂಡ್ಯ: ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರಿಬ್ಬರ ಮೃತ ದೇಹಗಳು ಇಡೀ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದಲ್ಲದೆ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅವೇರಡು ಕೊಲೆ ಪ್ರಕರಣಗಳನ್ನು ಬೇಧಿಸುವುದು ಪೊಲೀಸ್ ಇಲಾಖೆಗೂ ದೊಡ್ಡ ಸವಾಲಾಗಿತ್ತು. ಸಣ್ಣ ಸುಳಿವನ್ನೂ ಬಿಡದೆ ಕೃತ್ಯ ಎಸೆಗಿದ್ದ ಹಂತಕರ ಹೆಡಮುರಿಕಟ್ಟಲು ಖಾಕಿ ಪಡೆ ಹಗಲಿರುಳು ಪ್ರಯತ್ನಿಸಿದ್ದರೂ ಸಣ್ಣ ಸಾಕ್ಷಿ ಕೂಡ ಸಿಕ್ಕಿರಲಿಲ್ಲ. ಆದರೆ ಪ್ರಕರಣ ನಡೆದ 2 ತಿಂಗಳ ನಂತರ ಪಾತಕಿಗಳು ಖಾಕಿ ಕೆಡ್ಡಾಗೆ ಬಿದ್ದಿದ್ದಾರೆ. ವಿಚಾರಣೆ ವೇಳೆ ಕೊಲೆಗೆ ಕಾರಣ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಹಂತಕರು ಮಾಡಿದ್ದು ಕೇವಲ 2 ಕೊಲೆಯಲ್ಲ 3 ಎಂಬ ಸತ್ಯವೂ ಬಹಿರಂಗವಾಗಿದೆ. ಅಷ್ಟಕ್ಕೂ ಕೊಲೆಗೆ ಅಸಲಿ ಕಾರಣವೇನು ಇಲ್ಲಿದೆ ನೋಡಿ.

ಜೂನ್ 6 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಕೆರೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಸಮೀಪದ ಹಳ್ಳದಲ್ಲಿ ಮಹಿಳೆಯರ ಸೊಂಟದಿಂದ ಕೆಳಭಾಗ ಮೃತ ದೇಹ ಪತ್ತೆಯಾಗಿತ್ತು. ರುಂಡವಿಲ್ಲದ ದೇಹಗಳು ಪತ್ತೆಯಾಗಿದ್ದರಿಂದ ಸಾಮಾನ್ಯ ಜನರನ್ನು ಮಾತ್ರವಲ್ಲ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ದಾಖಲಸಿದ ಪೊಲೀಸರು ಹಲವೆಡೆ ಶೋಧಕಾರ್ಯ ನಡೆಸಿದರೂ ರುಂಡ ಪತ್ತೆಯಾಗಿರಲಿಲ್ಲ. ಅಲ್ಲದೆ ರಾಜ್ಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಪರಿಶೀಲಿಸಿದರೂ ಕೊಲೆಯಾದ ಮಹಿಳೆಯರ ಗುರುತು ಪತ್ತೆಯಾಗಿರಲಿಲ್ಲ. ಅಷ್ಟಕ್ಕೂ ಸುಮ್ಮನಾಗದ ಪೊಲೀಸರು ತನಿಖೆ ಮುಂದುವರಿಸಿದ್ದರು. ಅದರಂತೆ ಎರಡು ತಿಂಗಳ ಬಳಿಕ ಹಂತಕರು ಸೆರೆ ಸಿಕ್ಕಿದ್ದು, ಪ್ರೇಯಸಿ ಜತೆ ಸೇರಿ ಹಂತಕ ಮಹಿಳೆಯರನ್ನ ಕೊಂದಿರುವ ವಿಚಾರ ತಿಳಿದುಬಂದಿದೆ.

ಬೆಂಗಳೂರು ಮೂಲದ ಸಿದ್ದಲಿಂಗಪ್ಪ ಹಾಗೂ ಮಂಡ್ಯದ ಹರವು ಗ್ರಾಮದ ಚಂದ್ರಕಲಾ ಎಂಬ ಖತರ್ನಾಕ್ ಜೋಡಿಯೇ ಭೀಕರ ಕೃತ್ಯವೆಸಗಿದ ಹಂತಕರಾಗಿದ್ದಾರೆ. ಬೆಂಗಳೂರಿನ ಟೂಲ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಪ್ಪ ಗಾರ್ಮೆಂಟ್ಸ್​​ನಲ್ಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಿ ಎಂಬಾಕೆಯನ್ನ ಮದುವೆಯಾಗಿದ್ದ. ಈ ನಡವೆ ಪತ್ನಿ ಜಯಲಕ್ಷ್ಮಿ ಸಂಬಂಧಿಯಾದ ಚಂದ್ರಕಲಾ ಮೇಲೆ ಮನಸ್ಸಾಗಿದೆ. ಅದರಂತೆ ಮೈಸೂರಿನ ಹೆಬ್ಬಾಳದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದರು.

ಕೊಲೆಗೆ ಅಸಲಿ ಕಾರಣವೇ ವೇಶ್ಯೆಯ ಲಿಂಕ್

ಮೂರು ಕೊಲೆಗಳು ನಡೆಯಲು ಅಸಲಿ ಕಾರಣ ಎಂದರೆ ಚಂದ್ರಕಲಾಗೆ ಇದ್ದ ವೇಶ್ಯೆಯರ ಲಿಂಕ್. ಕೆಲವರು ಆಗಾಗ ಚಂದ್ರಕಲಾಗೆ ಫೋನ್ ಮಾಡಿ ದಂಧೆಗೆ ಬರುವಂತೆ ಕರೆಯುತ್ತಿದ್ದರು. ಈ ವಿಚಾರ ತಿಳಿದಾಗ ಸಿದ್ದಲಿಂಗಪ್ಪ ಕೋಪ ತರಿಸಿತ್ತು. ಹೀಗಾಗಿ ಚಂದ್ರಕಲಾ ಸ್ನೇಹಿತೆಯರನ್ನ ಕೊಲೆ ಮಾಡಲು ನಿರ್ಧಾರ ಮಾಡಿದ್ದ.

ಅದರಂತೆ ಪಕ್ಕಾ ಪ್ಲಾನ್ ಹಾಕಿಕೊಂಡ ಸಿದ್ದಲಿಂಗಪ್ಪ, ಚಂದ್ರಕಲಾ ಮೂಲಕ ಮೇ 30ರಂದು ಚಿತ್ರದುರ್ಗದ ಪಾರ್ವತಿಯನ್ನ ಮೈಸೂರಿನ ತನ್ನ ಮನೆಗೆ ಕರೆಸಿಕೊಂಡಿದ್ದ. ಮಧ್ಯರಾತ್ರಿ ಕುತ್ತಿಗೆ ಬಿಗಿದು ಕೊಂದು, ದೇಹವನ್ನ ಎರಡು ಭಾಗಗಳನ್ನಾಗಿ ಕಟ್ ಮಾಡಿದ್ದ. ಬಳಿಕ ಚೀಲಕ್ಕೆ ತುಂಬಿಕೊಂಡು ಒಂದು ಭಾಗವನ್ನ ಶ್ರೀರಂಗಪಟ್ಟಣದ ಕಾವೇರಿ ನದಿಗೆ ಮತ್ತೊಂದು ಭಾಗವನ್ನ ಸಿಡಿಎಸ್ ನಾಲೆಗೆ ಎಸೆದಿದ್ದ. ಜೂನ್ 3 ರಂದು ಚಾಮರಾಜನಗರದ ಗೀತ ಆಲಿಯಾಸ್ ಪುಟ್ಟಿ ಎಂಬಾಕೆಯನ್ನ ಮಧ್ಯಾಹ್ನ ಕೊಂದು ಎರಡು ಭಾಗವಾಗಿ ದೇಹ ಕಟ್ ಮಾಡಿ ಒಂದು ಭಾಗವನ್ನ ಪಾಂಡವಪುರ ತಾಲ್ಲೂಕಿನ ಬಳಿ ವಿಶ್ವೇಶ್ವರಯ್ಯ ನಾಲೆಗೆ ಮತ್ತೊಂದು ಭಾಗವನ್ನ ಬೇಬಿ ಗ್ರಾಮದ ಕೆರೆಗೆ ಎಸೆದು ಪರಾರಿಯಾಗಿದ್ದರು. ಬಳಿಕ ಮೈಸೂರಿನ ಮನೆ ಖಾಲಿ ಮಾಡಿ ಬೆಂಗಳೂರಿನ ಡಾಬ್ಸ್ ಪೇಟೆಗೆ ಆಗಮಿಸಿದ್ದರು.

ಹಂತಕರ ಸುಳಿವು ಸಿಕ್ಕಿದ್ದೇ ರೋಚಕ

ಇನ್ನು ಹೇಗಾದರೂ ಕೊಲೆ ಪ್ರಕರಣವನ್ನ ಪತ್ತೆ ಮಾಡಲೇ ಬೇಕು ಎಂದು ನಿರಂತರವಾಗಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಜುಲೈ 25ರಂದು ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗೀತಾ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಗೀತಾಳ ಮೊಬೈಲ್ ಲಾಸ್ಟ್ ಕಾಲ್ ಹಾಗೂ ಲಾಸ್ಟ್ ಲೊಕೇಷನ್ ಟ್ರೇಸ್ ಪರಿಶೀಲಿಸಿದಾಗ ಚಂದ್ರಕಲಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಚಂದ್ರಕಲಾ ಹಾಗೂ ಸಿದ್ದಲಿಂಗಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ.

ಇದಷ್ಟೆ ಅಲ್ಲದೆ ತನಿಖೆ ವೇಳೆ ಮತ್ತೊಂದು ಕೊಲೆ ಬಗ್ಗೆ ಹಂತಕರು ಬಾಯಿಬಿಟ್ಟಿದ್ದಾರೆ. ಕಳೆದ ಮೇ 1ರಂದು ಬೆಂಗಳೂರಿನಲ್ಲಿ ಕುಮುದ ಎಂಬಾಕೆಯನ್ನ ಕೊಲೆ ಮಾಡಿದ್ದರು. ಬಳಿಕ ಮತ್ತೆ ಐವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಹಂತಕ ಸಿದ್ದಲಿಂಗಪ್ಪ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಗಳ ಬಂಧನದಿಂದ ಐವರ ಜೀವ ಉಳಿದಂತಾಗಿದೆ. ಸದ್ಯ ಕೊಲೆ ಪ್ರಕರಣ ಸಂಬಂದ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಒಂದೇ ಒಂದು ಕ್ಲೂ ಇಲ್ಲದೆ ಕೊಲೆಗೈದು ತಲೆ ಮರೆಸಿಕೊಂಡಿದ್ದ ನಟೋರಿಯಸ್​ಗಳು ಜೈಲು ಪಾಲಾಗಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.

ವರದಿ: ಸೂರಜ್ ಪ್ರಸಾದ್, ಟಿವಿ9 ಮಂಡ್ಯ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ