ಬೀದರ್​​ನಿಂದ ಮಂಡ್ಯಕ್ಕೆ ಬಂದು ಮಾಂಗಲ್ಯ ಸರ ಕದಿಯುತ್ತಿದ್ದ ಇರಾನಿ ಗ್ಯಾಂಗ್​ ಸದಸ್ಯನ ಬಂಧನ

ಗಡಿನಾಡು ಬೀದರ್​ನಿಂದ ಸಕ್ಕರೆ ನಗರಿ ಮಂಡ್ಯಕ್ಕೆ ಬಂದು ಇಲ್ಲಿ ತನ್ನ ಸಹಚರರೊಂದಿಗೆ ಸೇರಿ ಬೈಕ್​ಗಳನ್ನು ಕದಿಯುತ್ತಿದ್ದನು. ನಂತರ ಕದ್ದ ಬೈಕ್​ಗಳನ್ನೇ ಬಳಸಿ ಭಕ್ತನ ಸೋಗಿನಲ್ಲಿ ಒಂಟಿ ಮಹಿಳೆಯರು ಹಾಗೂ ವೃದ್ದೆಯರ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದನು. ಹೀಗೆ ಕೃತ್ಯ ಎಸಗಿದ್ದವನು ಸೆರೆ ಸಿಕ್ಕಿದ್ದು ಹೇಗೆ ? ಇಲ್ಲಿದೆ ಓದಿ...

ಬೀದರ್​​ನಿಂದ ಮಂಡ್ಯಕ್ಕೆ ಬಂದು ಮಾಂಗಲ್ಯ ಸರ ಕದಿಯುತ್ತಿದ್ದ ಇರಾನಿ ಗ್ಯಾಂಗ್​ ಸದಸ್ಯನ ಬಂಧನ
ಆರೋಪಿ ಜಾವಿದ್​ ಬಾಲಿ, ಮದ್ದೂರು ಪೊಲೀಸ್​ ಠಾಣೆ
Follow us
ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ

Updated on:Dec 09, 2023 | 1:19 PM

ಮಂಡ್ಯ ಡಿಸೆಂಬರ್​ 09: ಆತ ಇರಾನಿ ಗ್ಯಾಂಗ್​ ಸದಸ್ಯ. ಗಡಿನಾಡು ಬೀದರ್​ನಿಂದ (Bidar) ಸಕ್ಕರೆ ನಗರಿ ಮಂಡ್ಯಕ್ಕೆ (Mandya) ಬಂದು, ಭಕ್ತನ ಸೋಗಿನಲ್ಲಿ ಒಂಟಿ ಮಹಿಳೆಯರು ಹಾಗೂ ವೃದ್ದೆಯರ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದನು. ಕಳೆದ ಹಲವು ದಿನಗಳಿಂದ ಪೊಲೀಸರ (Police) ನಿದ್ರೆ ಕೆಡಿಸಿದ್ದ ಖತರ್ನಾಕ್ ಕಳ್ಳ ಕೊನೆಗೂ ಅಂದರ್ ಆಗಿದ್ದಾನೆ. ಬೀದರ್ ಮೂಲದ ಜಾವೀದ್ ಬಾಲಿ ಬಂಧಿತ ಆರೋಪಿ.

ಆರೋಪಿ ಜಾವೀದ್ ಬಾಲಿ ಇರಾನಿ ಗ್ಯಾಂಗ್​ನ ಸದಸ್ಯನಾಗಿದ್ದಾನೆ. ಜಾವೀದ್​ ಬಾಲಿ ಹಾಗೂ ಈತನ ಸಹಚರರು ಗಡಿನಾಡು ಬೀದರ್​ನಿಂದ ಕಾರಿನಲ್ಲಿ ಮಂಡ್ಯ ಜಿಲ್ಲೆಗೆ ಬಂದು, ಇಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದರು. ಬಳಿಕ ಕದ್ದ ಬೈಕ್​ಗಳನ್ನೇ ಬಳಸಿ ಮಂಡ್ಯ ಜಿಲ್ಲೆಯ ವಿವಿಧ ನಗರ ಪ್ರದೇಶಗಳು ಹಾಗೂ ಗ್ರಾಮೀಣದಲ್ಲಿ ಒಂಟಿಯಾಗಿ ಸಂಚಿರಿಸುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

ಕಳೆದ ತಿಂಗಳು ಮದ್ದೂರು ನಗರ ಪ್ರದೇಶದಲ್ಲಿ ಸಾಯಿಬಾಬನ ಭಕ್ತರ ಸೋಗಿನಲ್ಲಿ ಬಂದು 75 ವರ್ಷದ ವೃದ್ದೆಯ 62 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಠಾಣೆ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಎಸಗಿ ಪಾರಾರಿಯಾಗಿದ್ದ ಆರೋಪಿ ದುಬೈನಲ್ಲಿ ಸೆರೆ: ಪೊಲೀಸರ ಕಾರ್ಯಾಚರಣೆಯೇ ರೋಚಕ

ಜಾವೀದ್​ ಬಾಲಿ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರೋಪಿ ಜಾವೀದ್​ ಬಾಲಿಯಿಂದ ಸುಮಾರು 28 ಲಕ್ಷ ರೂ ಮೌಲ್ಯದ 435 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನಿಗೆ ಸಾಥ್ ನೀಡುತ್ತಿದ್ದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳು ರಾಮನಗರ ಜಿಲ್ಲೆಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಜಾವೀದ್​ ಬಾಲಿ ಈ ಹಿಂದೆ ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಜೈಲು ಪಲಾಗಿದ್ದನು. ಜೈಲಿನಿಂದ ಬಂದ ಮೇಲೂ ತಮ್ಮ ಚಾಳಿಯನ್ನು ಮುಂದುವರೆಸಿದ್ದಾನೆ. ಇನ್ನು ಕದ್ದಂತಹ ಚಿನ್ನಾಭರಣಗಳನ್ನ ಬೀದರ್​ನಲ್ಲಿಯೇ ಮಾರಾಟ ಹಾಗೂ ಗಿರವಿ ಇಡುತ್ತಿದ್ದನು ಎಂಬ ಅಂಶ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಒಟ್ಟಾರೆಯಾಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದ ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಮಹಿಳೆಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:17 pm, Sat, 9 December 23