ದೇವಸ್ಥಾನದೊಳಗೆ ಮುನ್ನಿ ಬದ್ನಾಮ್ ಹಾಡಿಗೆ ಮೈ ಬಳುಕಿಸಿದ ಯುವತಿಗೆ ಸಂಕಷ್ಟ: ಇದು ಬೇಕಿತ್ತಾ?
ದೇವಸ್ಥಾನದೊಳಗೆ ಮುನ್ನಿ ಬದ್ನಾಮ್ ಹಾಡಿಗೆ ಮೈ ಬಳುಕಿಸಿದ ವಿಡಿಯೋ ಹಾಕಿಕೊಂಡಿದ್ದ ಯುವತಿಗೆ ಸಂಕಷ್ಟ ಎದುರಾಗಿದೆ.
ಭೋಪಾಲ್: ಕೆಲವರು ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗ್ತಾರೆ. ಇನ್ನು ಕೆಲವರು ಭಕ್ತಿ, ತಮ್ಮ ಕಷ್ಟಗಳನ್ನ ಪರಿಹರಿಸುವಂತೆ ದೇವರ ಮೊರೆ ಹೋಗ್ತಾರೆ, ಆದ್ರೆ, ಇಲ್ಲೋರ್ವ ಯುವತಿ ದೇವಸ್ಥಾನದಲ್ಲಿ ಐಟಂ ಸಾಂಗ್ಗೆ ಮೈ ಬಳುಕಿಸಿ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಹೌದು…ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯಲ್ಲಿ ದೇವಸ್ಥಾನವೊಂದರ ಆವರಣದಲ್ಲಿ ಐಟಮ್ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿದ್ದ ಯುವತಿ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ದೇವಸ್ಥಾನದ ಮೆಟ್ಟಿಲಿನಲ್ಲಿ ಡ್ಯಾನ್ಸ್ ಮಾಡಿದ್ದಳು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಜರಂಗದಳದ ಕೆಲವು ಕಾರ್ಯಕರ್ತರು ವಿರೋಧವನ್ನು ವ್ಯಕ್ತಪಡಿಸಿದ್ದರು. ಜೊತೆಗೆ ದೇವಸ್ಥಾನದೊಳಗೆ ಈ ರೀತಿಯ ರೀಲ್ಸ್ ಮಾಡಿ ಧಾರ್ಮಿಕ ಭಾವನೆಗೆ ದ್ರೋಹ ಬಗೆದಿದ್ದಾಳೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಯುವತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತಕ್ಷಣವೇ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇಷ್ಟೇ ಅಲ್ಲ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಯುವತಿ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಇತ್ತ ವಿವಾದ ಹೆಚ್ಚಾಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ. ಆದರೆ ಹಿಂದೂ ಸಂಘಟನೆಗಳ ಯುವತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಆಕ್ರೋಶ, ಟೀಕೆಗಳು ಹೆಚ್ಚಾಗುತ್ತಿದ್ದಂತೆಯೇಯುವತಿ ತನ್ನ ವೀಡಿಯೋವನ್ನು ಡಿಲೀಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾಳೆ. ತನ್ನ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಷಮೆ ಕೇಳಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ. ಈ ಯುವತಿ ಇನ್ಸ್ಸ್ಟಾಗ್ರಾಮನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದು, ಈಕೆಗೆ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 pm, Tue, 4 October 22