ಕೋಲಾರ: ಮಾಹಿತಿ ಹಕ್ಕು ಅಧಿನಿಯಮ (Right to Information Act) ಜಾರಿಗೆ ಬಂದಾಗಿನಿಂದ ಸಾವಿರಾರು ನಾಗರಿಕರು ಅದರ ಉಪಯೋಗ ಪಡೆದಿದ್ದಾರೆ. ಅನೇಕ ವರ್ಷಗಳಿಂದ ದೊರೆಯದಿದ್ದ ಮಾಹಿತಿ, ದಾಖಲೆ ಇತ್ಯಾದಿ ಕೇವಲ ಒಂದು ಅರ್ಜಿ ಸಲ್ಲಿಸಿದ ಕೂಡಲೆ ದೊರಕಿದೆ. ಅಲ್ಲದೇ ಮಾಹಿತಿ ಹಕ್ಕು ಅಡಿಯಲ್ಲಿ ದಾಖಲಾದ ಅರ್ಜಿಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳ ಕಾರ್ಯವೈಖರಿ ಸಾಕಷ್ಟು ಬದಲಾಗಿದೆ.
ಇಲಾಖೆಯಲ್ಲಿ ಸ್ವಲ್ಪಮಟ್ಟಿಗೆ ಪಾರದರ್ಶಕತೆ ಕಂಡು ಬಂದಿದೆ. ಬಹಳ ಮುಖ್ಯವಾಗಿ ಸರ್ಕಾರದ ಕಚೇರಿಗಳಲ್ಲಿ ಕಡತಗಳನ್ನು ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ಇಡುವ ಸಂಸ್ಕೃತಿ ಆರಂಭವಾಗಿದೆ. ಇದೆಲ್ಲವೂ ಮೆಚ್ಚಬೇಕಾದ್ದೆ. ಆದ್ರೆ, ಇದರ ಜೊತೆಗೆ ಮಾಹಿತಿ ಹಕ್ಕು ದುರುಪಯೋಗದ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿವೆ. ಇದಕ್ಕೊಂದು ತಾಜಾ ಉದಾಹರಣ ಈ ಸುದ್ದಿ..
ಹೌದು…. ಕೋಲಾರದ(Kolar) ಆರ್ಟಿಐ ಕಾರ್ಯಕರ್ತನೊಬ್ಬ ( RTI Activist) ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರದ ಬಗ್ಗೆ ಮಾಹಿತಿ ಕೇಳಿ ಈಗ ಜೈಲುಪಾಲಾಗಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಂಡಿಕಲ್ ಗ್ರಾಮದ ಆರ್ಟಿಐ ಕಾರ್ಯಕರ್ತ ನಾಗರಾಜ್ ಎನ್ನುವರು ಮಹಿಳಾ ಅಧಿಕಾರಿಯ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಕೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅಧಿಕಾರಿಯ ದೂರಿನ ಮೇರೆಗೆ ಪೊಲೀಸರು ನಾಗರಾಜ್ನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Crime: ಹೀಗೊಬ್ಬ ಕಮರ್ಷಿಯಲ್ ಕಳ್ಳ; ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿ
ಎಷ್ಟು ಮದುವೆಯಾಗಿದ್ದೀರಿ? ಯಾರೊಂದಿಗೆ ಡೈವೋರ್ಸ್ ಆಗಿದೆ? ಯಾರೊಂದಿಗೆ ಸಂಸಾರ ಮಾಡ್ತಿದ್ದೀರಾ?, ಎಲ್ಲಿ ಮದುವೆಯಾಗಿದೆ? ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಸಹ ಕೇಳಿದ್ದ. ಅಲ್ಲದೇ ಮೊದಲ ಗಂಡಂದಿರು ಅಧಿಕಾರಿಯನ್ನು ಬಿಡಲು ಕಾರಣ ಏನು? ಯಾವ ಇಲಾಖೆಯಲ್ಲಿ ಇವರೆಲ್ಲಾ ಕೆಲಸ ಮಾಡುತ್ತಿದ್ದಾರೆ? ಎಲ್ಲಾ ಮಾಹಿತಿ ತುರ್ತಾಗಿ ನೀಡುವಂತೆ ನಾಗರಾಜ್ ಆರ್ಟಿಐ ಅರ್ಜಿ ಸಲ್ಲಿಸಿದ್ದ. ಇದರಿಂದ ಕೋಪಗೊಂಡಿರುವ ಆ ಮಳಿಳಾ ಅಧಿಕಾರಿ ಆರ್ಟಿಐ ಕಾರ್ಯಕರ್ತನ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಿಳಾ ಅಧಿಕಾರಿ ದೂರಿನ ಮೇರೆಗೆ ಮುಳಬಾಗಲು ನಗರ ಪೊಲೀಸರು ನಾಗರಾಜ್ನನ್ನು ಬಂಧಿಸಿದ್ದಾರೆ. ಯಾವ ಮಾಹಿತಿ ಕೇಳಬೇಕು. ಯಾವುದನ್ನು ಕೇಳಬಾರದು ಎನ್ನುವ ಸಾಮಾನ್ಯ ಜ್ಞಾನ ಇರಬೇಕು. ಇಲ್ಲ ಅಂದ್ರೆ ಹೀಗೆ ಜೈಲು ಸೇರಬೇಕಾಗುತ್ತದೆ.