ಧಾರವಾಡದಲ್ಲಿ ಚಿಕ್ಕಮ್ಮನನ್ನೇ ಕೊಂದ ಕೊಲೆಗಾರ ಅಂದರ್; ಹತ್ಯೆಗೆ ಕಾರಣ ಬಾಯ್ಬಿಟ್ಟ ಹಂತಕ
ನಗರದಲ್ಲಿ ಕಳೆದೊಂದು ವಾರದಿಂದ ಐದು ಕೊಲೆಗಳು ನಡೆದು ಹೋಗಿವೆ. ಪ್ರತಿಯೊಂದು ಕೊಲೆಗೂ ಪ್ರತ್ಯೇಕ ಕಾರಣಗಳಿವೆ. ಈ ಐದೂ ಕೊಲೆಗಳಲ್ಲಿ ಗಮನ ಸೆಳೆದಿದ್ದು, ನವಲೂರು ಬಡಾವಣೆಯ ವೃದ್ಧೆಯ ಕೊಲೆ. ಏಕೆಂದರೆ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅಜ್ಜಿಗೆ ಯಾರೂ ವೈರಿಗಳೇ ಇರಲಿಲ್ಲ. ಆಧ್ಯಾತ್ಮದತ್ತ ಮನಸ್ಸನ್ನು ವಾಲಿಸಿದ್ದ ಅಜ್ಜಿಯನ್ನು ಕೊಂದವರನ್ನ ಇದೀಗ ಪೊಲೀಸರು ಲಾಕ್ ಮಾಡಿದ್ದಾರೆ.
ಧಾರವಾಡ, ಫೆ.10: ನಗರದಲ್ಲಿ ಕಳೆದೊಂದು ವಾರದಿಂದ ಐದು ಕೊಲೆಗಳು ನಡೆದು ಹೋಗಿವೆ. ಪ್ರತಿಯೊಂದು ಕೊಲೆಗೂ ಪ್ರತ್ಯೇಕ ಕಾರಣಗಳಿವೆ. ಈ ಐದೂ ಕೊಲೆಗಳಲ್ಲಿ ಗಮನ ಸೆಳೆದಿದ್ದು, ನವಲೂರು ಬಡಾವಣೆಯ ವೃದ್ಧೆಯ ಕೊಲೆ. ಏಕೆಂದರೆ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅಜ್ಜಿಗೆ ಯಾರೂ ವೈರಿಗಳೇ ಇರಲಿಲ್ಲ. ಆಧ್ಯಾತ್ಮದತ್ತ ಮನಸ್ಸನ್ನು ವಾಲಿಸಿದ್ದ ಅಜ್ಜಿಯನ್ನು ಕೊಂದವರ ಮೇಲೆ ಇಡೀ ಧಾರವಾಡದ ಜನರೇ ಆಕ್ರೋಶಗೊಂಡಿದ್ದರು. ಇದೀಗ ಪೊಲೀಸರು ಕೊಲೆಗಾರನನ್ನು ಲಾಕ್ ಮಾಡಿದ್ದಾರೆ. ಆತಂಕಕಾರಿ ವಿಚಾರವೆಂದರೆ ಆತ ಆಕೆಗೆ ಮಗನೇ ಆಗಬೇಕು ಎನ್ನುವುದು.
ಆಸ್ತಿಗಾಗಿ ನಡೆಯಿತಾ ಕೊಲೆ?
ಧಾರವಾಡ ನಗರದ ನವಲೂರು ಬಡಾವಣೆಯ ಕರೆವ್ವ ಇರಬಗೇರಿ ಎನ್ನುವ 60 ವರ್ಷದ ವೃದ್ಧೆಯನ್ನು ಕೊಲೆ ಮಾಡಲಾಗಿತ್ತು. ಕರೆವ್ವ ಹಲವಾರು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದಳು. ಇನ್ನು ಆಕೆಗಿದ್ದ ಇಬ್ಬರು ಪುತ್ರರು ಕೂಡ ಬೇರೆ ಬೇರೆ ಕಾರಣದಿಂದ ಮೃತಪಟ್ಟಿದ್ದರು. ಹೀಗಾಗಿ ಈಕೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಆದರೆ, ಈಕೆಯ ಪತಿಯ ಸಹೋದರರೇ ಆಕೆಯ ಪಾಲಿನ ವಿಲನ್ಗಳಾಗಿದ್ದರು. ಏಕೆಂದರೆ ಪತಿಯಿಂದ ಈಕೆಗೆ ಬಂದಿದ್ದ ಜಮೀನು ಹಾಗೂ ಆಸ್ತಿಯೇ ಆಕೆಯ ಪಾಲಿಗೆ ಮುಳುವಾಗಿ ಹೋಗಿದೆ.
ಕರೆವ್ವಗೆ ದೇವರೆಂದರೆ ಸಾಕಷ್ಟು ಭಕ್ತಿ. ಇದೇ ಕಾರಣಕ್ಕೆ ಬೆಳ್ಳಂಬೆಳಿಗ್ಗೆ ಎದ್ದು ಎಲ್ಲ ದೇವಸ್ಥಾನಗಳಿಗೆ ಹೋಗಿ, ದರ್ಶನ ತೆಗೆದುಕೊಂಡು ಬರುವುದು ರೂಢಿ. ಇವತ್ತು ಕೂಡ ಅದೇ ರೀತಿ ಹೋದಾಕೆಯನ್ನು ಉಮೇಶ್ ಇರಬಗೇರಿ ಎನ್ನುವವ ರಾಡ್ನಿಂದ ಹೊಡೆದು ಕೊಂದು ಹಾಕಿದ್ದಾರೆ. ಈ ಉಮೇಶ್ ಬೇರೆ ಯಾರೂ ಅಲ್ಲ, ಕರೆವ್ವನ ಪತಿಯ ಅಣ್ಣನ ಮಗ. ಆತನೇ ಆಸ್ತಿಗಾಗಿ ಚಿಕ್ಕಮ್ಮನನ್ನೇ ಕೊಂದಿದ್ದಾನೆ. ಈ ಹಿನ್ನಲೆ ವಿದ್ಯಾಗಿರಿ ಠಾಣೆ ಪೊಲೀಸರು ಉಮೇಶ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:ಮಗಳಿಗೆ ವರನನ್ನು ಹುಡುಕಲು ಕೊಲೆ ಆರೋಪಿಗೆ 45 ದಿನಗಳ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್
ಪತಿ ತೀರಿಕೊಂಡ ಬಳಿಕ ಆತನಿಗೆ ಸೇರಿದ್ದ ಎಲ್ಲ ಆಸ್ತಿ, ಈಕೆಯ ಹೆಸರಿಗೆ ವರ್ಗಾವಣೆ ಆಗಿತ್ತು. ಪುಣೆ-ಬೆಂಗಳೂರು ರಸ್ತೆಯ ಬದಿಯಲ್ಲಿ ಆರು ಎಕರೆ ಜಮೀನು ಸೇರಿದಂತೆ ಹತ್ತಾರು ಕೋಟಿ ರೂಪಾಯಿ ಆಸ್ತಿ ಇತ್ತು. ಇತ್ತೀಚಿಗಷ್ಟೇ ಬಿಆರ್ಟಿಎಸ್ ಯೋಜನೆಗೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಪರಿಹಾರ, ಕೋಟಿಗಳ ಲೆಕ್ಕದಲ್ಲಿ ಬಂದಿತ್ತು. ಇರುವ ಇಬ್ಬರು ಮಕ್ಕಳು ತೀರಿ ಹೋಗಿದ್ದರಿಂದ ಸಂಬಂಧಿಕರೊಬ್ಬರ ಮಗನನ್ನು ಕರೆ ತಂದು, ಆತನಿಗೆ ಮದುವೆ ಮಾಡಿಸಿ ಸಾಕುತ್ತಿದ್ದಳು. ಇದೇ ಆಕೆಯ ಪತಿಯ ಸಹೋದರರು ಹಾಗೂ ಅವರ ಮಕ್ಕಳ ಕಣ್ಣು ಕೆಂಪಾಗಿಸಿತ್ತು.
ತಮ್ಮ ಕುಟುಂಬದ ಆಸ್ತಿಯನ್ನು ಕರೆವ್ವ ತನ್ನ ಸಂಬಂಧಿಕರಿಗೆ ಕೊಡುತ್ತಾಳೆ ಎಂದು ಸಿಟ್ಟಿಗೆದ್ದ ಅವರೆಲ್ಲ, ಹಲವಾರು ಬಾರಿ ಜಗಳ ಕೂಡ ಆಡಿದ್ದಾರೆ. ಆದರೆ, ಯಾವುದಕ್ಕೂ ಜಗ್ಗದ ಕರೆವ್ವ, ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದುಬಿಟ್ಟಿದ್ದಳು. ಈ ಆಸ್ತಿ ಬೇರೆಯವರು ಬಳಸೋದಕ್ಕಿಂತ ಮುಂಚೆ ಈಕೆಯನ್ನೇ ಕೊಂದೇ ಬಿಟ್ಟರೆ ಒಳ್ಳೆಯದು ಎನ್ನುವ ಕಾರಣಕ್ಕೆ ಉಮೇಶನೇ ತನ್ನ ಚಿಕ್ಕಮ್ಮನ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಪೂನಾ-ಬೆಂಗಳೂರು ರಸ್ತೆಯಲ್ಲಿ ಇರುವ ಆಕೆಯ ಜಮೀನಿನ ಬೆಲೆ ಹತ್ತಾರು ಕೋಟಿ ರೂಪಾಯಿ ಬಾಳುತ್ತದೆ. ಅಲ್ಲಿ ಎಕರೆ ಜಮೀನಿಗೆ 8 ರಿಂದ 10 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಇಂಥಹ ಜಮೀನನ್ನು ತಾವೇ ಭೋಗಿಸಬೇಕು ಎನ್ನುವ ದುರಾಸೆಯಲ್ಲಿ ಉಮೇಶ್ ತನ್ನ ಚಿಕ್ಕಮ್ಮನನ್ನೇ ಕೊಂದಿದ್ದು ಮಾತ್ರ ವಿಪರ್ಯಾಸದ ಸಂಗತಿಯೇ ಸರಿ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Sat, 10 February 24