ಅತಿಥಿ ಉಪನ್ಯಾಸಕನ ಭೀಕರ ಹತ್ಯೆ; ಚೌಡಿ ಪೂಜೆ ಮಾಡಿ ಆಚೆ ಹೋದವ ಸೇರಿದ ಮಸಣ

ಶಾಲೆಯೊಂದರಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ಆತ , ದಿನನಿತ್ಯ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಯಂತ್ರ ಮಂತ್ರ ತಂತ್ರ ಹಾಗೂ ಪೂಜೆ ಮಾಡುವುದನ್ನು ಮಾಡುತ್ತಿದ್ದ. ಅದರಂತೆ ನಿನ್ನೆ(ಫೆ.10) ಸಂತೆ ಮನೆಯಲ್ಲಿ ಚೌಡಿಗೆ ಪೂಜೆ ಮಾಡಿ ಆಚೆ ಹೋದವ ಬೆಳಗಾಗುವಷ್ಟರಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕುಳಿನಂಜಯ್ಯನಪಾಳ್ಯದ ಗ್ರಾಮದ ಬಳಿ ಕೊಲೆಯಾಗಿ ಹೋಗಿದ್ದಾನೆ. 

ಅತಿಥಿ ಉಪನ್ಯಾಸಕನ ಭೀಕರ ಹತ್ಯೆ; ಚೌಡಿ ಪೂಜೆ ಮಾಡಿ ಆಚೆ ಹೋದವ ಸೇರಿದ ಮಸಣ
ಕುಣಿಗಲ್​ ಅತಿಥಿ ಉಪನ್ಯಾಸಕನ ಭೀಕರ ಹತ್ಯೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 10, 2024 | 4:53 PM

ತುಮಕೂರು, ಫೆ.10: ಜಿಲ್ಲೆಯ ಕುಣಿಗಲ್ ತಾಲೂಕಿನ ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ(Guest lecturer) ಕೆಲಸ ಮಾಡುತ್ತಿದ್ದ ಮರಿಯಪ್ಪ (47) ಎಂಬಾತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ತಲೆಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮರಿಯಪ್ಪ ಮೂಲತಃ ಪಂಡಿತನಾಗಿ ಕೆಲಸ ಮಾಡುತ್ತಿದ್ದು, ಕಳೆದ ಆರು ತಿಂಗಳಿನಿಂದ ಮೋದೂರು ಗ್ರಾಮದ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನಂತೆ‌. ಇದರ ಜೊತೆಗೆ ಮನೆಯಲ್ಲಿ ಚೌಡಿ ದೇವಿಗೆ ಪೂಜೆ ಮಾಡಿ ಯಂತ್ರ ಮಂತ್ರ ಎಂದು ಶಾಸ್ತ್ರ ಹೇಳುತ್ತಿದ್ದ ಎನ್ನಲಾಗಿದೆ.

ಕುಳಿನಂಜಯ್ಯಪಾಳ್ಯ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಿಂದ ಬಂದು ಶಾಸ್ತ್ರ ಕೇಳಿ ಹೋಗುತ್ತಿದ್ದರಂತೆ. ಜೊತೆಗೆ ಕವಡೆ ಹಾಕುವುದು, ತಡೆ ಹೊಡೆಯುವುದು ಕೆಲಸ ಮಾಡುತ್ತಿದ್ದ. ನಿನ್ನೆ ಅಮವಾಸ್ಯೆ ಆದ ಕಾರಣ ಶಾಲೆ ಮುಗಿಸಿ ಸಂಜೆ ಮನೆಯಿಂದ ಹೊರಗೆ ಹೋದವನು ವಾಪಸ್ ಬಂದೆ ಇಲ್ಲ. ಬೆಳಗಾದ ಮೇಲೆ ಸ್ಥಳೀಯರು ಗಮನಿಸಿ ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮೃತನಿಗೆ ನಾಲ್ವರು ಮಕ್ಕಳು, ಪತ್ನಿ ಇದ್ದು, ಇದೀಗ ಅನಾಥರಾಗಿದ್ದಾರೆ. ಮರಿಯಪ್ಪರನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಕಂಗಲಾಗಿದೆ.

ಇದನ್ನೂ ಓದಿ:ಧಾರವಾಡದಲ್ಲಿ ಚಿಕ್ಕಮ್ಮನನ್ನೇ ಕೊಂದ ಕೊಲೆಗಾರ ಅಂದರ್​; ಹತ್ಯೆಗೆ ಕಾರಣ ಬಾಯ್ಬಿಟ್ಟ ಹಂತಕ

ಇನ್ನು ವಿಚಾರ ತಿಳಿದ ಎಸ್​ಪಿ ಅಶೋಕ್ ವೆಂಕಟ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮರಿಯಪ್ಪ ಕೊಲೆಯಾಗಿದ್ದು, ನಿನ್ನೆ ರಾತ್ರಿ ಯಾರೋ ಮೂವರು ಜೊತೆಯಲ್ಲಿದ್ದ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಶ್ವಾನ ದಳ, ಎಫ್​ಎಸ್​ಎಲ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಿಯರೇ ಕೊಲೆ ಮಾಡಿರುವ ಸುಳಿವು ಸಿಕ್ಕಿದೆ. ಶೀಘ್ರವಾಗಿ ಆರೋಪಿಗಳು ಪತ್ತೆ ಹಚ್ಚುವುದಾಗಿ ಎಸ್​ಪಿ ಅಶೋಕ್ ವೆಂಕಟ್ ಹೇಳಿದ್ದಾರೆ. ಇನ್ನು ಇದು ಮೇಲ್ನೋಟಕ್ಕೆ ಮಾಟ ಮಂತ್ರದ ಕಾರಣದಿಂದ ಕೊಲೆ ಮಾಡಿರುವ ಬಗ್ಗೆ ಸುಳಿವು ಗೊತ್ತಾಗಿದೆ. ಶವದ ಜೊತೆ ಬ್ಯಾಗ್​​ವೊಂದು ಪತ್ತೆಯಾಗಿದ್ದು, ಅದರಲ್ಲಿ ಕೋಳಿ ಮೊಟ್ಟೆ, ಅರಿಶಿನ ಕುಂಕುಮ, ನಿಂಬೆಹಣ್ಣು ಸೇರಿದಂತೆ ಮಾಟ-ಮಂತ್ರದ ಸಾಮಾಗ್ರಿಗಳು ಇದ್ದವು ಎನ್ನಲಾಗಿದೆ. ಪೊಲೀಸರ ತನಿಖೆ ಬಳಿಕ ಸತ್ಯ ತಿಳಿಯಲಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ