ಪೋಕ್ಸೋ ಪ್ರಕರಣ: ಪೋಷಕರ ಜೊತೆ ತೆರಳಿದ್ದ ಓರ್ವ ಬಾಲಕಿ ವಾಪಸ್
ನಿನ್ನೆ ಸಂತ್ರಸ್ತ ಬಾಲಕಿಯರಿಗೆ ಪೋಷಕರ ಜೊತೆ ಕಳುಹಿಸುವ ಪ್ರಕ್ರಿಯೆ ನಡೆದಿದೆ. ಈ ಪೈಕಿ ಓರ್ವ ಬಾಲಕಿ ಮನೆಗೆ ತೆರಳಿದ ಅರ್ಧಗಂಟೆಯಲ್ಲೇ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಮನೆಗೆ ವಾಪಸ್ಸಾಗಿದ್ದಾಳೆ.
ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ (POCSO Case/ POCSO Act) ಸಂಬಂಧ ಬಾಲಮಂದಿರದಲ್ಲಿದ್ದ ಸಂತ್ರಸ್ತ ಬಾಲಕಿಯರನ್ನು ಗುರುವಾರ (ಅ.20)ದಂದು ಪೋಷಕರೊಂದಿಗೆ ಕಳುಹಿಸುವ ಪ್ರಕ್ರಿಯೆ ನಡೆದಿದೆ. ಆದರೆ ಓರ್ವ ಬಾಲಕಿ ಮನೆಗೆ ಹೋದ ಅರ್ಧ ಗಂಟೆಯಲ್ಲೇ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಮನೆಗೆ ವಾಪಸ್ಸಾಗಿದ್ದಾಳೆ. ತಾನು ಎಸ್. ಕೆ ಬಸವರಾಜನ್-ಸೌಭಾಗ್ಯ ಮನೆಯಲ್ಲೇ ಇರುವುದಾಗಿ ಹೇಳಿದ್ದು, ಸದ್ಯ ಸಂತ್ರಸ್ತೆಯ ಮನವೊಲಿಸಿ ಬಾಲಮಂದಿರದಲ್ಲಿ ಇರಿಸಲಾಗಿದೆ.
ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಆಗಸ್ಟ್ 26ರಂದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಫೋಕ್ಸೋ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಬಳಿಕ ಸಂತ್ರಸ್ತ ಬಾಲಕಿಯರನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆರೋಪ ಸಂಬಂಧ ಬಾಲಕಿಯರ ಹೇಳಿಕೆಗಳನ್ನು ಕಲೆ ಹಾಕಿಕೊಳ್ಳಲಾಗಿದೆ. ಅದರಂತೆ ನಿನ್ನೆ ಸಂತ್ರಸ್ತರನ್ನು ಬಾಲಮಂದಿರದಿಂದ ಪೋಷಕರ ಜೊತೆ ಕಳುಹಿಸುವ ಪ್ರಕ್ರಿಯೆ ನಡೆದಿದೆ. ಆದರೆ ಓರ್ವ ಬಾಲಕಿ ಅರ್ಧಗಂಟೆಯಲ್ಲೇ ಮನೆಯಿಂದ ಎಸ್. ಕೆ ಬಸವರಾಜನ್ ನಿವಾಸಕ್ಕೆ ವಾಪಸ್ ಆಗಿದ್ದಾಳೆ.
ಬಸವರಾಜನ್ ಮತ್ತು ಸೌಭಾಗ್ಯ ಅವರನ್ನು ಸಂತ್ರಸ್ತೆ ಭೇಟಿಯಾಗಿ ತನ್ನ ಮನೆಯಲ್ಲಿ ಇರಲಾಗದು ಎಂದು ಹೇಳಿಕೊಂಡಿದ್ದಾಳೆ. ಈ ಹಿನ್ನೆಲೆ ಸೌಭಾಗ್ಯ ಅವರು ಸಂತ್ರಸ್ತೆಯನ್ನು ಮಹಿಳಾ ಠಾಣೆಗೆ ಕರೆತಂದರು. ಅದರಂತೆ ಪೊಲೀಸರು ವಿಚಾರಣೆ ನಡೆಸಿ ಆಕೆಯನ್ನು ಬಾಲಮಂದಿರಕ್ಕೆ ಕಳಿಸಿದ್ದಾರೆ.
ಮುರುಘಾಶ್ರೀ ನ್ಯಾಯಾಂಗ ಬಂಧನ ಅವಧಿ ಅಂತ್ಯ
ಪೋಕ್ಸೋ ಪ್ರಕರಣದಡಿ ಜೈಲಿನಲ್ಲಿರುವ ಮುರುಘಾಶ್ರೀಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯಗೊಳ್ಳಲಿದೆ. ಅದರಂತೆ ಪೊಲೀಸರು ಶ್ರೀಗಳನ್ನು ಬೆಳಗ್ಗೆ 11ಕ್ಕೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇನ್ನೊಂದೆಡೆ ಮಹಿಳಾ ವಾರ್ಡನ್ ನ್ಯಾಯಾಂಗ ಬಂಧನವೂ ಇಂದು ಅಂತ್ಯವಾಗಲಿದೆ. ಈಕೆಯನ್ನು ಪೊಲೀಸರು ಶಿವಮೊಗ್ಗದ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತರಲಿದ್ದಾರೆ.
ಪ್ರಕರಣದಲ್ಲಿ ಮುರುಘಾ ಶ್ರೀ ಹಾಗೂ ಮಹಿಳಾ ವಾರ್ಡನ್ಗೆ ಈವಗರೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೊಮ್ಮೆ ಕಸ್ಟಡಿಗೆ ಕೇಳಿದರೆ ಕಸ್ಟಡಿ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಸದ್ಯ ಜಾಮೀನು ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 am, Fri, 21 October 22