ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ ಪುಣೆಯ ಮಹಿಳೆ ಮೇಲೆ ಅತ್ಯಾಚಾರ
ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿದ್ದ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ದತ್ತಾತ್ರೇಯ ರಾಮದಾಸ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ಫೀಡ್ ಮೂಲಕ ಆತನನ್ನು ಗುರುತಿಸಲಾಗಿದೆ. ಆದರೆ ಆತನನ್ನು ಇನ್ನೂ ಬಂಧಿಸಿಲ್ಲ. ಪೊಲೀಸ್ ಠಾಣೆಗೆ ಸ್ವಲ್ಪ ದೂರದಲ್ಲೇ ಅತ್ಯಾಚಾರ ನಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಆ ಪೊಲೀಸ್ ಠಾಣೆಯ 23 ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಪುಣೆ (ಫೆಬ್ರವರಿ 26): ಮಂಗಳವಾರ ಮುಂಜಾನೆ ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದ ಮಧ್ಯದಲ್ಲಿ ಮತ್ತು ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಘಟನೆ ಇದೀಗ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ನಂತರ ಆರೋಪಿಗಾಗಿ ವ್ಯಾಪಕ ಹುಡುಕಾಟ ನಡೆಯುತ್ತಿದೆ. ದತ್ತಾತ್ರೇಯ ರಾಮದಾಸ್ ಎಂದು ಗುರುತಿಸಲಾದ ಆರೋಪಿಯ ವಿರುದ್ಧ ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ಮಹಿಳೆ ಪೈಥಾನ್‌ಗೆ ಹೋಗುವ ಬಸ್‌ಗಾಗಿ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ ನಂಬಿಸಿದ ಒಬ್ಬ ವ್ಯಕ್ತಿ ಆಕೆಯ ಬಳಿಗೆ ಬಂದಿದ್ದಾನೆ. ಆಗ ಆತನ ಮಾತನ್ನು ನಂಬಿದ ಮಹಿಳೆ MSRTC ಡಿಪೋದ ವಿಶಾಲ ಆವರಣದಲ್ಲಿ ನಿಲ್ಲಿಸಲಾಗಿದ್ದ ಖಾಲಿ ಬಸ್ ಹತ್ತಿದ್ದಾಳೆ. ಆಕೆ ಬಸ್ ಹತ್ತುತ್ತಿದ್ದಂತೆ, ಆರೋಪಿ ಆಕೆಯ ಹಿಂದೆಯೇ ಬಸ್ ಹತ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಮೂಲಕ ಅಧಿಕಾರಿಗಳು ಆರೋಪಿಯನ್ನು ಗುರುತಿಸಿದ್ದಾರೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಹಲವಾರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಅತ್ಯಾಚಾರ ವಿರೋಧಿಸಿದ್ದಕ್ಕೆ 3 ವರ್ಷದ ಮುದ್ದು ಮಗುವಿನ ಮುಖ ವಿರೂಪಗೊಳಿಸಿದ ಬಾಲಕ
ಈ ಘಟನೆಯ ನಂತರ, ಸ್ವರ್ಗೇಟ್ ಬಸ್ ಡಿಪೋದಲ್ಲಿನ ಭದ್ರತಾ ಲೋಪದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಬಸ್ ನಿಲ್ದಾಣದಲ್ಲಿ ನಿಯೋಜಿಸಲಾದ 23 ಭದ್ರತಾ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ. ಹೊಸ ಭದ್ರತಾ ಸಿಬ್ಬಂದಿಗೆ ಗುರುವಾರದಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆರೋಪಿ 36 ವರ್ಷದ ರಾಮದಾಸ್ ಈಗಾಗಲೇ ಕ್ರಿಮಿನಲ್ ಕೇಸಿನ ಹಿನ್ನೆಲೆಯನ್ನು ಹೊಂದಿದ್ದಾರೆ.
#WATCH | Pune, Maharashtra: Shiv Sena (UBT) leader Vasant More along with other party leaders, holds a protest at the Swargate bus stand over the alleged rape of a 26-year-old woman. pic.twitter.com/du9aQCMJyL
— ANI (@ANI) February 26, 2025
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಘಟನೆಯನ್ನು “ಅತ್ಯಂತ ದುರದೃಷ್ಟಕರ, ದುಃಖಕರವಾಗಿದೆ” ಎಂದು ಕರೆದಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಪೊಲೀಸರಿಗೆ ಈ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆಗಳನ್ನು ನೀಡಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
“ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಘಟನೆ ಅತ್ಯಂತ ದುರದೃಷ್ಟಕರ. ಇದು ನಾಗರಿಕ ಸಮಾಜದಲ್ಲಿ ಎಲ್ಲರಿಗೂ ಕೋಪ ತರಿಸುವಂತಿದೆ. ಇದರಿಂದ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ಮಾಡಿದ ಅಪರಾಧ ಕ್ಷಮಿಸಲಾಗದು. ಅವರನ್ನು ಗಲ್ಲಿಗೇರಿಸುವುದನ್ನು ಹೊರತುಪಡಿಸಿ ಅವರಿಗೆ ಬೇರೆ ಯಾವುದೇ ಶಿಕ್ಷೆ ಇಲ್ಲ. ಈ ವಿಷಯದ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ನಾನು ಪುಣೆ ಪೊಲೀಸ್ ಆಯುಕ್ತರಿಗೆ ವೈಯಕ್ತಿಕವಾಗಿ ಸೂಚಿಸಿದ್ದೇನೆ” ಎಂದು ಅಜಿತ್ ಪವಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




