AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಚಿನ್ನದ ಸರ ದರೋಡೆ ಮಾಡಿದ ಕಿರಾತಕರು

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರೇ ಎಚ್ಚರ, ಮಧ್ಯರಾತ್ರಿಯಲ್ಲಿ ಕಾರು ತಡೆದು ದರೋಡೆ ಮಾಡುವವರು, ನಿದ್ದೆ ಬಂತೆಂದು ಕಾರು ನಿಲ್ಲಿಸಿದರೆ ಬಿಟ್ಟರೇ?

ಮಂಡ್ಯ: ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಚಿನ್ನದ ಸರ ದರೋಡೆ ಮಾಡಿದ ಕಿರಾತಕರು
ದರೋಡೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಮದ್ದೂರು ಠಾಣಾ ಪೊಲೀಸರು
TV9 Web
| Updated By: Rakesh Nayak Manchi|

Updated on: Jul 02, 2023 | 4:42 PM

Share

ಮಂಡ್ಯ: ಸಂಚರಿಸುತ್ತಿರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ಕಿರಾತಕರು, ನಿದ್ದೆ ಬಂತೆಂದು ನೀವಾಗಿಯೇ ಕಾರು ನಿಲ್ಲಿಸಿದರೆ ಸುಮ್ಮನೆ ಬಿಟ್ಟಾರೇ? ಬೆಂಗಳೂರು-ಮೈಸೂರು ದಶಪಥ ರಸ್ತೆಯ (Bengaluru-Mysuru Expressway) ಸರ್ವಿಸ್ ರಸ್ತೆಯಲ್ಲಿ ವಿಶ್ರಾಂತಿ ಮಾಡಲೆಂದು ಕಾರು ನಿಲ್ಲಿಸಿದಾಗ ಪೊಲೀಸರೆಂದು ಬೆದರಿಸಿ ನಂತರ ದರೋಡೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿ ನಡೆದಿದೆ.

ಇತ್ತೀಚಿಗಷ್ಟೇ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲನೆ ನಡೆಸಿದ್ದರು. ಹೆದ್ದಾರಿ ನ್ಯೂನತೆ, ಅಪಘಾತ, ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಸೂಚನೆಯನ್ನೂ ನೀಡಿದ್ದರು. ವಿಪರ್ಯಾಸವೆಂದರೆ ಎಡಿಜಿಪಿ ಬಂದ ಹೋದ ದಿನವೇ ಪೊಲೀಸರೆಂದು ಹೇಳಿ ಈ ದರೋಡೆ ನಡೆಸಲಾಗಿದೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಹೆದ್ದಾರಿ ಮದ್ದೂರು ಬಳಿ ಲೋಕಲ್ ಬಾರ್ ಆಯ್ತೇ? ‘ಕುಡುಕ ಮುಕ್ತ ಹೈವೇ’ಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಬೆಂಗಳೂರಿನಿಂದ ಮಡಿಕೇರಿಗೆ ಕಡೆಗೆ ಹೋಗುತ್ತಿದ್ದ ಮಡಿಕೇರಿ ಮೂಲದ ಯುವಕ ಮುತ್ತಪ್ಪ, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಿಶ್ರಾಂತಿ ಪಡೆಯಲೆಂದು ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿ ಕಾರಿನ ಬಳಿ ಬಂದ ಮೂವರು ಕಿರಾತಕರು, ನಾವು ಪೊಲೀಸರು ಎಂದು ಹೇಳಿ ಧಮ್ಕಿ ಹಾಕಿದ್ದಾರೆ. ನಂತರ ತಪಾಸಣೆ ನೆಪವೊಡ್ಡಿ ಮುತ್ತಪ್ಪ ಅವರ ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಗಾಯಗೊಳಿಸಿ 3.50 ಲಕ್ಷ ಮೌಲ್ಯದ 65 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಗಸ್ತು ಪೊಲೀಸರು ಗಾಯಾಳು ಮುತ್ತಪ್ಪ ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಮದ್ದೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಈಜಲೆಂದು ಹಳ್ಳಕ್ಕೆ ಇಳಿದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಮದ್ದೂರಮ್ಮ ದೇವಾಲಯ ಬಳಿ ನಡೆದಿದೆ. ಅಜಲಮ್ ಪಾಷಾ (16), ಮೊಹಮ್ಮದ್ ಅಲಿ (13) ಮೃತ ಬಾಲಕರು. ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಇಬ್ಬರು ದೇವಾಲಯದ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ