ವಿಜಯಪುರ: ವಿದ್ಯಾರ್ಥಿಗಳಿಂದ ಕಾರು ಸ್ವಚ್ಛಗೊಳಿಸಿದ ಶಾಲಾ ಮುಖ್ಯ ಶಿಕ್ಷಕ
ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಶಿಕ್ಷಕರ ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ನಡೆಯುತ್ತಿವೆ. ಇದೀಗ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿಯ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ತನ್ನ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ, ಫೆ.18: ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಶಿಕ್ಷಕರ ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ನಡೆಯುತ್ತಿವೆ. ಇದೀಗ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿಯ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ತನ್ನ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಅವರು ಶಾಲಾ ಆವರಣದಲ್ಲಿಯೇ ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಚ ಮಾಡಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕಾರ್ ಸ್ವಚ್ಛ ಮಾಡುತ್ತಿರುವ ವಿಡಿಯೋ ಸ್ಥಳಿಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಗಳನ್ನು ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಂಡ ಮುಖ್ಯ ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಾಲೆಗಳಲ್ಲಿ ಮಕ್ಕಳನ್ನು ಪಠ್ಯ, ಕ್ರೀಡೆ ಹೊರತಾಗಿ ಇತರೆ ಕೆಲಸಕ್ಕೆ ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯವಾಗಿ ನಿಷೇಧಿಸಿತ್ತು. ಇದೀಗ ನಿಷೇಧದ ನಡುವೆಯೂ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಹನಿ ನೀರಿಗೂ ಹಾಹಾಕಾರ; ಶಾಲೆ ಬಿಟ್ಟು ನೀರಿಗಾಗಿ ಓಡುತ್ತಿರುವ ಮಕ್ಕಳು
ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿಯೂ ಇಂತಹ ಯಾವುದೇ ಪ್ರಕರಣ ಘಟಿಸದಂತೆ ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕೆಂದು ಸೂಚನೆ ಇದೆ. ಒಂದು ವೇಳೆ ನಿಯಮ ಮೀರಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಿಬಂದಿ ವಿರುದ್ದ ಎಫ್ಐಆರ್ ದಾಖಲಿಸಲಾಗುವುದು ಮತ್ತು ಶಿಸ್ತುಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ, ದಾವಣಗೆರೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ದಾವಣಗೆರೆ (Davanagere) ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ಕ್ಕೂ ಅಧಿಕ ಬಾಲಕಿಯರು ಶೌಚಾಲಯ ಸ್ವಚ್ಛಗೊಳಿಸಿದ್ದರು. ಶಾಲೆಯ ಸಮವಸ್ತ್ರದಲ್ಲಿ ಪೊರಕೆ ಹಿಡಿದು ಬಾಲಕಿಯರು ಶೌಚಾಲಯ ಸ್ವಚ್ಚ ಮಾಡಿದ್ದರು. ಬಕೆಟ್ ನಲ್ಲಿ ನೀರು ತಂದು ಪೊರಕೆಯಿಂದ ಶೌಚಾಲಯ ಸ್ವಚ್ಚ ಗೊಳಿಸುತ್ತಿರುವ ಬಾಲಕಿಯರ ವಿಡಿಯೋ ವೈರಲ್ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Sun, 18 February 24