AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಭೀಮಾತೀರದ ಅಕ್ಕಳ ಭೀಭತ್ಸ ಕೃತ್ಯ: ಕೊಲೆ ಹಿಂದೆ ಇದೆ ಎರಡು ಪ್ರೇಮ ಕಹಾನಿ

8 ವರ್ಷದ ವರ್ಷದ ಹಿಂದೆ ಯುವಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದ ಆರೋಪಿಗಳನ್ನು ಬೆಂಗಳೂರಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಭಾಗ್ಯಶ್ರೀ ಮತ್ತು ಶಿವಪುತ್ರ ಕೊಲೆ ಆರೋಪಿಗಳು. ಲಿಂಗರಾಜ್ ಪೂಜಾರಿ ಕೊಲೆಯಾದ ಯುವಕ.

ವಿಜಯಪುರ: ಭೀಮಾತೀರದ ಅಕ್ಕಳ ಭೀಭತ್ಸ ಕೃತ್ಯ: ಕೊಲೆ ಹಿಂದೆ ಇದೆ ಎರಡು ಪ್ರೇಮ ಕಹಾನಿ
ಎಡದಿಂದ ಬಲಕ್ಕೆ ಭಾಗ್ಯಶ್ರೀ, ಲಿಂಗರಾಜ, ಸುಪುತ್ರಪ್ಪ
ವಿವೇಕ ಬಿರಾದಾರ
|

Updated on:Mar 19, 2023 | 9:31 AM

Share

ಬೆಂಗಳೂರು: 8 ವರ್ಷದ ವರ್ಷದ ಹಿಂದೆ ಯುವಕನೋರ್ವನನ್ನು ಭೀಕರವಾಗಿ ಕೊಲೆ (Murder) ಮಾಡಿ, ಪರಾರಿಯಾಗಿದ್ದ ಆರೋಪಿಗಳನ್ನು ಬೆಂಗಳೂರಿನ (Bengaluru) ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಭಾಗ್ಯಶ್ರೀ ಮತ್ತು ಸುಪುತ್ರಪ್ಪ ಕೊಲೆ ಆರೋಪಿಗಳು. ಲಿಂಗರಾಜ್ ಪೂಜಾರಿ ಕೊಲೆಯಾದ ಯುವಕ. ಆರೋಪಿಗಳು ಯುವಕನನ್ನು ಕೊಲೆ ಮಾಡಿ ಮೃತದೇಹ ಪೀಸ್ ಪೀಸ್ ಮಾಡಿ ಕೈ, ಕಾಲು, ರುಂಡ ಕತ್ತರಿಸಿ ಏರ್​ ಬ್ಯಾಗ್​ನಲ್ಲಿ ತುಂಬಿದ್ದರು. ಗುರುತು ಸಿಗದಂತೆ ದೇಹದ ಭಾಗ ಬೇರೆ ಬೇರೆ ಕಡೆ ಎಸೆದಿದ್ದರು. ಬಳಿಕ ಮಹಾರಾಷ್ಟ್ರದ ನಾಸಿಕ್​ನಲ್ಲಿ ತಲೆಮರೆಸಿಕೊಂಡಿದ್ದರು. ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಕೊಲೆ ಹಿಂದೆ ಇತ್ತು ಎರಡು ಪ್ರೇಮ ಕಹಾನಿ

ಆರೋಪಿಗಳಾದ ಸುಪುತ್ರಪ್ಪ ತಳಾವರ್ ಮತ್ತು ಭಾಗ್ಯಶ್ರೀ ಮೂಲತಃ ವಿಜಯಪುರ ಜಿಲ್ಲೆಯವರು. ಇಬ್ಬರು 2011-12 ರಲ್ಲಿ ಟಿಸಿಹೆಚ್ ಓದುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮ ಅರಳಿದೆ. ಲವ್ವಿನಲ್ಲಿ ಬಿದ್ರೆ ಏನೋ ಮೋಜು ಎಂಬಂತೆ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದರು. ಹೀಗೆ ಇದ್ದ ಪ್ರೇಮಿಗಳು ವಿವಾಹವಾಗಬೇಕು ಅಂತ ನಿರ್ಧರಿಸಿದ್ದರು. ಆದರೆ ಜಾತಿ ಕಾರಣಕ್ಕೆ ಇವರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು.

ನಂತರ 2014ರಲ್ಲಿ ಸುಪುತ್ರಪ್ಪ, ಕುಟುಂಬಸ್ಥರ ಮಾತನಿನ ಮೇರೆಗೆ ಬೇರೆ ಯುವತಿ ಜೊತೆಗೆ ಮದುವೆಯಾಗಿದ್ದನು. ಇದಾದ ನಂತರವೂ ಭಾಗ್ಯಶ್ರೀ ಮತ್ತು ಸುಪುತ್ರ ದೂರವಾಗಿರಲಿಲ್ಲ. ಇಬ್ಬರು ಪರಸ್ಪರ ಸಂಪರ್ಕದಲ್ಲಿ ಇದ್ದರು. ಮದುವೆಯಾದ ನಂತರ ಸುಪುತ್ರಪ್ಪ ಪತ್ನಿಯೊಂದಿಗೆ ಕಿರಿಕ್​ ಮಾಡಲು ಶುರು ಮಾಡಿದ್ದನು. ಇದರಿಂದ ರೋಸಿ ಹೋದ ಸುಪುತ್ರಪ್ಪ ಪತ್ನಿ, ಮದುವೆಯಾಗಿ 6 ತಿಂಗಳ ಬಳಿಕ ಪತಿಯನ್ನು ಬಿಟ್ಟುಹೋಗಿದ್ದಳು.

ಇದನ್ನೂ ಓದಿ: ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದಿದಕ್ಕೆ ಹೆಂಡತಿಯನ್ನು ಗೋಡೆಗೆ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಾಫ್ಟ್‌ವೇರ್ ಗಂಡ‌

ಬಳಿಕ ಸುಪುತ್ರಪ್ಪ ಬೆಂಗಳೂರಿನ ಜಿಗಣಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಇದೇ ವೇಳೆಗೆ ಅತ್ತ ವಿಜಯಪುರದ ಭೀಮಾತೀರದ ದೇವಗಾಂವ್​ದ ಭಾಗ್ಯಶ್ರೀ ತಮ್ಮ ಲಿಂಗರಾಜ್​ ಪೂಜಾರ್​ ಪ್ರೀತಿಯಲ್ಲಿ ಬಿದ್ದಿರುತ್ತಾನೆ. ಇದು ಲಿಂಗರಾಜ್ ಪ್ರಿಯತಮೆ ಕುಟಂಬಸ್ಥರಿಗೆ ಇಷ್ಟವಿರಲಿಲ್ಲ. ಹೀಗಾಗಿ ಲಿಂಗರಾಜ್ ಪೂಜಾರ್​ನನ್ನು ಕೊಲ್ಲಲು ಪ್ರಿಯತಮೆ ಕುಟುಂಬಸ್ಥರು ಸಂಚು ರೂಪಿಸಿದ್ದರು. ಈ ವಿಚಾರ ಭಾಗ್ಯಶ್ರೀ ಮತ್ತು ಕುಟುಂಬಸ್ಥರಿಗೆ ಗೊತ್ತಾಗಿತ್ತು.

ಆಗ ಭಾಗ್ಯಶ್ರೀ ತನ್ನ ಪ್ರಿಯಕರ ಸುಪುತ್ರಪ್ಪನನ್ನು ಸಂಪರ್ಕ ಮಾಡಿದ್ದಳು. ನಾವು ಬೆಂಗಳೂರಿಗೆ ಬಂದುಬಿಡುತ್ತೇವೆ. ನಮಗೂ ಕೆಲಸ ನೋಡು ಎಂದು ಹೇಳಿದ್ದಳು. ಇದಕ್ಕೆ ಸಮ್ಮತಿಸಿದ ಸುಪುತ್ರಪ್ಪ ಭಾಗ್ಯಶ್ರೀ ಮತ್ತು ಲಿಂಗರಾಜುನನ್ನ ಜಿಗಣಿಗೆ ಕರೆಸಿಕೊಂಡಿದ್ದನು. ಆದರೆ ಲಿಂಗರಾಜ್​ಗೆ, ಭಾಗ್ಯಶ್ರೀ ಮತ್ತು ಸುಪುತ್ರ ನಡುವಿನ ಲವ್​ ಸ್ಟೋರಿ ಗೊತ್ತಿರಲಿಲ್ಲ. ಹೀಗೆ ವಿಜಯಪುರದಿಂದ ಬಂದ ಭಾಗ್ಯಶ್ರೀ ಮತ್ತು ಲಿಂಗರಾಜ್, ಸುಪುತ್ರ ರೂಮ್​ನಲ್ಲಿ ಉಳಿದುಕೊಂಡಿದ್ದರು. ಲಿಂಗರಾಜ್​ಗೆ ಬೆಂಗಳೂರಿಗೆ ಬಂದ ಒಂದು ತಿಂಗಳ ಬಳಿಕ ಇವರ ಪ್ರೇಮಪುರಾಣ ಗೊತ್ತಾಗಿತ್ತು. ಈ ವಿಚಾರಕ್ಕೆ ಲಿಂಗರಾಜ್ ಪೂಜಾರ್ ಅಕ್ಕ ಭಾಗ್ಯಶ್ರೀ ಜೊತೆಗೆ ಜಗಳವಾಡಲು ಶುರು ಮಾಡಿದ್ದನು. ಅಂದಿನಿಂದ ಮೂವರ ನಡುವೆ ಜಗಳ ಶುರುವಾಗಿತ್ತು.

ನಡೆದೆ ಹೋಯ್ತು ಲಿಂಗರಾಜನ ಭೀಕರ ಕೊಲೆ

ಅದು ಆಗಸ್ಟ್ 10 2015. ಲಿಂಗರಾಜಯ ಮದ್ಯಪಾನ ಮಾಡಿ ಬಂದು, ಅಕ್ಕ ಭಾಗ್ಯಶ್ರೀ ಜೊತೆಗೆ ಜಗಳವಾಡಿ ಹೊಡಿಯಲು ಮುಂದಾಗಿದ್ದನು. ಇದರಿಂದ ರೊಚ್ಚಿಗೆದ್ದ ಭಾಗ್ಯಶ್ರೀ ಮತ್ತು ಸುಪುತ್ರಪ್ಪ ಲಿಂಗರಾಜನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಅಂದೇ ರಾತ್ರಿ ಮತ್ತಿನಲ್ಲಿದ್ದ ಲಿಂಗರಾಜ್​ ಅನ್ನು ಹೊಡೆದು ಕೊಂದಿದ್ದರು. ಬಳಿಕ ಏನು ಮಾಡಬೇಕೆಂದು ತೋಚದೆ ಮತ್ತು ರಾತ್ರಿಯೆಲ್ಲ ಮನೆಯಲ್ಲೇ ಮೃತದೇಹ ಇಟ್ಟುಕೊಂಡಿದ್ದರು. ಈ ವಿಷಯ ಕುಟಂಬಸ್ಥರಿಗೆ ಗೊತ್ತಾದರೆ ನಮ್ಮನ್ನು ಕೊಲೆ ಮಾಡುತ್ತಾರೆ ಅಂತ ಹೆದರಿ, ಒಂದು ಪ್ಲಾನ್​ ಮಾಡಿದ್ದರು. ಅದು ಲಿಂಗರಾಜನ ತುಂಡು ತುಂಡಾಗಿ ಕತ್ತರಿಸುವುದು.

ಇದರಂತೆ ಮರುದಿನ ಆಗಸ್ಟ್​ 11 ರಂದು ಜಿಗಣಿಗೆ ಬಂದು ಇಬ್ಬರು ಬ್ಯಾಗ್ ಮತ್ತು ಮಚ್ಚು ಖರೀದಿಸಿದ್ದರು. ಇಡೀ ದಿನ ಕುಳಿತು ಲಿಂಗರಾಜ್ ಮೃತದೇಹವನ್ನು ಕಟ್ ಮಾಡಿದ್ದರು. ಮೃತದೇಹವನ್ನು 20 ಪೀಸ್​ಗಳನ್ನಾಗಿ ಮಾಡಿ, ರುಂಡ, ದೇಹದ ಭಾಗ, ತೊಡೆಯನ್ನು ಕೆರೆಗೆ ಬಿಸಾಡಿದ್ದರು. ನಂತರ ಕೈ, ಕಾಲು ಮತ್ತು ಮಚ್ಚನ್ನು ಪೊದೆಯೊಂದರ ಬಳಿ ಬಿಸಾಡಿದ್ದರು. ನಂತರ ಬಸ್ ಹಿಡಿದು ಪೂನಾಗೆ ತೆರಳಿದರು. ಅಲ್ಲಿಂದ ಮುಂಬೈ, ಮುಂಬೈನಿಂದ ನಾಸಿಕ್​​ಗೆ ತೆರಳಿದರು. ಈ ವೇಳೆ ಸಿಕ್ಕಿಹಾಕಿಕೊಳ್ಳುವ ಭಯದಿಂದ ಭಾಗ್ಯಶ್ರೀ ಮತ್ತು ಸುಪುತ್ರ ಮನೆಯವರ ಸಂಪರ್ಕ ಕೂಡ ಮಾಡಿರಲಿಲ್ಲ. ಮನೆಯವರು ಕೂಡ ಇವರು ಮೃತಪಟ್ಟಿದ್ದಾರೆಂದು ಭಾವಿಸಿದ್ದರು.

ಸಿಕ್ಕಿಬಿದ್ದ ಹಂತಕರು

ಕೆರೆಯಲ್ಲಿ ಹೆಣವನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ದೇಹವನ್ನು ಪರಿಶೀಲಿಸಿ ಡಿಎನ್ಎ ಪರೀಕ್ಷೆಗೆ ಒಳಪಡಿಸಿ, ಅದರ ಆಧಾರದ ಮೇಲೆ ಮಾಹಿತಿ ಕಲೆ ಹಾಕಿದಾಗ ಲಿಂಗರಾಜ್​ ಅನ್ನೋದು ಗೊತ್ತಾಗಿದೆ. ತನಿಖೆ ಇಳಿದ ಜಿಗಣಿ ಪೊಲೀಸರಿಗೆ ಆರೋಪಿಗಳ ಸುಳಿವು ಸಿಗೋದೆ ಇಲ್ಲ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಹುಡುಕಾಡಿದರು ಮಾಹಿತಿ ಸಿಕ್ಕಿರಲಿಲ್ಲ. ಆರೋಪಿಗಳು ಸಿಗದ ಹಿನ್ನಲೆ 2018 ರಲ್ಲಿ ಸಿ-ರಿಪೋರ್ಟ್ ಹಾಕಲಾಗಿತ್ತು.

ಇತ್ತೀಚೆಗೆ ನಡೆದ ದೆಹಲಿ ಶ್ರದ್ಧಾ ಕೇಸ್ ಬಳಿಕ ಅಲರ್ಟ್ ಆದ ಜಿಗಣಿ ಪೊಲೀಸರು, ಮತ್ತೆ ಆರೋಪಿಗಳ ಪತ್ತೆಗೆ ಇನ್ಸ್​ಪೆಕ್ಟರ್ ಸುದರ್ಶನ್ ತಂಡ ಮುಂದಾಗಿದೆ. ತಂಡ ಜಗಣಿ ವ್ಯಾಪ್ತಿಯಲ್ಲಿದ್ದ ಕಂಪನಿಗಳಲ್ಲಿ ವಿಚಾರಿಸಿದ್ದಾರೆ. ಆಗ ಇವರ ಮಾಹಿತಿ ಸಿಕ್ಕಿದೆ. ಆಗ ಪೊಲೀಸರಿಗೆ ತಿಳಿದಿದ್ದು, ಇಬ್ಬರು ಶಂಕರಪ್ಪ ಮತ್ತು ಪ್ರಿಯಾಂಕ ಎಂದು ಹೆಸರು ಬದಲಿಸಿಕೊಂಡು ಮಹಾರಾಷ್ಟ್ರದಲ್ಲಿದ್ದು, ಮದುವೆಯಾಗಿದ್ದು ಮತ್ತು ಒಂದು ಮಗು ಇದೆ ಎಂದು. ನಂತರ ಮಹಾರಾಷ್ಟ್ರಕ್ಕೆ ತೆರಳಿದ ಪೊಲೀಸರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಂತಕರನ್ನು ಬಂಧಿಸಿ ಕರೆ ತಂದಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 am, Sun, 19 March 23