ಕುಡಿದು ಬಂದು ಅಕ್ಕನ ಪೀಡಿಸುತ್ತಿದ್ದ ಭಾವನ ಕೊಲೆ ಮಾಡಿದ ಭಾಮೈದ; ಪ್ರಕರಣ ಮುಚ್ಚಿ ಹಾಕಲು ಹೈಡ್ರಾಮ
ಆತ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ. ಆತನ ಅಕ್ಕ ಆತನನ್ನು ತಾಯಿ ಪ್ರೀತಿ ಕೊಟ್ಟು ಸಾಕಿದ್ದಳು. ಅಕ್ಕ ಅಂದ್ರೆ, ಆತನಿಗೆ ಎಲ್ಲಿಲ್ಲದ ಪ್ರೀತಿ. ಈ ಮಧ್ಯೆ ಆಕೆಯ ಗಂಡ ಕುಡಿದು ಬಂದು ಪೀಡಿಸುತ್ತಿದ್ದು, ಭಾವನ ಕಾಟ ತಾಳದ ಭಾಮೈದ ಇದೀಗ ಕೊಲೆ ಮಾಡಿ ಪೊಲೀಸರ ಅತಿಥಿ ಆಗಿದ್ದಾನೆ.
ಹಾವೇರಿ: ಜಿಲ್ಲೆಯ ಹಾನಗಲ್(Hangal)ತಾಲೂಕಿನ ಆಡೂರು ಗ್ರಾಮದಲ್ಲಿ ಪ್ರೇಮಾ ಹಾಗೂ ಮೈಲಾರಪ್ಪ ಎಂಬುವವರು 21 ವರ್ಷಗಳ ಹಿಂದೆ ಮದುವೆ ಆಗಿದ್ರು, ಮದುವೆಯಾದ ಕೆಲವೆ ದಿನಗಳಲ್ಲಿ ತಾಯಿಯನ್ನ ಕಳೆದಕೊಂಡ ಪ್ರೇಮಾ, 20 ತಿಂಗಳ ತನ್ನ ಪುಟ್ಟ ತಮ್ಮ ರಮೇಶ್ನನ್ನು ತಾಯಿಯ ಪ್ರೀತಿ ಕೊಟ್ಟು ಸಾಕಿದ್ದಳು, ರಮೇಶ್ ಎರಡನೆ ತಾಯಿಯ ಬಳಿ ಹೋಗದೆ ಕಳೆದ 25 ವರ್ಷಗಳಿಂದ ಅಕ್ಕಳ ಜೊತೆಗೆ ಇದ್ದ. ಅಕ್ಕ ಎನ್ನುವ ಬದಲು ಅಮ್ಮ ಎಂದು ಕರೆಯುತ್ತಿದ್ದ, ತನ್ನ ಅಕ್ಕಳಿಗೆ ಯಾರೇ ಬೈದರೂ ರಮೇಶ್ ಸಹಿಸಿಕೊಳ್ಳುತ್ತಿರಲಿಲ್ಲ. ಅಮ್ಮನ ನೆನಪು ಬಾರದ ಹಾಗೆ ಅಕ್ಕ ಪ್ರೇಮಾ ತನ್ನ ತಮ್ಮನನ್ನು ಸಾಕಿದ್ದಳು. ಇತ್ತ ರಮೇಶ್ನ ಭಾವ ಮೈಲಾರಪ್ಪ ಪ್ರತಿದಿನ ಕುಡಿಯುತ್ತಿದ್ದ. ಕುಡಿದು ಆತನ ಪಾಡಿಗೆ ಆತ ಇರುತ್ತಿದ್ರೆ, ಏನು ಸಮಸ್ಯೆ ಆಗುತ್ತಿರಲಿಲ್ಲ, ಕುಡಿದು ಬಂದು ಹೆಂಡತಿ ಪ್ರೇಮಾಳನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿದ್ದ. ಜೊತೆಗೆ ,ಕುಡಿಯಲು ದುಡ್ಡ ಕೊಡು ಎಂದು ಪೀಡಿಸುತ್ತಿದ್ದ. ತನ್ನ ಅಕ್ಕಳಿಗೆ ಭಾವ ಕೊಡುತ್ತಿರುವ ಕಿರುಕಳ ಸಹಿಸದ ರಮೇಶ್ ತನ್ನ ಭಾವ ಮೈಲಾರಪ್ಪನನ್ನ ಕೊಲೆ(Murder) ಮಾಡಿದ್ದಾನೆ.
ಕುಡಿದು ಬಂದು ಪ್ರತಿದಿನ ಜಗಳ
ಪ್ರತಿದಿನ ಕುಡಿದು ಬಂದು ಜಗಳ ಮಾಡುತ್ತಿದ್ದ ಮೈಲಾರಪ್ಪ. ಬೆಳಿಗ್ಗೆ ಆದರೆ, ಎಂದಿನಂತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಜೊತೆಗೆ ರಮೇಶ್ ಕೂಡ ಆತನ ಜೊತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಇಬ್ಬರು ಆಗಾಗ ಒಟ್ಟಿಗೆ ಕೆಲಸಕ್ಕೆ ಹೋಗಿ ಬರುವಾಗ ಒಟ್ಟಿಗೆ ಏಣ್ಣೆ ಕೂಡ ಹೊಡೆಯುತ್ತಿದ್ದರು. ಆದ್ರೆ, ಅಕ್ಕಳಿಗೆ ತನ್ನ ಭಾವ ಕೊಡುತ್ತಿರುವ ಕಿರುಕಳದ ಬಗ್ಗೆ ರಮೇಶ್ನಿಗೆ ನೋವಿತ್ತು. ಮನೆ ನಡೆಸಲು ರಮೇಶ್ನೆ ಅಕ್ಕಳಿಗೆ ಹಣ ತಂದು ಕೊಡುತ್ತಿದ್ದ. ಆದ್ರೆ, ಮೈಲಾರಪ್ಪ ಮಾತ್ರ ಗಳಿಸಿದ ಹಣ ಎಲ್ಲವನ್ನ ಕುಡಿದು ಹಾಳು ಮಾಡುತ್ತಿದ್ದ.
ಇದನ್ನೂ ಓದಿ:ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಅತ್ಯಾಚಾರ, ಕೊಲೆ ಕೇಸ್: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕುಡಿಯಲು ಹಣಬೇಕೆಂದು ಜಗಳ
ಮೈಲಾರಪ್ಪ ಮತ್ತು ಪ್ರೇಮಾ ದಂಪತಿಗೆ ಮೂವರು ಹೆಣ್ಣುಮಕ್ಕಳು ಇದ್ದಾರೆ. ಜುಲೈ 15 ರಂದು ಮೂರನೆಯವಳಿಗೆ ಭಾರಿ ಜ್ವರ ಕಾಣಿಸಿಕೊಂಡಿದೆ. ಗ್ರಾಮದಲ್ಲಿನ ವೈದ್ಯರು ಹುಬ್ಬಳ್ಳಿಗೆ ಹೊಗುವಂತೆ ಸೂಚಿಸಿದ್ದಾರೆ. ಅದರಿಂದ ಹುಬ್ಬಳ್ಳಿಗೆ ಹೊಗುತ್ತೇನೆ ಎಂದು ತನ್ನ ಪತಿಗೆ ಕೇಳಿದಾಗ, ನಾನು ಬರ್ತೆನಿ, ಆದ್ರೆ, ಈಗ ಸ್ವಲ್ಪ ಕುಡಿಯಲು ಹಣ ಕೊಡು ಎಂದು ಜಗಳ ಮಾಡಿದ್ದಾನೆ. ಆಗ ರಮೇಶ್ ಮೈಲಾರಪ್ಪನಿಗೆ ಸ್ವಲ್ಪ ಹಣ ಕೊಟ್ಟು ಕಳುಹಿಸಿ, ಭಾವನಿಗೆ ಗೊತ್ತಾಗದ ಹಾಗೆ ತನ್ನ ಅಕ್ಕ ಹಾಗೂ ಅಕ್ಕಳ ಮಗಳನ್ನು ಹುಬ್ಬಳ್ಳಿ ಬಸ್ಗೆ ಹತ್ತಿಸಿ ಕಳುಹಿಸಿದ್ದಾನೆ. ಜ್ವರ ಭಾರಿ ಕಾಣಿಸಿಕೊಂಡ ಹಿನ್ನೆಲೆ ಆ ದಿನ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ತಾಯಿ ಮಗಳು ಇಬ್ಬರು ಕೂಡ ಹುಬ್ಬಳ್ಳಿಯಲ್ಲೆ ಇದ್ದರು.
ಭಾವ ಮತ್ತು ಭಾಮೈದನ ನಡುವೆ ಗಲಾಟೆ
ಜುಲೈ 15 ರ ರಾತ್ರಿ 11 ಗಂಟೆ ಸುಮಾರಿಗೆ ಭಾವ ಮತ್ತು ಭಾಮೈದ ಇಬ್ಬರು ಕುಡಿದು ಮನೆಗೆ ಬಂದಿದ್ದಾರೆ. ಆ ದಿನ ಮನೆಯಲ್ಲಿ ಹೆಂಡತಿ ಇಲ್ಲದನ್ನ ಕಂಡ ಮೈಲಾರಪ್ಪ ರಮೇಶ್ನಿಗೆ ಬೈದು, ಆತನ ಅಕ್ಕ ಮತ್ತು ಆತನಿಗೂ ನಿಂದಿಸಿದ್ದಾನೆ. ಇಬ್ಬರ ನಡುವೆ ದೊಡ್ಡ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಕುಡಿದ ಮತ್ತಿನಲ್ಲಿ ಇದ್ದ ರಮೇಶ್ ಕಬ್ಬಿಣದ ಸಮಯ(ಪೂಜಾ ಸಾಮಗ್ರಿ )ದಿಂದ ಮೈಲಾರಪ್ಪನ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾನೆ. ರಮೇಶ್ ಹೊಡೆದ ಹೊಡೆತಕ್ಕೆ ಮೈಲಾರಪ್ಪ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಇತ್ತ ಭಾವ ಸಾವನಪ್ಪಿದ್ದೂ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ರಮೇಶ್ ಕಬ್ಬಿಣದ ಸಮಯ(ಪೂಜಾ ಸಾಮಗ್ರಿ)ಯನ್ನು ಬಚ್ಚಿಟ್ಟಿದ್ದಾನೆ. ಕೆಳಗೆ ಬಿದ್ದಿದ್ದ ರಕ್ತವನ್ನು ಸ್ವಲ್ಪ ಒರೆಸಿ, ಬೆಡ್ ಶೀಟ್ ಹೊದಿಸಿ ಚಾಪೆಯ ಮೇಲೆ ಮಲಗಿಸಿದ್ದಾನೆ. ರಮೇಶ್ ಕೂಡ ಹೆಣದ ಜೊತೆಗೆ ಬೆಳಿಗ್ಗೆ 8 ಗಂಟೆಯವರೆಗೂ ಮಲಗಿಕೊಂಡಿದ್ದ.
ಇದನ್ನೂ ಓದಿ:ನೇಣಿಗೆ ಶರಣಾದ ಗೃಹಿಣಿ; ಕೊಲೆ ಶಂಕೆ ವ್ಯಕ್ತಪಡಿಸಿ ಪತಿ ಮನೆ ಮುಂದೆ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ!
ಕೊಲೆ ಮಾಡಿ ನಾಟಕವಾಡಿದ ಭಾಮೈದ
ಬೆಳಿಗ್ಗೆ 8 ಗಂಟೆಗೆ ನಮ್ಮ ಭಾವ ಯಾಕೋ ಎದ್ದೆಳುತ್ತಿಲ್ಲವೆಂದು ಊರಿನ ಜನರಿಗೆ ಕರೆಸಿದ್ದಾನೆ. ರಾತ್ರಿ ಜಗಳ ಆಗಿದ್ದು ಗ್ರಾಮದ ಜನರಿಗೆ ಗೊತ್ತಿತ್ತು. ಯಾವುದಕ್ಕೂ ಇರಲಿ ಎಂದು ವಿಷಯವನ್ನು ಆಡೂರು ಠಾಣೆಯ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಡೂರು ಪೊಲೀಸರಿಗೆ ಇದು ಸಾವಲ್ಲ ಕೊಲೆ ಎಂಬುವುದು ಗೊತ್ತಾಗಿದೆ. ಆಗ ಪೊಲೀಸರು ತಮ್ಮ ಭಾಷೆಯಲ್ಲಿ ರಮೇಶ್ನಿಗೆ ವಿಚಾರಿಸಿದಾಗ ರಾತ್ರಿ ಆಗಿರುವ ವಿಷಯ ಬಾಯಿ ಬಿಟ್ಟಿದ್ದಾನೆ. ಸದ್ಯ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ