ಚಿಕ್ಕಮಗಳೂರು: ಮುಸ್ಲಿಂ ಸಮುದಾಯದವರು ಪೂಜಿಸುತ್ತಿದ್ದ ದೇವರ ಕಟ್ಟೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಪೂಜಾ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಘಟನೆ ನಗರದ ಹೊರವಲಯದಲ್ಲಿರುವ ಆದಿಶಕ್ತಿನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಆದಿಶಕ್ತಿ ನಗರದಲ್ಲಿನ ಮಸೀದಿಯ ಕೂಗಳತೆ ದೂರದಲ್ಲಿರುವ ಅರಳಿಮರಕ್ಕೆ ಮುಸ್ಲಿಮರು ಪೂಜೆ ಸಲ್ಲಿಸುತ್ತಿದ್ದರು. ವರ್ಷಕ್ಕೊಮ್ಮೆ ಉರುಸ್ ಸಮಯದಲ್ಲಿ ಇಲ್ಲಿ ಪೂಜೆ ನಡೆಯುತ್ತಿತ್ತು. ಈ ಮರಕ್ಕೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಕುರಾನ್, ಕಿಟ್ಟ, ಪೂಜಾ ಸಾಮಗ್ರಿ ಸೇರಿದಂತೆ ಧ್ವಜಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಡೆಸಿದ ಎಸ್ಪಿ ಅಕ್ಷಯ್, ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: Crime News: ಲಾಡ್ಜ್ನಲ್ಲಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಬಂಧನ, ನಸುಕಿನಲ್ಲಿ ಠಾಣೆಗೆ ಯುವತಿ ಕರೆತಂದ ಪೊಲೀಸರಿಗೆ ವಕೀಲ ಛೀಮಾರಿ
ಪಿಸ್ತೂಲ್ ತೋರಿಸಿ ಕಿಡ್ನಾಪ್ ಮಾಡಿ ದರೋಡೆ
ದೇವನಹಳ್ಳಿ: ಪಿಸ್ತೂಲ್ ತೋರಿಸಿ ಯುವಕ ಯುವತಿಯನ್ನು ಕಿಡ್ನಾಪ್ ಮಾಡಿ ದರೋಡೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ರಾಜಾಜಿ ನಗರದ ಒರಿಯನ್ ಮಾಲ್ ಬಳಿಗೆ ಯುವಕ ಯುವತಿ ಬಂದಿದ್ದರು. ಈ ವೇಳೆ ಮಾಲ್ನಲ್ಲಿ ಶಾಪಿಂಗ್ ಮಾಡಿ ಎಂಎಸ್ ರಾಮಯ್ಯ ಆಸ್ವತ್ರೆ ಬಳಿಯ ಐಸ್ ಕ್ರೀಂ ಪಾರ್ಲರ್ಗೆ ಬಂದಿದ್ದಾರೆ. ಅದರಂತೆ ಮಧ್ಯರಾತ್ರಿ ಐಸ್ ಕ್ರೀಂ ತಿಂದು ಕಾರಿನಲ್ಲಿ ಕುಳಿತಿದ್ದಾಗ ಬಂದ ದರೋಡೆಕೋರರು ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ.
ಇಬ್ಬರು ದರೋಡೆಕೋರರು ಯುವಕ ಯುವತಿಯನ್ನು ತಾಲೂಕಿನ ಸಿಂಗ್ರಹಳ್ಳಿ ಬಳಿಗೆ ಕರೆತಂದು ಹಣ, ಮೊಬೈಲ್ ದೋಚಿ ಸಿಂಗ್ರಹಳ್ಳಿ ಬಳಿ ಯುವಕನನ್ನು ಕೆಳಗಡೆ ಇಳಿಸಿದ್ದಾರೆ. ನಂತರ ಸ್ವಲ್ಪ ಮುಂದೆ ಸಾಗಿ ಯುವತಿಯನ್ನ ರಸ್ತೆ ಬದಿಯಲ್ಲಿ ಇಳಿಸಿ ಕಾರು ಸಹಿತ ಪರಾರಿಯಾಗಿದ್ದಾರೆ. ಯುವಕ ಯುವತಿ ಬಳಿ ಇದ್ದ ಎರಡು ಮೊಬೈಲ್, 20 ಸಾವಿರ ನಗದು ಮತ್ತು ಹ್ಯುಂಡೈ ಕಾರನ್ನು ಕೂಡ ಒಯ್ದಿದ್ದಾರೆ.
ಘಟನೆ ನಂತರ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡ ಯುವಕ, ಯುವತಿ, ಬೆಳಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು, ಖದೀಮರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಂಜಯ್ ನಗರ ಪೊಲೀಸರು ಮತ್ತು ವಿಶ್ವನಾಥಪುರ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Crime: ರಸ್ತೆಯಲ್ಲಿ ನಿಂತು ಮದ್ಯ ಸೇವನೆ: ಕುಡುಕರು, ಬಾರ್ ಮಾಲೀಕರಿಗೆ ಪೊಲೀಸರ ಖಡಕ್ ವಾರ್ನಿಂಗ್
ಸಿದ್ದಿಕಿ ಪಾಸ್‌ಪೋರ್ಟ್ ಮುಟ್ಟುಗೋಲು
ದಾವಣಗೆರೆ: ಹಫ್ತಾ ವಸೂಲಿ ಮಾಡುತ್ತಿದ್ದ ಮೈಸೂರು ಮೂಲದ ಇಮ್ರಾನ್ ಸಿದ್ದಿಕಿಯ ಪಾಸ್‌ಪೋರ್ಟ್ ವೀಸಾವನ್ನು ಪೊಲೀಸರು ಮುಟ್ಟುಗೋಲು ಹಾಕುವ ಮೂಲಕ ಶಾಕ್ ನೀಡಿದ್ದಾರೆ. ಆ ಮೂಲಕ ವಿದೇಶಕ್ಕೆ ಹಾರಲು ಹಾಕಿದ್ದ ಸಿದ್ದಿಕಿ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದಂತಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಮಾಡುವವರನ್ನ ಹೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ ಈತನನ್ನು ಕೆಲವು ದಿನಗಳ ಹಿಂದೆ ದಾವರಣಗೆರೆ ಪೊಲೀಸರು 75 ಲಕ್ಷ ನಗದು ಸಹಿತ ಬಂಧಿಸಿದ್ದರು. ಆದರೆ ಈತ ಷರತ್ತುಬದ್ಧ ಜಾಮೀನ ಮೇಲೆ ಜೈಲಿಂದ ಹೊರಬಂದಿದ್ದನು. ಅದರಂತೆ ಪೊಲೀಸರ ಕಣ್ತಪ್ಪಿಸಿ ವಿದೇಶಕ್ಕೆ ಹಾರಲು ಕೂಡ ಮುಂದಾಗಿದ್ದನು. ಆದರೆ ಇದಕ್ಕೂ ಮುನ್ನವೇ ಸಿದ್ದಿಕಿ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೀಗ ಸಿದ್ದಿಕಿಯ ಪಾಸ್‌ಪೋರ್ಟ್ ವೀಸಾವನ್ನು ಮುಟ್ಟುಗೋಲು ಹಾಕುವ ಮೂಲಕ ವಿದೇಶಕ್ಕೆ ಹಾರುವ ಯೋಜನೆಯನ್ನು ವಿಫಲಗೊಳಿಸಿದರು.
ವಿಚಾರಣೆಗೆ ತಡೆಯಾಜ್ಞೆ
ತನ್ನ ವಿರುದ್ಧ ವಿಚಾರಣೆ ನಡೆಸದಂತೆ ಸಿದ್ದಿಕಿ ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದಾನೆ. ಇದಕ್ಕೆ ಸೆಡ್ಡು ಹೊಡೆದ ಪೊಲೀಸರು ಸೂಕ್ತ ದಾಖಲೆ ಸಲ್ಲಿಕೆಗೆ ಯೋಜನೆ ರೂಪಿಸಿದ್ದಾರೆ. ತಡೆಯಾಜ್ಞೆ ತೆರವಿಗೆ ಶೀಘ್ರವೇ ಪೂರಕ ದಾಖಲೆ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ