ಉತ್ತರ ಕನ್ನಡ, ಸೆ.20: ದಟ್ಟ ಕಾಡಿನ ಮದ್ಯೆ ಇಂಗು ಗುಂಡಿಯಲ್ಲಿ ಅನಾಥವಾಗಿ ಬಿದ್ದಿರುವ ಶವ, ಶವ ಕಂಡು ಗಾಬರಿಯಾಗಿರುವ ಮಂದಿ. ಅಪರಿಚಿತ ಶವ ಯಾರದ್ದು ಎಂದು ತಲೆ ಕೆಡಿಸಿಕೊಂಡಿರುವ ಖಾಕಿ ಪಡೆ. ಈ ದೃಶ್ಯ ಕಂಡು ಬಂದಿದ್ದು ಉತ್ತರಕನ್ನಡ (Uttara Kannada) ಜಿಲ್ಲೆಯ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯ ಕೊರ್ಲಕಟ್ಟ ಗ್ರಾಮದ ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ. ಹೌದು, ಸೆಪ್ಟೆಂಬರ್ 15ರಂದು ದೊರೆತ ಮೃತದೇಹ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿತ್ತು. ಬೆಳ್ಳಂಬೆಳಗ್ಗೆ ಹಾಲು ಮಾರುತ್ತಿದ್ದ ವ್ಯಕ್ತಿ ಶಿವರಾಯ ಎಂಬವರು ಈ ರಸ್ತೆಯಲ್ಲಿ ಸಾಗುತ್ತಿದ್ದಾಗ ಬಂದ ವಾಸನೆ ಈ ಅರಣ್ಯ ಪ್ರದೇಶದ ಇಂಗು ಗುಂಡಿಯಲ್ಲಿ ಮುಚ್ಚಿಟ್ಟಿದ್ದ ಮೃತದೇಹದ ಪತ್ತೆಗೆ ಕಾರಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಬನವಾಸಿ ಹಾಗೂ ಶಿರಸಿ ಪೊಲೀಸರು ಪರಿಶೀಲನೆ ನಡೆಸಲಾರಂಭಿಸಿದ್ದರು.
ಸ್ಥಳಕ್ಕೆ ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ವೈದ್ಯರ ತಂಡ ಕೂಡ ಧಾವಿಸಿ ಸುತ್ತಮುತ್ತಲೂ ದೊರೆಯುವ ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಿದ್ದರು. ಆದರೂ, ಪೊಲೀಸರಿಗೆ ಕಾಡಿದ ಪ್ರಶ್ನೆಯೆಂದರೆ ಈ ಮೃತದೇಹ ಯಾರದ್ದು? ಹಾಗೂ ಕೊಲೆ ಮಾಡಿದ ಆರೋಪಿಗಳು ಯಾರು? ಈ ಪ್ರಕರಣ ಸಂಬಂಧಿಸಿ ಎಸ್ಪಿ ವಿಷ್ಣುವರ್ಧನ್ ಹಾಗೂ ಶಿರಸಿ ಡಿವೈಎಸ್‌ಪಿ ಗಣೇಶ್ ಮಾರ್ಗದರ್ಶನದೊಂದಿಗೆ ತಂಡ ರಚನೆ ಮಾಡಿ ಆರೋಪಿಗಳಿಗೆ ಬಲೆ ಬೀಸಲಾಗಿತ್ತು. ಮೂರು ದಿನದ ಬಳಿಕ ಶವವು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ಗ್ರಾಮದ ಅಶೋಕ ಗಿರಿಯಪ್ಪ ಉಪ್ಪಾರ(48) ಎಂದು ಗೊತ್ತಾಗಿದೆ. ಬಳಿಕ ತನಿಖೆ ಮುಂದುವರಿಸುತ್ತಾ ಹೋದಂತೆ ಆತನ ಜತೆ ಕೆಲಸಕ್ಕಿದ್ದ ಅದೇ ಊರಿನ ಯುವಕರಾದ ಕಿರಣ ಪರಶುರಾಮ ಸುರಳೇಶ್ವರ(23), ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ(20) ಹಾಗೂ ಇವರ ಗೆಳೆಯ ನಿರಂಜನ ಗೋವಿಂದಪ್ಪ ತಳವಾರ(20) ಎಂಬವರೇ ಸೇರಿ ಅಶೋಕನ ಕೊಲೆ ಮಾಡಿದ್ದರೆಂದು ತಿಳಿದ ಕೂಡಲೇ ಮೂವರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಗಿದೆ.
ಇದನ್ನೂ ಓದಿ:ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮತ್ತು ಅತ್ತೆಯನ್ನು ಕೊಲೆಗೈದ ಪತಿ
ಸುಮಾರು 15 ವರ್ಷಗಳ ಹಿಂದೆ ಪತ್ನಿ, ಕುಟುಂಬವನ್ನು ಬಿಟ್ಟಿದ್ದ ಅಶೋಕ್ ಗಿರಿಯಪ್ಪ ಉಪ್ಪಾರ. ಪಕ್ಕದ ಊರು ಅರಸಿನಕೆರೆಯಲ್ಲಿ ಮನೆ ಮಾಡಿ ನೆಲೆಸಿದ್ದ. ಈ ವ್ಯಕ್ತಿಯ ಜೊತೆ ಸುಮಾರು 5ರಿಂದ6 ವರ್ಷಗಳಿಂದ ಆರೋಪಿಗಳಾದ ಕಿರಣ ಪರಶುರಾಮ ಸುರಳೇಶ್ವರ(23), ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ(20) ಟ್ರ್ಯಾಕ್ಟರ್ ಚಲಾಯಿಸುವ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಮಾಲೀಕ ಅಶೋಕ್ 30 ಸಾವಿರ ಸಾಲವನ್ನು ಕೊಟ್ಟಿದ್ದ. ಸಾಲ ಮರು ಪಾವತಿಸುವಂತೆ ಕೇಳಿದ್ದೆ ಇವರಿಗೆ ತಪ್ಪಾಗಿದೆ. ಅದನ್ನೇ ಇಟ್ಟು ಕೊಂಡು ಅಶೋಕನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಕೊನೆಗೆ ಆತನನ್ನು ಕೊಲೆ ಮಾಡಿ ಹಾನಗಲ್- ಶಿವಮೊಗ್ಗ ರಾಜ್ಯ ಹೆದ್ದಾರಿಯ ಸುಮಾರು 6ಕಿ.ಮೀ. ದೂರದಲ್ಲಿ ಮೂಡುರು ರಿಸರ್ವ್ ಫಾರೆಸ್ಟ್‌ಗೆ ಬಾಡಿಗೆ ಸ್ವಿಫ್ಟ್ ಕಾರು ತೆಗೆದುಕೊಂಡು ಕಾಡಿನ ಮದ್ಯದ ಇಂಗೂ ಗುಂಡಿಯಲ್ಲಿ ಹಾಕಿ ಪರಾರಿಯಾಗಿದ್ದಾರೆ.
ಇನ್ನು ಮೃತನ ಪತ್ತೆಯಾದ ಕೂಡಲೇ ತಮ್ಮ ಮಾಹಿತಿದಾರರು ಹಾಗೂ ಸ್ಥಳೀಯರಿಂದ ಈ ಯುವಕರ ಬಗ್ಗೆ ಹಾಗೂ ಅವರ ಹಣ ನೀಡಬೇಕಾಗಿದ್ದ ವಿಚಾರವನ್ನು ಕಲೆ ಹಾಕಿದ ಪೊಲೀಸರು, ಅವರ ಟವರ್ ಲೊಕೇಶನ್ಗಳ ಮಾಹಿತಿ ಕೂಡ ಪಡೆದುಕೊಂಡು ಮೂವರನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಒಬ್ಬೊಬ್ಬರಾಗಿ ಬಾಯಿ ಬಿಟ್ಟಿದ್ದಾರೆ. ತಾವು ಮಾಡಿದ ಕೊಲೆ ಹಾಗೂ ಅದರ ಉದ್ದೇಶವನ್ನು ಹೇಳಿದ್ದಾರೆ. ಸದ್ಯಕ್ಕೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಈ ಪ್ರಕರಣದಲ್ಲಿ ಬೇರೆ ಆರೋಪಿಗಳು ಇದ್ದಾರೆಯೇ? ಹಣ ವಿಚಾರ ಬಿಟ್ಟು ಬೇರೆ ಯಾವುದೇ ಉದ್ದೇಶವಿದೆಯೇ? ಎಂಬುದನ್ನು ಕೂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಕೋಲಾರ: ಒಂಬತ್ತು ಇಂಚು ಜಾಗಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಒಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದು, ಅತೀ ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು ಬೇಧಿಸುವ ಮೂಲಕ ಜಿಲ್ಲೆಯ ಜನರಿಂದ ಭೇಷ್ ಅನಿಸಿಕೊಂಡಿದ್ದಾರೆ. ಆರೋಪಿಗಳು ಎಷ್ಟೇ ಚಾಲಾಕಿತನ ಪ್ರದರ್ಶಿಸಿದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಕೊಲೆ ಪ್ರಕರಣವೇ ಸಾಕ್ಷಿ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ