ತುಮಕೂರು: ವರದಕ್ಷಿಣೆ ಆಸೆಗಾಗಿ ಪತ್ನಿಯನ್ನು ಕೊಂದು ಡ್ರಾಮ ಮಾಡಿದ್ದ ಆರೋಪಿ ಅರೆಸ್ಟ್
ವರದಕ್ಷಿಣೆ ಆಸೆಗಾಗಿ ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಪ್ರಕರಣ ಸಂಬಂಧ ಆರೋಪಿ ಪತಿಯನ್ನು ತುರುವೇಕೆರೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು: ವರದಕ್ಷಿಣೆ ಆಸೆಗಾಗಿ ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಪ್ರಕರಣ (Husband Kills Wife Case) ಸಂಬಂಧ ಆರೋಪಿ ಪತಿಯನ್ನು ತುರುವೇಕೆರೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಹುಣಸೇಮಾರನಹಳ್ಳಿ ನಿವಾಸಿ ವಿನಯ್ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಶನಿವಾರ ಬಟ್ಟೆ ತೊಳೆಯುವ ನಿಟ್ಟಿನಲ್ಲಿ ವಿನಯ್ ಪತ್ನಿ ದರ್ಶಿನಿ (26), ಮಾಯಸಂದ್ರದ ಕೆರೆ ಬಳಿ ಹೋಗಿದ್ದಾಳೆ. ಈ ವಿಚಾರ ತಿಳಿದ ವಿನಯ್, ಬಟ್ಟೆ ಒಗೆಯುತ್ತಿದ್ದ ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆಗೈದಿದ್ದನು. ಬಳಿಕ ತನಗೇನು ತಿಳಿಯದಂತೆ ನಾಟಕವಾಡಿ ಪರಾರಿಯಾಗಿದ್ದನು.
ಬೆಂಗಳೂರಿನ ಯಲಹಂಕ ಮೂಲದ ಹುಣಸೇಮಾರನಹಳ್ಳಿ ನಿವಾಸಿಯಾಗಿರುವ ವಿನಯ್ ಕಳೆದ ಆರು ವರ್ಷಗಳ ಹಿಂದೆ ನಾಗಮಂಗಲ ಮೂಲದ ದರ್ಶಿನಿ ಎಂಬಾಕೆಯನ್ನ ಮದುವೆಯಾಗಿದ್ದ. ದಂಪತಿಗೆ 5 ವರ್ಷದ ಗಂಡು ಮಗು ಕೂಡ ಇದೆ. ಆದರೆ ವರದಕ್ಷಿಣೆ ಮೇಲೆ ಅತೀವ ಆಸೆ ಇಟ್ಟುಕೊಂಡಿದ್ದ ವಿನಯ್, ದರ್ಶಿನಿಯನ್ನು ಮದುವೆಯಾದಾಗಿಂದಲೂ ಹಲವು ಬಾರಿ ವರದಕ್ಷಿಣೆ ನೀಡುವಂತೆ ಪೀಡಿಸಿದ್ದನು.
ತಂದೆ ಮನೆಯಿಂದ ಹಣ ತರುವಂತೆ ಪತ್ನಿ ದರ್ಶಿನಿಗೆ ವಿನಯ್ ಪದೇ ಪದೇ ಕಿರುಕುಳ ಕೊಡುತ್ತಿದ್ದನು. ಆದರೆ ಕಳೆದ ಒಂದು ತಿಂಗಳ ಹಿಂದಷ್ಟೇ ಬೆಂಗಳೂರು ಬಿಟ್ಟ ದಂಪತಿ ತುರುವೇಕೆರೆ ತಾಲೂಕಿನ ಮಾಯಸಂದ್ರಕ್ಕೆ ಬಂದು ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಆದರೆ ವರದಕ್ಷಿಣೆ ನೀಡದ ಹಿನ್ನಲೆ ಕೋಪಗೊಂಡಿದ್ದನು.
ಇದನ್ನೂ ಓದಿ: ಯುವತಿಯ ಬೆತ್ತಲೆ ಜಗತ್ತಿನಲ್ಲಿ ಸಿಲುಕಿಕೊಂಡ ಯುವಕ, ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ
ಕಳೆದ ಶನಿವಾರ ಬಟ್ಟೆ ತೊರೆಯಲು ಕೆರೆ ಬಳಿ ತೆರಳಿದ್ದ ಪತ್ನಿ ದರ್ಶಿನಿಯನ್ನ ವಿನಯ್ ಕೆರೆಗೆ ತಳ್ಳಿ ಕೊಲೆ ಮಾಡಿ, ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಡ್ರಾಮಾ ಮಾಡಿದ್ದಾನೆ. ತನ್ನ ಮಾವ, ಅತ್ತೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಡ್ರಾಮಾ ಮಾಡಿದ್ದ ವಿನಯ್, ನಂತರ ತುರುವೇಕೆರೆ ಪೊಲೀಸ್ ಠಾಣೆಗೆ ತನ್ನ ಮಾವ ಹಾಗೂ ಸಂಬಂಧಿಕರ ಜೊತೆ ದೂರು ಕೊಡಲು ತೆರಳಿದ್ದನು. ಹೀಗೆ ಠಾಣೆಗೆ ಹೋಗಿದ್ದಾಗ ತನ್ನ ಪತ್ನಿಯ ಪೋಟೋ ತರುವುದಾಗಿ ಠಾಣೆಯಿಂದ ಹೊರಬಂದವನು ಪರಾರಿಯಾಗಿದ್ದನು.
ಈ ನಡುವೆ ಕೆರೆ ಬಳಿ ಬಂದ ಸ್ಥಳೀಯರು, ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ವಿನಯ್ ಪತ್ನಿ ದರ್ಶಿನಿ ಎಂದು ತಿಳಿದುಬಂದಿದೆ. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ವಿನಯ್ ಬಂಧನಕ್ಕೆ ತನಿಖೆ ಆರಂಭಿಸಿದ್ದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Tue, 31 January 23