ಕಾನ್ಪುರದ 90 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕುನಾಯಿ
ಉತ್ತರ ಪ್ರದೇಶದ ಕಾನ್ಪುರದ ರಾವತ್‌ಪುರದಲ್ಲಿರುವ ತನ್ನ ಮನೆಯಲ್ಲಿ 90 ವರ್ಷದ ಮೋಹಿನಿ ತ್ರಿವೇದಿ ಎಂಬ ಮಹಿಳೆಯನ್ನು ಆಕೆಯ ಸಾಕುಪ್ರಾಣಿ ಜರ್ಮನ್ ಶೆಫರ್ಡ್ ನಾಯಿ ಕಚ್ಚಿ ಕೊಂದಿದೆ. ಆಕೆ ಆ ನಾಯಿಯನ್ನು ಕೋಲಿನಿಂದ ಹೊಡೆದ ನಂತರ ಆ ಮಹಿಳೆಯ ಮೇಲೆ ನಾಯಿ ದಾಳಿ ಮಾಡಿದೆ. ಕಾನ್ಪುರದ ಬಳಿಯ ರಾವತ್‌ಪುರದಲ್ಲಿ 90 ವರ್ಷದ ಮಹಿಳೆಯ ಮೇಲೆ ಜರ್ಮನ್ ಶೆಫರ್ಡ್ ನಾಯಿ ಹಲ್ಲೆ ನಡೆಸಿ ಕೊಂದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ಪುರ, ಮಾರ್ಚ್ 19: ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೋಳಿ ಹಬ್ಬದಂದು 90 ವರ್ಷದ ಮಹಿಳೆಯೊಬ್ಬರನ್ನು ಸಾಕುನಾಯಿ ಜರ್ಮನ್ ಶೆಫರ್ಡ್ ನಾಯಿ ಕಚ್ಚಿ ಕೊಂದಿದೆ. ಆ ಮಹಿಳೆ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಆಕೆಯ ಮೊಮ್ಮಗ ಮುನ್ಸಿಪಲ್ ಕಾರ್ಪೊರೇಷನ್‌ಗೆ ತನ್ನ ನಾಯಿ ವಾಪಾಸ್ ಬೇಕೆಂದು ಮನವಿ ಮಾಡಿದ್ದಾನೆ. ಆ ಸಾಕು ನಾಯಿಯನ್ನು ತೆಗೆದುಕೊಂಡು ಹೋದಾಗಿನಿಂದ ಮನೆಯಲ್ಲಿ ಯಾರೂ ಊಟ ಮಾಡುತ್ತಿಲ್ಲ ಎಂದು ಹೇಳಿದ್ದಾನೆ. ಕಳೆದ ಶುಕ್ರವಾರ ಮೃತ ಮಹಿಳೆ ಮೋಹಿನಿ ತ್ರಿವೇದಿ ಅವರ ಮನೆಯ ಅಂಗಳದಲ್ಲಿ ನಾಯಿ ದಾಳಿ ಮಾಡಿತು. ನಾಯಿ ಆಕೆಯ ತಲೆ, ಮುಖ, ಹೊಟ್ಟೆ ಮತ್ತು ಕೈಗಳ ಮೇಲೆ ಹಲವು ಬಾರಿ ಕಚ್ಚಿದೆ. ಆಕೆಯನ್ನು ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಮಾರ್ಚ್ 14ರಂದು ಕಾನ್ಪುರದ ವಿಕಾಸ್ ನಗರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಮೋಹಿನಿ ತ್ರಿವೇದಿ ಎಂಬ ಮಹಿಳೆ ತನ್ನ ಮೊಮ್ಮಗ ಧೀರು ಪ್ರಶಾಂತ್ ತ್ರಿವೇದಿ ಮತ್ತು ಸೊಸೆ ಕಿರಣ್ ಜೊತೆ ವಾಸಿಸುತ್ತಿದ್ದಳು. ಆಕೆಯ ಮಗ ಸಂಜೀವ್ ತ್ರಿವೇದಿ ನಿವೃತ್ತ ಕರ್ನಲ್. ಆ ಕುಟುಂಬದ ಸಾಕುನಾಯಿ ಜರ್ಮನ್ ಶೆಫರ್ಡ್ ಇತ್ತೀಚೆಗೆ ಹೆಚ್ಚು ಆಕ್ರಮಣಕಾರಿಯಾಗಿತ್ತು. ಧೀರು ಮತ್ತು ಕಿರಣ್ ಇಬ್ಬರೂ ನಾಯಿಯನ್ನು ನಿಯಂತ್ರಿಸಲು ಪ್ರಯತ್ನ ಮಾಡಿ ಈಗಾಗಲೇ ಗಾಯಗೊಂಡಿದ್ದರು.
ಇಂದು ಆಕೆಯ ಮೊಮ್ಮಗ, ಮೆಕ್ಯಾನಿಕಲ್ ಎಂಜಿನಿಯರ್ ಧೀರ್ ಪ್ರಶಾಂತ್ ತ್ರಿವೇದಿ, ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಪಶುವೈದ್ಯಕೀಯ ವಿಭಾಗವನ್ನು ಸಂಪರ್ಕಿಸಿ ಆ ನಾಯಿಯನ್ನು ಮತ್ತೆ ಕುಟುಂಬದ ವಶಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ದಾಳಿಯನ್ನು ದೃಢಪಡಿಸಿದ ಉಪ ಪೊಲೀಸ್ ಆಯುಕ್ತರಾದ (ಪಶ್ಚಿಮ) ಆರತಿ ಸಿಂಗ್, ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಸತ್ಯಶೋಧನಾ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಅವರು ತಮ್ಮ ತಂಡಕ್ಕೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಮೂರು ನಾಯಿಗಳಿಂದ ಡೆಡ್ಲಿ ಅಟ್ಯಾಕ್: ಗಂಭೀರ ಗಾಯ, ICUನಲ್ಲಿ ಚಿಕಿತ್ಸೆ
ನಾಯಿ ಬೊಗಳಲು ಪ್ರಾರಂಭಿಸಿದಾಗ ಮೋಹಿನಿ ತ್ರಿವೇದಿ ಅವರು ಯಾವುದೋ ಕೆಲಸದ ನಿಮಿತ್ತ ಅಂಗಳಕ್ಕೆ ಹೋಗಿದ್ದರು. ಆಗ ನಾಯಿ ಬೊಗಳಿದ್ದರಿಂದ ಕೋಪಗೊಂಡ ಅವರು ಕೋಲಿನಿಂದ ನಾಯಿಯನ್ನು ಹೊಡೆದಿದ್ದಾರೆ. ಇದರಿಂದಾಗಿ ಆ ನಾಯಿ ಆಕೆಯ ಮೇಲೆ ದಾಳಿ ಮಾಡಿತು. ಆ ಸಮಯದಲ್ಲಿ ಹಾಜರಿದ್ದ ಕುಟುಂಬ ಸದಸ್ಯರಾದ ಧೀರ್ ಮತ್ತು ಅವರ ತಾಯಿ ಕಿರಣ್ ತ್ರಿವೇದಿ ಅವರು ಕಾಲು ಮುರಿತದಿಂದ ಬೆಡ್ ರೆಸ್ಟಿನಲ್ಲಿದ್ದರಿಂದ ಮಧ್ಯಪ್ರವೇಶಿಸಲು ಸಾಧ್ಯವಾಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ