ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ: ಅಳಿಯನ ಕೈಯಲ್ಲೇ ಹೆಣವಾದ ಪಂಚನಹಳ್ಳಿ ಸಾಹುಕಾರ
ತಂದೆಯ ಆಸ್ತಿಗಾಗಿ ಅಕ್ಕ ತಮ್ಮನ ನಡುವೆ ಗಲಾಟೆ. 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ, ಸೈಟ್ ಗಾಗಿ ಅಕ್ಕ ತಮ್ಮನ ನಡುವೆ ನಡೆಯುತ್ತಿದ್ದ ಗಲಾಟೆಗೆ ಪಂಚನಹಳ್ಳಿಯ ಸಾಹುಕಾರನ ಹತ್ಯೆಯಾಗಿದೆ. ಆಸ್ತಿ ವಿಚಾರಕ್ಕೆ ಮಾವ ತನ್ನ ತಾಯಿಗೆ ಬೈದ ಎಂದು ಅಳಿಯ ಮಾವನನ್ನೇ ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡುವ ಮೊದಲು ಮಾವನ ಬೈಕ್ನಲ್ಲೇ ರೌಂಡ್ ಹೊಡೆದಿದ್ದಾನೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಚಿಕ್ಕಮಗಳೂರು, (ಮಾರ್ಚ್ 19): ಅಮ್ಮನಿಗೆ ಬೈದಿದ್ದಕ್ಕೆ ತನ್ನ ಮಾವನನ್ನೇ ಕೊಂದಿರುವ (Murder) ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಂಚನಹಳ್ಳಿ ಸಾಹುಕಾರ ಎಂದೇ ಖ್ಯಾತಿ ಪಡೆದಿದ್ದ ಗಂಗಾಧರೇಗೌಡ ಅವರ ಮಗ ಸಿದ್ದರಾಮೇಗೌಡ ಅವರನ್ನು ಮಾರ್ಚ್ 15 ರ ಬೆಳಗ್ಗೆ ಹೆಣವಾಗಿ ಬಿದ್ದಿದ್ದ, ಸಿದ್ದರಾಮೇಗೌಡನ ಕುತ್ತಿಗೆ ಸುತ್ತ ರಕ್ತದ ಕಲೆಯಿದ್ದು, ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪಂಚನಹಳ್ಳಿ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಅಷ್ಟಕ್ಕೂ ಸಾಹುಕಾರನ ಮಗ ಸಿದ್ದರಾಮೇಗೌಡನ ಮರ್ಡರ್ ಹಿಂದೆ ಇದ್ದಿದ್ದು ಸಾಹುಕಾರನ ಮೊಮ್ಮಗನೇ.
ಹೌದು ಪಂಚನಹಳ್ಳಿ ಗ್ರಾಮದ ಗಂಗಾಧರೇಗೌಡನಿಗೆ ಐವರು ಮಕ್ಕಳು. ಮಗ ಸಿದ್ದರಾಮೇಗೌಡ ಮತ್ತು ಆತನ ಅಕ್ಕ ನಿರ್ಮಲ ನಡುವೆ 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ, ಸೈಟ್ ವಿಚಾರವಾಗಿ ವಿವಾದವಿತ್ತು. ತಂದೆಯ ಆಸ್ತಿಗಾಗಿ ನಿರ್ಮಲ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದರು. ಇದೇ ವಿಚಾರವಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಅಕ್ಕ ನಿರ್ಮಲ ,ತಮ್ಮ ಸಿದ್ದರಾಮೇಗೌಡ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಅಕ್ಕ ನಿರ್ಮಲಳಿಗೆ ಅವಾಚ್ಯ ಪದ ಬಳಸಿ ಬೈದಿದ್ದ. ಇದರಿಂದ ಕೋಪಗೊಂಡಿದ್ದ ನಿರ್ಮಲಾಳ ಮಗ ಸಂಜಯ್, ತನ್ನ ಮಾವ ಸಿದ್ದರಾಮೇಗೌಡನನ್ನು ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ ಸುಂದ್ರಿ ಜತೆ ಹೋಗಿದ್ದವ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ಹತ್ಯೆಯಾದ ಸಿದ್ದರಾಮೇಗೌಡನ ಅಕ್ಕ ನಿರ್ಮಲ ಅವರನ್ನ ಪಂಚನಹಳ್ಳಿ ಸಮೀಪದ ಹಳ್ಳಿ ತಿಮ್ಲಾಪುರ ಗ್ರಾಮಕ್ಕೆ ಮದುವೆ ಮಾಡಲಾಗಿತ್ತು. ತಮ್ಮ ಸಿದ್ದರಾಮೇಗೌಡ ಮತ್ತು ಅಕ್ಕ ನಿರ್ಮಲ ನಡುವೆ ನಡೆಯುತ್ತಿದ್ದ ಆಸ್ತಿ ಗಲಾಟೆ ತಾರಕಕ್ಕೇರಿತ್ತು. ಮಾವ ಸಿದ್ದರಾಮೇಗೌಡ ತನ್ನ ಅಮ್ಮನಿಗೆ ಕೆಟ್ಟ ಪದಗಳಿಂದ ಬೈದ ಎಂಬ ಕಾರಣಕ್ಕೆ ಸಂಜಯ್ ಮರ್ಡರ್ ಪ್ಲಾನ್ ಮಾಡಿದ್ದ. ಅದರಂತೆ ಮಾರ್ಚ್ 14 ರ ಸಂಜೆ ಪಂಚನಹಳ್ಳಿ ಗ್ರಾಮಕ್ಕೆ ಬಂದಿದ್ದ. ಬಸ್ ನಿಲ್ದಾಣದ ಬಳಿ ಸಿಕ್ಕ ಸಿದ್ದರಾಮೇಗೌಡನ ಜೊತೆ ಬೈಕ್ ನಲ್ಲಿ ಊರೆಲ್ಲ ರೌಂಡ್ ಹೊಡೆದಿದ್ದ. ಬಳಿಕ ತೆಂಗಿನ ತೋಟಕ್ಕೆ ಕರೆದುಕೊಂಡು ಹೋಗಿ ಕೂತು ಎಣ್ಣೆ ಹೊಡೆದಿದ್ದಾನೆ. ಆ ವೇಳೆ ಆಸ್ತಿ ವಿಷಯಕ್ಕೆ ತಾಯಿಗೆ ಬೈದ ವಿಚಾರವಾಗಿ ಕ್ಯಾತೆ ತೆಗೆದಿದ್ದಾನೆ. ನಂತರ ಮಾತಿಗೆ ಮಾತು ಬೆಳೆದು ತೋಟದಲ್ಲಿ ಇದ್ದ ಡ್ರಿಪ್ ವೈರ್ನಿಂದ ಸಿದ್ದರಾಮೇಗೌಡನ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.
22 ವರ್ಷದ ಸಂಜಯ್ ಚಿತ್ರದುರ್ಗದ ಖಾಸಗಿ ಕಾಲೇಜಿನಲ್ಲಿ D ಫಾರ್ಮ್ ವ್ಯಾಸಂಗ ಮಾಡುತ್ತಿದ್ದು ಏಕಾಏಕಿ ಪಂಚನಹಳ್ಳಿಗೆ ಬಂದು ಮಾವನ ಹತ್ಯೆ ಮಾಡಿ ಪರಾರಿಯಾಗಿದ್ದ. ಸಿದ್ದರಾಮೇಗೌಡನ ಹತ್ಯೆಯ ಹಿಂದೆ ಅಳಿಯ ಸಂಜಯ್ ಇರೋದು ಗೊತ್ತಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪಂಚನಹಳ್ಳಿ ಪೊಲೀಸರು ಚಿತ್ರದುರ್ಗದಲ್ಲಿ ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾಯಿಗೆ ಮಾವ ಬೈದಿದ್ರು. ಆಸ್ತಿ ಕೂಡದೇ ಸತಾಯಿಸಿದ್ರು. ಅದಕ್ಕೆ ಹತ್ಯೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.
ಒಟ್ಟಿನಲ್ಲಿ ಕೋಟಿ ಬೆಲೆಬಾಳುವ ತಂದೆಯ ಆಸ್ತಿಗಾಗಿ ಅಕ್ಕ ತಮ್ಮನ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ತಾಯಿಗೆ ಬೈದ ಮಾವನ ಕೊಂದ ಅಳಿಯ ಜೈಲು ಸೇರಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.