
ಹೈದರಾಬಾದ್: ಆರ್ಥಿಕ ಸಮಸ್ಯೆ, ಸಂಪ್ರದಾಯವಾದಿ ಕೌಟುಂಬಿಕ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು—ಇಂತಹ ಹಲವು ಸವಾಲುಗಳ ನಡುವೆ ಬೆಳೆದ ಹೈದರಾಬಾದ್ನ ಯುವತಿಯೊಬ್ಬಳು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಬಾಲ್ಯದಲ್ಲಿ ದೊಡ್ಡ ಕನಸು ಕಾಣಲೂ ಪ್ರೋತ್ಸಾಹವಿಲ್ಲದ ಪರಿಸ್ಥಿತಿಯಿಂದ ಬಂದ ಬಾಲ ಸಾಹಿತ್ಯ ವಡ್ಲಮಣಿ(Bala Sahitya Vadlamani), ತಮ್ಮ ಛಲ ಮತ್ತು ಕಠಿಣ ಪರಿಶ್ರಮದಿಂದ ಅಮೆರಿಕದ ದೈತ್ಯ ಟೆಕ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, 31ನೇ ವಯಸ್ಸಿಗೆ ವಾರ್ಷಿಕ 1 ಮಿಲಿಯನ್ ಡಾಲರ್ಗಿಂತಲೂ (ಸುಮಾರು 9 ಕೋಟಿ ರೂ.ಗೂ ಅಧಿಕ) ಹೆಚ್ಚು ಸಂಬಳ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಬಾಲ ಸಾಹಿತ್ಯ ಅವರು, ತಮ್ಮ ಜೀವನ ಪಯಣ, ವಿದ್ಯಾಭ್ಯಾಸ, ಕೋಟಿಗಟ್ಟಲೆ ಸಂಬಳ ಹಾಗೂ ವೀಸಾ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ, ಅಮೆರಿಕದಂತಹ ದೇಶದಲ್ಲಿ ಕೈತುಂಬಾ ಸಂಬಳವಿದ್ದ ಪ್ರತಿಷ್ಠಿತ ಟೆಕ್ ಕೆಲಸವನ್ನು ತೊರೆದು, ಸ್ವಂತ ಕಂಪನಿ ಆರಂಭಿಸಲು ತೆಗೆದುಕೊಂಡ ದಿಟ್ಟ ನಿರ್ಧಾರದ ಹಿಂದಿನ ಕಾರಣಗಳನ್ನು ಸಹ ಅವರು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಹೈದರಾಬಾದ್ನಲ್ಲಿ ಬೆಳೆದ ಬಾಲ ಸಾಹಿತ್ಯ ವಡ್ಲಮಣಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಪೂರ್ಣಗೊಳಿಸಿದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ ಅವರು, ಪ್ರತಿಷ್ಠಿತ ಡಾರ್ಟ್ಮೌತ್ (Dartmouth) ಕಾಲೇಜಿನಿಂದ ‘ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್’ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಲದೆ, ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ವಿನಿಮಯ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಿ ಪರಿಪೂರ್ಣ 4.0 ಜಿಪಿಎ (GPA) ಗಳಿಸಿ ಗಮನ ಸೆಳೆದರು. “ಅಮೆರಿಕಕ್ಕೆ ತೆರಳಿದ್ದು ಕೇವಲ ಉನ್ನತ ಶಿಕ್ಷಣಕ್ಕಾಗಿ ಮಾತ್ರವಲ್ಲ, ನನ್ನ ಜೀವನದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ” ಎಂದು ಅವರು ತಮ್ಮ ಆರಂಭಿಕ ದಿನಗಳನ್ನು ಸ್ಮರಿಸಿದ್ದಾರೆ.
ವಿದ್ಯಾಭ್ಯಾಸದ ಬಳಿಕ ಮಾರ್ಗನ್ ಸ್ಟಾನ್ಲಿಯಲ್ಲಿ ತಂತ್ರಜ್ಞಾನ ವಿಶ್ಲೇಷಕರಾಗಿ (Technology Analyst) ವೃತ್ತಿಜೀವನ ಆರಂಭಿಸಿದ ಅವರ ಮೊದಲ ವಾರ್ಷಿಕ ವೇತನ $110,000 (ಸುಮಾರು 90 ಲಕ್ಷ ರೂ.) ಆಗಿತ್ತು. ನಂತರ ಅಮೆಜಾನ್ (Amazon) ಸೇರಿದ ಅವರು, ಕೃತಕ ಬುದ್ಧಿಮತ್ತೆ (AI), ಅಲೆಕ್ಸಾ ಮತ್ತು ಪಾವತಿ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರು. ಬಳಿಕ ಟೆಕ್ ದೈತ್ಯ ಮೆಟಾ (Meta) ಕಂಪನಿಗೆ ಸೇರ್ಪಡೆಗೊಂಡು ಇನ್ಸ್ಟಾಗ್ರಾಮ್, ಮೆಸೆಂಜರ್ ಭದ್ರತೆ, ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಮತ್ತು ಐಡೆಂಟಿಟಿ ಮ್ಯಾನೇಜ್ಮೆಂಟ್ನಂತಹ ಮಹತ್ವದ ವಿಭಾಗಗಳಲ್ಲಿ ಕೆಲಸ ಮಾಡಿದರು. ಈ ಹಂತದಲ್ಲಿ ಅವರ ವೇತನ ಗಣನೀಯವಾಗಿ ಏರಿಕೆಯಾಗಿ, 31ನೇ ವಯಸ್ಸಿಗೆ ವಾರ್ಷಿಕ 1 ಮಿಲಿಯನ್ ಡಾಲರ್ಗೂ (9 ಕೋಟಿ ರೂ.+) ಅಧಿಕ ಗಳಿಸುವ ಹಂತ ತಲುಪಿದರು.
ಇಷ್ಟೊಂದು ದೊಡ್ಡ ಮಟ್ಟದ ಆದಾಯ ಮತ್ತು ಉನ್ನತ ಹುದ್ದೆಗಳಿದ್ದರೂ, ಬಾಲ ಸಾಹಿತ್ಯ ಅವರು ತಮ್ಮ ಟೆಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ಉದ್ಯಮಿಯಾಗುವ ದಿಟ್ಟ ನಿರ್ಧಾರ ಕೈಗೊಂಡರು. ಪ್ರಸ್ತುತ ಅವರು ತಮ್ಮದೇ ಆದ ಸಲಹಾ ಸಂಸ್ಥೆಯನ್ನು (Consulting Firm) ನಡೆಸುತ್ತಿದ್ದು, ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಿಗಳಿಗೆ ಉತ್ಪನ್ನ ತಂತ್ರಗಾರಿಕೆ (Product Strategy), AI ಏಕೀಕರಣ ಮತ್ತು ವ್ಯವಹಾರ ಅಭಿವೃದ್ಧಿಯ ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ: ಸಣ್ಣ ಊರಿನಿಂದ ಜಾಗತಿಕ ಕಂಪನಿಗೆ; ಅಮೆಜಾನ್ನಲ್ಲಿ 46 ಲಕ್ಷ ರೂ. ಸಂಬಳದ ಉದ್ಯೋಗ ಗಿಟ್ಟಿಸಿಕೊಂಡ ಯುವತಿ!
ವೃತ್ತಿಜೀವನದಲ್ಲಿ ಬದಲಾವಣೆ ಬಯಸುವವರು ತಮಗೆ ತಾವೇ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಹೊಸ ಕೆಲಸದಲ್ಲಿ ಉತ್ತಮ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶವಿದೆಯೇ? ಅಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ಸಾಧ್ಯವಿದೆಯೇ? ಮತ್ತು ಆ ಕೆಲಸವು ಭವಿಷ್ಯದಲ್ಲಿ ಮತ್ತಷ್ಟು ದೊಡ್ಡ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆಯೇ? ಎಂಬುದನ್ನು ವಿಶ್ಲೇಷಿಸಬೇಕು. ಈ ಮೂರರಲ್ಲಿ ಕನಿಷ್ಠ ಎರಡು ಪ್ರಶ್ನೆಗಳಿಗೆ ‘ಹೌದು’ ಎಂಬ ಉತ್ತರ ಸಿಕ್ಕರೆ ಮಾತ್ರ ಉದ್ಯೋಗ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅವರ ಕಿವಿಮಾತು.
ತಮ್ಮ ಈ ಅಸಾಧಾರಣ ಯಶಸ್ಸಿಗೆ ಕೇವಲ ಬುದ್ಧಿವಂತಿಕೆಗಿಂತ ಹೆಚ್ಚಾಗಿ ಕಾರ್ಯತಂತ್ರದ ಚಿಂತನೆ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮವೇ ಕಾರಣ ಎಂದು ಸಾಹಿತ್ಯ ಹೇಳುತ್ತಾರೆ. “ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಯಾವುದೇ ಹಿಂಜರಿಕೆಯಿಲ್ಲದೆ ದಿಟ್ಟ ಹೆಜ್ಜೆ ಇಡಿ” ಎಂಬುದು ಇಂದಿನ ಯುವಪೀಳಿಗೆಗೆ ಅವರು ನೀಡಿರುವ ಸ್ಫೂರ್ತಿದಾಯಕ ಸಂದೇಶವಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Sun, 29 November 26