ಬೆಂಗಳೂರು, (ಡಿಸೆಂಬರ್ 22): ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ದಿಢೀರ್ ಶಿಕ್ಷಣ ಇಲಾಖೆ (Education Department) ಜೊತೆ ಸಭೆ ಮಾಡಿದ್ದ, ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಇನ್ಮುಂದೆ ಬಿಬಿಎಂಪಿ(BBMP) ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು(Schools) ಶಿಕ್ಷಣ ಇಲಾಖೆ ನಡೆಸಲಿದೆ. ಹಾಗೇ ರಾಜ್ಯದಲ್ಲಿ 2,000 ಪಬ್ಲಿಕ್ ಶಾಲೆ (Public Schools) ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇಂದು ಮೂರ್ನಾಲ್ಕು ವಿಚಾರ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಖಾಸಗಿ ಶಾಲೆಗಳ ರೀತಿ BBMP ಶಾಲೆಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ಶಿಕ್ಷಣ ಇಲಾಖೆ ನಡೆಸಲಿದ್ದು, ಬಿಬಿಎಂಪಿಯಿಂದ ಶಾಲೆಗಳ ನಿರ್ವಹಣೆ ಮಾಡುತ್ತೇವೆ. ಆದರೆ ಶಿಕ್ಷಣದ ವಿಚಾರವಾಗಿ ಇಲಾಖೆ ನೋಡಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್: ಶಾಲೆ ಮುಖ್ಯ ಶಿಕ್ಷಕಿ ಅಮಾನತು
ಇನ್ನು ರಾಜ್ಯದಲ್ಲಿ 2,000 ಪಬ್ಲಿಕ್ ಶಾಲೆ ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ. ಸಿಎಸ್ಆರ್ ಅಡಿಯಲ್ಲಿ ಈ ಶಾಲೆಗಳನ್ನ ನಿರ್ಮಾಣ ಮಾಡಲಿದ್ದೇವೆ. ಶಿಕ್ಷಣ ಸಂಸ್ಥೆಯವರು ಒಂದೊಂದು ಶಾಲೆ ದತ್ತು ತೆಗೆದುಕೊಳ್ಳಬೇಕು. ಶಾಲೆಗಳನ್ನು ದತ್ತು ತೆಗೆದುಕೊಂಡು ವೇತನವನ್ನು ಅವರೇ ಕೊಡಬೇಕು. ಆದರೆ ಆ ಶಾಲೆಗಳು ಕೂಡ ಸರ್ಕಾರಿ ರೀತಿಯಲ್ಲೇ ನಡೆಯಲಿದೆ. ಉಚಿತ ಶಿಕ್ಷಣ ನೀಡಲಿದ್ದಾರೆ, ಸಾರಿಗೆ ವೆಚ್ಚ ಮಾತ್ರ ಬರಬಹುದು. 1,900 ಕೋಟಿಯಷ್ಟು ಸಿಎಸ್ಆರ್ ಫಂಡ್ ಬರಬೇಕಿದೆ. ಜನವರಿಯಲ್ಲಿ ಸಿಎಸ್ಆರ್ ಫಂಡ್ ಬಗ್ಗೆ ಸಭೆ ಮಾಡುತ್ತೇವೆ ಎಂದು ವಿವರಿಸಿದರು.
ಇನ್ನು ಇದೇ ವೇಳೆ ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿದ್ದೇವೆ. ಅಲ್ಲದೇ ಎಫ್ಐಆರ್ ಸಹ ಆಗಿದೆ. ಈ ರೀತಿಯ ಘಟನೆ ನಡೆಯಬಾರದು ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:51 pm, Fri, 22 December 23