ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್: ಶಾಲೆ ಮುಖ್ಯ ಶಿಕ್ಷಕಿ ಅಮಾನತು
Students Toilet Cleaning: ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಮುಖ್ಯ ಶಿಕ್ಷಕಿಯ ತಲೆದಂಡವಾಗಿದೆ.
ಬೆಂಗಳೂರು, (ಡಿಸೆಂಬರ್ 22): ರಾಜ್ಯದಲ್ಲಿ ಭಾರೀ ಸುದ್ದಿಯಾಗಿರುವ ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಅಂದ್ರಹಳ್ಳಿ ಶಾಲೆ ಮುಖ್ಯ ಶಿಕ್ಷಕಿ ಲಕ್ಷ್ಮೀ ದೇವಮ್ಮ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು
ಆಂದ್ರಹಳ್ಳಿ ಶಾಲೆಯಲ್ಲಿ ಇಂತ ಘಟನೆ ನಡೆಯಬಾರದಿತ್ತು. ಮಕ್ಕಳ ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸಿರೋದು ಇದು ಖಂಡನೀಯ. ಇದನ್ನ ನಾನು ಖಂಡಿಸುತ್ತೇನೆ. ಇಂತಹ ಘಟನೆಗಳು ಇನ್ಮುಂದೆ ಆಗಬಾರದು. ಈಗಾಗಲೇ ಶಾಲೆಯ ಮುಖ್ಯ ಶಿಕ್ಷಕಿಯನ್ನ ಅಮಾನತು ಮಾಡಲಾಗಿದೆ. ಘಟನೆ ಹಿಂದೆ ಯಾರು ಇದ್ದಾರೆ ಅಂತ ಇಲಾಖೆ ತನಿಖೆ ನಡೆಸಲಿದೆ. ಈ ರೀತಿ ಘಟನೆಗಳು ನಡೆಯದಂತೆ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಅದರಂತೆ ಇದೀಗ ಅಂದ್ರಹಳ್ಳಿ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಅಂದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಒಟ್ಟು 600 ಜನ ಮಕ್ಕಳಿದ್ದಾರೆ. ಅಲ್ಲದೆ, ಇಲ್ಲಿ ಮಕ್ಕಳೇ ಶೌಚಾಲಯವನ್ನು ಕ್ಲೀನ್ ಮಾಡಬೇಕು. ಅಲ್ಲದೆ, ಮಕ್ಕಳೇ ಶಿಕ್ಷಕರು ಊಟ ಮಾಡುವ ತಟ್ಟೆ ತೊಳೆಯಬೇಕು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಪೋಷಕರಿಗೆ ವಿಷಯ ಗೊತ್ತಾಗಿ ಶಾಲೆಯ ಮುಂದೆ ಪ್ರತಿಭಟನೆ ಮಾಡಿದ್ದರು.
ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದರು. ಪೋಷಕರು ಸೇರುತ್ತಿದ್ದಂತೆ ಶಿಕ್ಷಕರು ಶಾಲೆಗೆ ತಡವಾಗಿ ಬಂದಿದ್ದರು. ಈ ಹಿಂದೆಯೂ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗಿತ್ತು. ಈ ಬಗ್ಗೆ ಪೋಷಕರು ದೂರು ಕೂಡಾ ನೀಡಿದ್ದರು. ಆದರೆ, ಅದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ಪ್ರಕರಣವನ್ನು ಕೈಗಬಿಡಲಾಗಿತ್ತು. ಈಗ ವಿಡಿಯೊ ಸಮೇತ ಸಾಕ್ಷಿ ಸಿಕ್ಕಿದ್ದು, ಶಾಲಾ ಶಿಕ್ಷಕರ ವಿರುದ್ಧ ಪೋಷಕರು ಕೆಂಡ ಕಾರಿದ್ದಾರೆ. ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಪಟ್ಟು ಹಿಡಿದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Fri, 22 December 23