
ರಾಜ್ಯದಲ್ಲಿ ವೀರ ಸಾವರ್ಕರ್ ಬಗ್ಗೆ ಪರ-ವಿರೋಧಗಳು ಚರ್ಚೆಗಳಾಗುತ್ತಿರುವ ನಡುವೆಯೇ 8ನೇ ತರಗತಿಯ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ಕಾಲವನ್ನು ಗೆದ್ದವರು ಎಂಬ ಪಠ್ಯದಲ್ಲಿ ಸಾವರ್ಕರ್ ಪಠ್ಯ ಸೇರ್ಪಡೆಗೊಳಿಸಿರುವ ವಿಚಾರ ಮುನ್ನೆಲೆಗೆ ಬಂದಿದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ವೇಳೆ ಪಠ್ಯದಲ್ಲಿದ್ದ ಬ್ಲಡ್ ಗ್ರೂಪ್ ಪಠ್ಯವನ್ನು ತೆಗೆದು ಸಾವರ್ಕರ್ ಕುರಿತಾದ ಪಠ್ಯ ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಪಠ್ಯ ಪರಿಷ್ಕರಣೆ ವೇಳೆ ಟಿಪ್ಪು ವಿಚಾರದಲ್ಲಿ ವಿವಾದ ಉಂಟಾಗಿತ್ತು. ಇದೀಗ ಕೆಲವು ದಿನಗಳಿಂದ ಸಾವರ್ಕರ್ ವಿಚಾರದಲ್ಲಿ ರಾಜಕೀಯವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ಪಠ್ಯ ಸೇರ್ಪಡೆಯೂ ಪುಸ್ತಕದ ಮತ್ತೊಂದು ದಂಗಲ್ಗೆ ಕಾರಣವಾಗುವ ಸಾಧ್ಯತೆ ಇದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು 8ನೇ ತರಗತಿ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ಕಾಲವನ್ನು ಗೆದ್ದವರು ಎಂಬ ಪಠ್ಯದಲ್ಲಿ ಸಾವರ್ಕರ್ ಪಠ್ಯ ಸೇರ್ಪಡೆಗೊಳಿಸಿದೆ. 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿದ್ದ ವಿಜಯಮಾಲಾ ರಂಗನಾಥ್ ರಚಿತ ಬ್ಲಡ್ ಗ್ರೂಪ್ ಪಠ್ಯವನ್ನು ಕೈ ಬಿಟ್ಟು ಸಾವರ್ಕರ್ ವಿಚಾರವನ್ನು ಸೇರಿಸಲಾಗಿದೆ.
ಸಾವರ್ಕರ್ ಪಠ್ಯದಲ್ಲಿ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಬಗ್ಗೆ ಹಾಗೂ ಅವರ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ಈ ವಿಚಾರ ಮುನ್ನೆಲೆಗೆ ಬಂದು ಪರ-ವಿರೋಧಗಳು ವ್ಯಕ್ತವಾಗಲು ಆರಂಭಿಸಿದೆ. ಟಿಪ್ಪು ಮತ್ತು ಸಾವರ್ಕರ್ ಭಾವಚಿತ್ರದಲ್ಲಿ ಉಂಟಾದ ವಿವಾದವು ಇಡೀ ರಾಜ್ಯಾದ್ಯಂತ ರಾಜಕೀಯ ಪ್ರೇರಿತ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಈ ಹಿಂದೆ ಟಿಪ್ಪು ಪಠ್ಯ ಕೈಬಿಟ್ಟ ಹಾಗೂ ಆರ್ಎಸ್ಎಸ್ ಮುಖ್ಯಸ್ಥರ ಪಠ್ಯ ಸೇರ್ಪಡೆ ವಿಚಾರದಲ್ಲಿ ವಿವಾದಗಳು ಏರ್ಪಟ್ಟು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಸಾವರ್ಕರ್ ವಿಚಾರ ಮುನ್ನೆಲೆಗೆ ಬರುವ ಮೂಲಕ ಶಾಲಾ ವಿದ್ಯಾರ್ಥಿಗಳು ಮತ್ತೊಮ್ಮೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ.
ತಮ್ಮ ಕವಿತೆ ಬೋಧಿಸಲು ನಿರಾಕರಿಸಿದ ಸಾಹಿತಿ ರೂಪಾ
ರೋಹಿತ ಚಕ್ರತೀರ್ಥ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತವಾಗುತ್ತಿದ್ದು, ತಮ್ಮ ಕವಿತೆ ಬೋಧಿಸಲು ಒಪ್ಪಿಗೆ ಇಲ್ಲವೆಂದು ಅಧಿಕಾರಿಗಳಿಗೆ ಸಾಹಿತಿ ರೂಪಾ ಸ್ಪಷ್ಟಪಡಿಸಿದ್ದಾರೆ. ‘ಅಮ್ಮನಾಗುವುದೆಂದರೆ’ ಕವಿತೆಯ ಲೇಖಕಿ ರೂಪಾ ಹಾಸನ ಅವರು ಈ ಹಿಂದೆ ತಮ್ಮ ಕವಿತೆ ಬಳಕೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಪಠ್ಯ ಪರಿಷ್ಕರಣೆ ವಿವಾದ ಉಂಟಾದ ಬೆನ್ನಲ್ಲೆ ತಮ್ಮ ಕವಿತೆ ಬೋಧಿಸಲು ಒಪ್ಪಿಗೆ ಇಲ್ಲವೆಂದು ಹೇಳಿದ್ದರು. ವಿವಾದ ತಣ್ಣಗಾದ ಬಳಿಕ ಲೇಖಕಿ ರೂಪಾ ಹಾಸನಗೆ ಅಧಿಕಾರಿಗಳು ಪತ್ರ ಬರೆದು ತಮ್ಮ ಕವಿತೆ ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮ ಕವಿತೆ ಬಳಸದಂತೆ ಮತ್ತೆ ರೂಪಾ ಅವರು ಪತ್ರ ಬರೆದಿದ್ದಾರೆ. ಪಠ್ಯಪುಸ್ತಕ ಮುದ್ರಣ ಆಗಿರುವ ಹಿನ್ನೆಲೆ ಅನುಮತಿಗಾಗಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳ ಮನವಿಯನ್ನು ರೂಪಾ ಅವರು ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Sat, 27 August 22