ಟೈಮ್ಸ್ ಹೈಯರ್ ಎಜುಕೇಶನ್ 2024 ಇಂಪ್ಯಾಕ್ಟ್ ರ‍್ಯಾಂಕಿಂಗ್: ಭಾರತ ನಂಬರ್ ಒನ್
Times Higher Education Impact Rankings 2024: ಟೈಮ್ಸ್ ಹೈಯರ್ ಎಜುಕೇಶನ್ನ ಈ ವರ್ಷದ ಸಾಲಿನ ಇಂಪ್ಯಾಕ್ಟ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಆಗಿದ್ದು, ಭಾರತದಿಂದ ಅತಿಹೆಚ್ಚು ಯೂನಿವರ್ಸಿಟಿಗಳು ಸ್ಥಾನ ಪಡೆದಿವೆ. ಟೈಮ್ಸ್ ಹೈಯರ್ ಎಜುಕೇಶನ್ನ ಚೀಫ್ ಗ್ಲೋಬಲ್ ಅಫೇರ್ಸ್ ಆಫೀಸರ್ ಫಿಲ್ ಬಾಟಿ ಪ್ರಕಾರ 105 ಭಾರತೀಯ ಶಿಕ್ಷಣ ಸಂಸ್ಥೆಗಳು ಇಂಪ್ಯಾಕ್ಟ್ ರ್ಯಾಂಕಿಂಗ್ನಲ್ಲಿ ಸೇರ್ಪಡೆಯಾಗಿವೆ. ಅಮೃತ ವಿಶ್ವ ವಿದ್ಯಾಪೀಠಮ್ 81ನೇ ಸ್ಥಾನದಲ್ಲಿದೆ. ಭಾರತೀಯ ಶಿಕ್ಷಣ ಸಂಸ್ಥೆಗಳ ಪೈಕಿ ಇದೇ ದೊಡ್ಡ ರ‍್ಯಾಂಕಿಂಗ್.
ನವದೆಹಲಿ, ಜೂನ್ 12: ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ್ಯಾಂಕಿಂಗ್ನ 2024ರ ಸಾಲಿನ ಪಟ್ಟಿ (Times Higher Education Impact Rankings 2024) ಬಿಡುಗಡೆ ಆಗಿದೆ. ವಿಶ್ವಾದ್ಯಂತ 2,152 ಉನ್ನತ ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿದ್ದು ಅತಿಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಸಂಸ್ಥೆಗಳಿವೆ. ಈ ಪಟ್ಟಿಯಲ್ಲಿ 105 ಭಾರತೀಯ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ದೇಶವಾರು ಪಟ್ಟಿ ಮಾಡಿದರೆ ಭಾರತವೇ ನಂಬರ್ ಒನ್ ಆಗುತ್ತದೆ. ಟೈಮ್ಸ್ ಹೈಯರ್ ಎಜುಕೇಶನ್ನ ಮುಖ್ಯ ಗ್ಲೋಬಲ್ ಅಫೇರ್ಸ್ ಆಫೀಸರ್ ಫಿಲ್ ಬಾಟಿ ಈ ವಿಚಾರವನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಂಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದ್ದಾರೆ.
ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್ 2024ನಲ್ಲಿ ದೇಶವಾರು ಪಟ್ಟಿಯಲ್ಲಿ ಭಾರತವೇ ನಂಬರ್ ಒನ್ ಆಗಿದೆ. 2019ರಲ್ಲಿ ಕೇವಲ 13 ಭಾರತೀಯ ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿದ್ದವು ಈಗ ನೂರಕ್ಕೂ ಹೆಚ್ಚು ಯೂನಿವರ್ಸಿಟಿಗಳು ಸ್ಥಾನ ಪಡೆದಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಯಶಸ್ವಿ ಅಂತಾರಾಷ್ಟ್ರೀಯ ಕ್ರಮಗಳು ಇದಕ್ಕೆ ಕಾರಣವಾಗಿವೆ ಎಂದು ಫಿಲ್ ಬಾಟಿ ಹೇಳಿದ್ದಾರೆ.
India is the world’s number one best represented nation in the @timeshighered Impact Rankings 2024. Over 100 universities are ranked, up from just 13 in 2019, thanks to the remarkably successful internationalisation drive spearheaded by @narendramodihttps://t.co/MCotkX9ViA pic.twitter.com/MLtxX1A5rT
— Phil Baty (@Phil_Baty) June 12, 2024
ಇದನ್ನೂ ಓದಿ: ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ… 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ
ಈ ಇಂಪ್ಯಾಕ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಬಳಿಕ ಅತಿಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ದೇಶಗಳೆಂದರೆ ಟರ್ಕಿ ಮತ್ತು ಪಾಕಿಸ್ತಾನವಂತೆ. ಟರ್ಕಿಯ 91 ಮತ್ತು ಪಾಕಿಸ್ತಾನದ 89 ಯೂನಿವರ್ಸಿಟಿಗಳು ಈ ಪಟ್ಟಿಯಲ್ಲಿ ಕಾಣಿಸಿವೆ. ಅಮೆರಿಕದ 46 ಯೂನಿವರ್ಸಿಟಿಗಳು ಈ ಇಂಪ್ಯಾಪ್ಟ್ ಪಟ್ಟಿಯಲ್ಲಿವೆ. ಆದರೆ, ಟಾಪ್ 100ನಲ್ಲಿ ನಾಲ್ಕು ಅಮೆರಿಕನ್ ವಿವಿಗಳಿವೆ. ಈ ಅಗ್ರ 100ರಲ್ಲಿ ಭಾರತದ ಒಂದು ಶಿಕ್ಷಣ ಸಂಸ್ಥೆ ಇದೆ. ಅಮೃತ ವಿಶ್ವ ವಿದ್ಯಾಪೀಠಮ್ 81ನೇ ರ‍್ಯಾಂಕ್ ಪಡೆದಿದೆ.
ಜೆಎಸ್ಎಸ್ ಅಕಾಡೆಮಿ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಮಣಿಪಾಲ್ ಸಂಸ್ಥೆ, ಶೂಲಿನಿ ಯೂನಿವರ್ಸಿಟಿ ಟಾಪ್ 200 ಪಟ್ಟಿಯಲ್ಲಿವೆ. ನಿಟ್ಟೆ ಯೂನಿವರ್ಸಿಟಿ, ಶಾರ್ದಾ ಯೂನಿವರ್ಸಿಟಿ, ಅಮಿಟಿ, ಪಿಇಎಸ್, ಆರ್ವಿ ಎಂಜಿನಿಯರಿಂಗ್ ಮೊದಲಾದ ಶಿಕ್ಷಣ ಸಂಸ್ಥೆಗಳು ಈ ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿವೆ.
ಇದನ್ನೂ ಓದಿ: ಭಾರತೀಯ ವಿಶ್ವವಿದ್ಯಾನಿಲಯಗಳು ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು: ಯುಜಿಸಿ
ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ಯೂನಿವರ್ಸಿಟಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಹಿಂದಿನ ಎರಡು ವರ್ಷದಲ್ಲೂ ಇದೇ ವಿವಿ ಅಗ್ರಸ್ಥಾನ ಪಡೆದಿತ್ತು. ಸತತ ಮೂರನೇ ಬಾರಿ ಅದು ಮೊದಲ ಸ್ಥಾನ ಗಿಟ್ಟಿಸಿರುವುದು. ಬ್ರಿಟನ್ ದೇಶದ ಮ್ಯಾಂಚೆಸ್ಟರ್ ಯೂನಿವರ್ಸಿಟಿ, ಆಸ್ಟ್ರೇಲಿಯಾದ ಟಾಸ್ಮಾನಿಯಾ ಯೂನಿವರ್ಸಿಟಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ರ‍್ಯಾಂಕಿಂಗ್ ಮಾನದಂಡ ಏನು?
ಟೈಮ್ಸ್ ಹೈಯರ್ ಎಜುಕೇಶನ್ನ ಇಂಪ್ಯಾಕ್ಟ್ ರ್ಯಾಂಕಿಂಗ್ಗೆ ವಿವಿಧ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಸಂಶೋಧನೆ, ನಿರ್ವಹಣೆ, ನೆರವು ಮತ್ತು ಬೋಧನೆ, ಇವಿಷ್ಟನ್ನೂ ಸ್ಥೂಲವಾಗಿ ಪರಿಗಣಿಸಿ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ಕೊಡಲಾಗುತ್ತದೆ. ಇಲ್ಲಿ ಐಐಟಿ ಸಂಸ್ಥೆಗಳಿಂತ ಹೆಚ್ಚಿನ ಮಟ್ಟದ ಶ್ರೇಯಾಂಕಗಳನ್ನು ಬೇರೆ ಹಲವು ಶಿಕ್ಷಣ ಸಂಸ್ಥೆಗಳು ಪಡೆದಿರುವುದು ಗಮನಾರ್ಹ.
ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ