ನವದೆಹಲಿ: ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಿಂದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶವನ್ನು (JEE Advanced Result 2021) ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ಕ್ಲಿಕ್ ಮಾಡುವ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆದ 41,862 ಅಭ್ಯರ್ಥಿಗಳ ಪೈಕಿ ಐಐಟಿ ದೆಹಲಿಯ ಮೃದುಲ್ ಅಗರ್ವಾಲ್ ಮೊದಲ ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ರೋಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ಭರ್ತಿ ಮಾಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಜೆಇಇ ಅಡ್ವಾನ್ಸ್ಡ್ ಫಲಿತಾಂಶದೊಂದಿಗೆ, ಐಐಟಿ ಖರಗ್‌ಪುರವು ಅಖಿಲ ಭಾರತ ಟಾಪರ್‌ಗಳ ಪಟ್ಟಿಯನ್ನು ಕೂಡ ಪ್ರಕಟಿಸಿದೆ. ಜೆಇಇ ಅಧಿಕೃತ ವೆಬ್‌ಸೈಟ್ jeeadv.ac.inನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್-2021ರ ರೋಲ್ ಸಂಖ್ಯೆ, ಜನ್ಮದಿನಾಂಕ ಮತ್ತು ಫೋನ್ ನಂಬರ್ಗಳ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದು. ಫಲಿತಾಂಶವು ಅಂಕಪಟ್ಟಿ ಮಾದರಿಯಲ್ಲಿ ಲಭ್ಯವಿರಲಿದ್ದು, ದೇಶದ ಟಾಪರ್‌ಗಳ ಪಟ್ಟಿ ಮತ್ತು ಇತರ ಸಂಬಂಧಿತ ಮಾಹಿತಿಯೂ ಇರಲಿದೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ದೆಹಲಿಯ ಐಐಟಿಯ ಮೃದುಲ್ ಅಗರ್ವಾಲ್ 360ಕ್ಕೆ 348 ಅಂಕಗಳನ್ನು ಪಡೆಯುವ ಮೂಲಕ ಟಾಪ್ ರ್ಯಾಂಕ್ ಪಡೆದಿದ್ದಾರೆ. ಐಐಟಿ ದೆಹಲಿಯ ಕಾವ್ಯ ಚೋಪ್ರಾ 360ಕ್ಕೆ 286 ಅಂಕಗಳನ್ನು ಪಡೆದು ಮಹಿಳೆಯರ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಜೆಇಇ ಅಡ್ವಾನ್ಸ್ಡ್-2021ರಲ್ಲಿ ರ್ಯಾಂಕ್ ಪಡೆದ ಎಲ್ಲ ಅಭ್ಯರ್ಥಿಗಳು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (JoSAA) ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ಮೊದಲು ನೋಂದಾವಣೆ ಮಾಡಿಕೊಂಡು, ನಂತರ ತಮ್ಮ ಆದ್ಯತೆಯ ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆಯನ್ನು ಭರ್ತಿ ಮಾಡಬೇಕು.
ಜೆಇಇ ಅಡ್ವಾನ್ಸ್ಡ್ 2021ರ ಫಲಿತಾಂಶವನ್ನು ಇಂದು ಘೋಷಿಸಲಾಗಿದೆ. JoSAA ಅಡಿಯಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅಭ್ಯರ್ಥಿ ಗಳ ನೋಂದಣಿ/ ಆಯ್ಕೆ ಪ್ರಕ್ರಿಯೆ ಅಕ್ಟೋಬರ್ 16ರಂದು ಆರಂಭವಾಗುತ್ತದೆ. ಮೊದಲ ಅಣಕು ಸೀಟು ಹಂಚಿಕೆಯನ್ನು ಅಕ್ಟೋಬರ್ 22ರಂದು 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಎರಡನೇ ಪಟ್ಟಿಯನ್ನು ಅಕ್ಟೋಬರ್ 24ರ ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಮೊದಲ ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಅ. 27ರಂದು ನಡೆಯಲಿದೆ.
ಜೆಇಇ ಮೇನ್ ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಮತ್ತು ಇತರ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಜಿಎಫ್‌ಟಿಐ) ಪ್ರವೇಶಕ್ಕಾಗಿ ನಡೆಯುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (JoSAA) ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಜಂಟಿ ಸೀಟು ಹಂಚಿಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳಿಗೆ ಐಐಟಿಯಲ್ಲಿನ ಸೀಟು ಹಂಚಿಕೆ ನಡೆಯುತ್ತದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ 44 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದರು. ಕರ್ನಾಟಕದ ಗೌರವ್ ದಾಸ್ ಮೊದಲ ರ್ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದರು.