ಪಿಯು ಪರೀಕ್ಷೆ ಅಂಕ ಶೇ.98ರಿಂದ 99ಕ್ಕೆ ಹೆಚ್ಚಿಸಲು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಕರ್ನಾಟಕದ ವಿದ್ಯಾರ್ಥಿ
ದ್ವಿತೀಯ ಪಿಯುಸಿ ಪರೀಕ್ಷೆ ಅಂಕ ಶೇ.98ರಿಂದ 99ಕ್ಕೆ ಹೆಚ್ಚಿಸಲು ಕೋರಿ ಕರ್ನಾಟಕದ ವಿದ್ಯಾರ್ಥಿಯೋರ್ವ ಸುಪ್ರೀಂ ಕೋರ್ಟ್ ಮೊರೆ ಹೋದ್ದಾನೆ.
ಬೆಂಗಳೂರು: ದ್ವಿತೀಯ ಪಿಯುಸಿ(Karnataka 2nd PUC) ಪರೀಕ್ಷೆ ಅಂಕ ಶೇ.98ರಿಂದ 99ಕ್ಕೆ ಹೆಚ್ಚಿಸುವಂತೆ ಕೋರಿ ಕರ್ನಾಟಕದ 18 ವರ್ಷದ ವಿದ್ಯಾರ್ಥಿಯೊಬ್ಬ(Student) ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದಾನೆ. ಹೌದು.. ಮರುಮೌಲ್ಯಮಾಪನದ ವೇಳೆ ಶೇ 99ರಷ್ಟು ನೀಡದಿದ್ದಕ್ಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಪರೀಕ್ಷಾ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ ಕೇಳಿದೆ.
ಅರ್ಜಿದಾರ ವಿದ್ಯಾರ್ಥಿ ದೇವಯ್ಯ ವಿದ್ಯಾರ್ಥಿ 2022ರಲ್ಲಿ ನಡೆದ ಪದವಿ ಪೂರ್ವ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದರು. ಇಂಗ್ಲಿಷ್‌ನಲ್ಲಿ 90 , ಕನ್ನಡದಲ್ಲಿ 98 ಹಾಗೂ ಜೀವಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದಿದ್ದ. ಮೌಲ್ಯಮಾಪನ ಮಾಡಿದ್ದ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಪರಿಶೀಲಿಸಿದ್ದ ಆತ ತನಗೆ ಜೀವಶಾಸ್ತ್ರದಲ್ಲಿ ಒಂದು ಹಾಗೂ ಇಂಗ್ಲಿಷ್‌ನಲ್ಲಿ 5.5 ಅಂಕಗಳು ಬರಬೇಕಿತ್ತು ಎಂದು ಲೆಕ್ಕ ಹಾಕಿದ್ದ. ಅದಕ್ಕಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ. ಆದ್ರೆ, ಅಂಕ ಬದಲಾವಣೆಗೆ ಯಾವುದೇ ಕಾರಣ ಇಲ್ಲ ಎಂದು ರಾಜ್ಯ ಪಿಯು ಮಂಡಳಿ ಆರಂಭದಲ್ಲಿ ಹೇಳಿತ್ತು. ಬಳಿಕ ವಿದ್ಯಾರ್ಥಿ, ವಿವರವಾದ ಪತ್ರವನ್ನು ಮಂಡಳಿಗೆ ಬರೆದಿದ್ದ. ಇದಾಗಲೇ ಒಂದು ಬಾರಿ ವಿದ್ಯಾರ್ಥಿಯು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಅಂಕಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗದು ಎಂದು ಪಿಯು ಪರೀಕ್ಷಾ ಮಂಡಳಿ ವಿದ್ಯಾರ್ಥಿಗೆ ತಿಳಿಸಿತ್ತು. ಅಲ್ಲದೆ, ಗ್ರೇಡ್ ಶೀಟ್‌ನಲ್ಲಿ ಹೊಸತಾಗಿ ಬದಲಾವಣೆ ಮಾಡಲು ಆರು ಅಂಕಗಳಷ್ಟು ವ್ಯತ್ಯಾಸವಿರಬೇಕು ಎಂದು ತಿಳಿಸಿತ್ತು.
ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆಗ ಹೈಕೋರ್ಟ್ ಪ್ರಕರಣದಲ್ಲಿ ಕಾನೂನು ಪ್ರಶ್ನೆಯನ್ನು ಮುಕ್ತವಾಗಿಟ್ಟು ವಿದ್ಯಾರ್ಥಿಯ ಪತ್ರವನ್ನು ಪರಿಶೀಲಿಸುವಂತೆ ಸೂಚಿಸಿತ್ತು.
ಅಧಿಕಾರಿಗಳು ಪ್ರತಿಕ್ರಿಯಿಸಲು ವಿಳಂಬ ಮಾಡಿದ್ದರಿಂದ ವಿದ್ಯಾರ್ಥಿ ಅರ್ಜಿ ಸಲ್ಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿ ನೀಡುವಂತೆ ಹೈಕೋರ್ಟ್ ಅಧಿಕಾರಿಗಳಿಗೆ ಆದೇಶಿಸಿತ್ತು. ಆದರೆ ಆದೇಶ ಪಾಲಿಸದ ಮತ್ತು ತನ್ನ ಅಂಕ ಬದಲಾವಣೆ ಮಾಡದ ಅಧಿಕಾರಿಗಳ ವಿರುದ್ಧ ದೇವಯ್ಯ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು.
ಇತ್ತ ಅಸ್ತಿತ್ವದಲ್ಲಿರುವ ಗ್ರೇಡ್ ಶೀಟ್‌ಗೆ ಪೂರಕವಾಗಿ ಪರಿಷ್ಕೃತ ಅಂಕಗಳನ್ನು ಸೂಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್, ಅರ್ಜಿಯನ್ನು ವಿಲೇವಾರಿ ಮಾಡಿತು. ಹೀಗಾಗಿ ವಿದ್ಯಾರ್ಥಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಕಟ್-ಆಫ್ ಅಂಕ ಹೆಚ್ಚಿರುವುದರಿಂದ ಪ್ರವೇಶಾತಿಗೆ ಅಂಕಗಳ ಅಗತ್ಯವಿದೆ ಎಂದು ಅರ್ಜಿದಾರ ವಿದ್ಯಾರ್ಥಿಯ ಪರ ವಕೀಲರಾದ ವಿಕ್ರಮ್ ಹೆಗ್ಡೆ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಇನ್ನಷ್ಟು ಶಿಕ್ಷಣ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ