
ಬೆಂಗಳೂರು, ಏಪ್ರಿಲ್ 18: ಕಳೆದ ವರ್ಷ ಸಿಇಟಿ ಪರೀಕ್ಷೆ (CET Exam) ವೇಳೆ ಜನಿವಾರ ಮತ್ತು ಹಿಜಾಬ್ ವಿಚಾರವಾಗಿ ಉಂಟಾಗಿದ್ದ ವಿವಾದಗಳಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ತಡೆಯಲು ಹೊಸ ತಂತ್ರ ರೂಪಿಸಿದೆ. ಏಪ್ರಿಲ್ 23 ಮತ್ತು 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಕೆಇಎ ಈಗಿನಿಂದಲೇ ಫುಲ್ ಅಲರ್ಟ್ ಆಗಿದೆ.
ಕಳೆದ ವರ್ಷ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಪರೀಕ್ಷಾರ್ಥಿಗಳ ತಪಾಸಣೆ ವೇಳೆ ಜನಿವಾರ ತೆಗೆಸಿದ್ದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷ ಅಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪುಲ್ ಅಲರ್ಟ್ ಆಗಿದ್ದು, ಈ ಬಾರಿ ವಸ್ತ್ರಸಂಹಿತೆಗೆ ಹೊಸ ತಂತ್ರರೂಪಿಸಿದೆ.
ವಸ್ತ್ರಸಂಹಿತೆ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆಯದಂತೆ ತಡೆಯಲು ಈ ಬಾರಿ ಕೆಇಎ ವಿಶೇಷ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 23 ಮತ್ತು 24 ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 750 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ
750 ಪರೀಕ್ಷೆ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆ ಅಧಿಕಾರಿಗಳನ್ನ ನೇಮಕ ಮಾಡಲು ಕೆಇಎ ಮಂದಾಗಿದೆ. ಈ 750 ವಸ್ತ್ರಸಂಹಿತೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಪರೀಕ್ಷೆಗೆ ಏನೆಲ್ಲಾ ಮಾರ್ಗಸೂಚಿ ಇದೆ, ಯಾವೆಲ್ಲಾ ವಸ್ತ್ರಸಂಹಿತೆ ಇದೆ ಎಂಬ ಸಂಪೂರ್ಣ ಮಾಹಿತಿ ಈ ಅಧಿಕಾರಿಗಳಿಗೆ ಇರಲಿದ್ದು, ಇವರು ಅನುಮತಿ ನೀಡಲಿದ್ದಾರೆ. ಹೀಗಾಗಿ ಈ ವರ್ಷ ಗಲಾಟೆ, ಗದ್ದಲ ಇಲ್ಲದೆ ಸಿಇಟಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ.
ಇದನ್ನೂ ಓದಿ: ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದೇ ಆದರೆ ಅತಿರೇಕ, ಕಠಿಣ ಕ್ರಮ ಕೈಗೊಳ್ಳುತ್ತೇವೆ: ಸಚಿವ ಎಂಸಿ ಸುಧಾಕರ್
ವಸ್ತ್ರಸಂಹಿತೆಯ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಅದನ್ನು ಜಾರಿಗೆ ತರುವ ಕ್ರಮದಲ್ಲಿ ಪಾರದರ್ಶಕತೆ ಮತ್ತು ಜಾಗರೂಕತೆ ವಹಿಸಲಾಗುತ್ತಿದೆ. ಈ ಮೂಲಕ ಪರೀಕ್ಷಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ವೇದಿಕೆ ಸಿದ್ಧಪಡಿಸಲಾಗಿದೆ. ಒಟ್ಟಾರೆ ಕಳೆದ ವರ್ಷದ ಕಹಿ ಘಟನೆಗಳಿಂದ ಪಾಠ ಕಲಿತಿರುವ ಕೆಇಎ, ಈ ಬಾರಿ ಯಾವುದೇ ವಿವಾದ ಇಲ್ಲದೆ ಪರೀಕ್ಷೆ ನಡೆಸಲು ಸರ್ವಸನ್ನದ್ಧವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.