KCET Results 2022: ಜುಲೈ 30ಕ್ಕೆ ಸಿಇಟಿ ಪರೀಕ್ಷಾ ಫಲಿತಾಂಶ
ಸಿಇಟಿ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳು ಕೆಇಎ ವೆಬ್ಸೈಟ್ ಮೂಲಕ ಅಂಕಗಳನ್ನು ಅಪ್ಲೋಡ್ ಮಾಡಲು ನಾಳೆ (ಜುಲೈ 26) ಸಂಜೆಯವರೆಗೆ ಅವಕಾಶ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ಪರಿಕ್ಷಾ ಪ್ರಾಧಿಕಾರವು (Karnataka Education Authority – KEA) ಜುಲೈ 30ರ ಶನಿವಾರ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test – CET) ಫಲಿತಾಂಶ ಪ್ರಕಟಿಸಲಿದೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ವೆಬ್ಸೈಟ್ kea.kar.nic.in ರಲ್ಲಿ ಫಲಿತಾಂಶವು ಲಭ್ಯವಿರಲಿದೆ. ಕಳೆದ ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಸಿಇಟಿ ಪರೀಕ್ಷೆ ನಡೆಸುವಾಗ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಅವಕಾಶ ಕೊಡಲಾಗಿತ್ತು. ಈಗ ಅವರ ಫಲಿತಾಂಶವೂ ಬಂದಿದೆ. ಸಿಇಟಿ ಬರೆದಿದ್ದ ವಿದ್ಯಾರ್ಥಿಗಳು ಕೆಇಎ ವೆಬ್ಸೈಟ್ ಮೂಲಕ ಅಂಕಗಳನ್ನು ಅಪ್ಲೋಡ್ ಮಾಡಲು ನಾಳೆ ಸಂಜೆಯವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಅಂಕಗಳನ್ನು ಮಾನದಂಡವನ್ನು ಪರಿಗಣಿಸಲಾಗುತ್ತದೆ.
ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ (Department of Pre Univercity Education – PUC) ಫಲಿತಾಂಶವು ಜೂನ್ 18ರಂದು ಪ್ರಕಟವಾಗಿತ್ತು. ಅವರ ಫಲಿತಾಂಶವನ್ನು ಕ್ರೋಡಿಕರಿಸಿ ಸಿಇಟಿ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಲಾಗಿದೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳಲ್ಲಿ 12ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ತಮ್ಮ ಅಂಕದ ವಿವರವನ್ನು ಕೆಇಎ ವೆಬ್ಸೈಟ್ಗೆ ಅಪ್ಲೋಡ್ ಮಾಡಿದ ಬಳಿಕೆ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಿ ಅಂತಿಮ ಫಲಿತಾಂಶವನ್ನು ಕೆಇಎ ಪ್ರಕಟಿಸಲಿದೆ.
ಈ ಮೊದಲು ಸಿಇಟಿ ಫಲಿತಾಂಶವನ್ನು ಜುಲೈ 17ರಂದೆ ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಆದರೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು.
‘ಫಲಿತಾಂಶ ಪ್ರಕಟಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಜುಲೈ 29 ಅಥವಾ 30 ರಂದು ಫಲಿತಾಂಶ ಪ್ರಕಟಿಸುತ್ತೇವೆ’ ಎಂದು ನಿನ್ನೆಯಷ್ಟೇ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Published On - 3:03 pm, Mon, 25 July 22