ಸರ್ಕಾರಿ ಶಾಲೆಗಳಲ್ಲಿ ಸುಮಾರು 60 ಸಾವಿರ ಶಿಕ್ಷಕರ ಕೊರತೆ: 6,158 ಶಾಲೆಗಳಲ್ಲಿ ಇರೋದು ಒಬ್ಬರೇ ಶಿಕ್ಷಕ!

|

Updated on: Dec 23, 2024 | 12:40 PM

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಸುಮಾರು 60 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ವರದಿಯಾಗಿದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಕೊರತೆ ತೀವ್ರವಾಗಿದೆ. ಕೇರಳ ಮಾದರಿಯನ್ನು ಅನುಸರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ. ಭವಿಷ್ಯದಲ್ಲಿ ನಿವೃತ್ತಿಯಾಗುವ ಶಿಕ್ಷಕರ ಸಂಖ್ಯೆಯನ್ನು ಗಮನಿಸಿದರೆ, ಈ ಕೊರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಸರ್ಕಾರಿ ಶಾಲೆಗಳಲ್ಲಿ ಸುಮಾರು 60 ಸಾವಿರ ಶಿಕ್ಷಕರ ಕೊರತೆ: 6,158 ಶಾಲೆಗಳಲ್ಲಿ ಇರೋದು ಒಬ್ಬರೇ ಶಿಕ್ಷಕ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 23: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ ಎಂದು ವರದಿಯಾಗಿದೆ. ಈ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ಅಲ್ಲದೆ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರಿಂದ ನಿರ್ವಹಿಸಲ್ಪಡುತ್ತಿವೆ ಎಂಬುದು ತಿಳಿದುಬಂದಿದೆ.

ರಾಜ್ಯದಲ್ಲಿ ವ್ಯಾಪಕ ಶಿಕ್ಷಕರ ಕೊರತೆ ಇದೆ. ಜತೆಗೆ, ಸೌಲಭ್ಯಗಳ ಕೊರತೆಗಳಿಂದಾಗಿ ಇರುವ ಶಿಕ್ಷಕರನ್ನೂ ಆಕರ್ಷಿಸಲು ಸರ್ಕಾರ ವಿಫಲವಾಗಿದೆ. ಇದು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಎಲ್ಲಾ ಹಂತಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ನಾಶಪಡಿಸುತ್ತಿದೆ ಎಂದು ಶಿಕ್ಷಣತಜ್ಞರು ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್’ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಕೇರಳ ಮಾದರಿ ಅನುಸರಿಸಲು ಶಿಕ್ಷಣ ತಜ್ಞರ ಸಲಹೆ

ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇರಳ ಮಾದರಿಯನ್ನು ಕರ್ನಾಟಕ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಶಾಲೆಗಳ ಗುಣಮಟ್ಟ ಹೆಚ್ಚಿಸಲು ಐದು ವರ್ಷಗಳಲ್ಲಿ 10,000 ಕೋಟಿ ರೂ.ಗಳನ್ನು ಕೇರಳ ಸರ್ಕಾರ ಮೀಸಲಿಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ. ಶಿಕ್ಷಕರ ಕೊರತೆಯು ಶಿಕ್ಷಣದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 35 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಕಡ್ಡಾಯವಾಗಿರಬೇಕು ಎಂದು ಅವರು ಹೇಳಿದ್ದಾರೆ.

ನಿವೃತ್ತರಾಗಲಿದ್ದಾರೆ 34 ಸಾವಿರಕ್ಕೂ ಹೆಚ್ಚು ಶಿಕ್ಷಕರು

ಕರ್ನಾಟಕದಲ್ಲಿ 50,067 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. 2028-29ರ ವೇಳೆಗೆ 34,807ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತರಾಗಲಿದ್ದಾರೆ. ಆಗ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಇಂಥ ಸ್ಥಿತಿಯಲ್ಲಿ ನಾವು ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಶಿಕ್ಷಣತಜ್ಞ ನಿರಂಜನಾರಾಧ್ಯ ವಿಪಿ ಪ್ರಶ್ನಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಖಾಲಿಯಾಗಲಿವೆ 80 ಸಾವಿರ ಹುದ್ದೆ

ತಕ್ಷಣದ ಕ್ರಮ ಕೈಗೊಳ್ಳದಿದ್ದರೆ, ಶಿಕ್ಷಣ ವ್ಯವಸ್ಥೆಯು 80,000 ದಷ್ಟು ಶಿಕ್ಷಕರ ಹುದ್ದೆ ಖಾಲಿಯಾಗುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪರಿಣಾಮವಾಗಿ ರಾಜ್ಯಾದ್ಯಂತ ಶಾಲೆಗಳು ದುರ್ಬಲವಾಗಲಿವೆ ಎಂದು ಅವರು ಹೇಳಿದ್ದಾರೆ.

ಕೊರತೆಯನ್ನು ನೀಗಿಸಲು ಸದ್ಯ ಇಲಾಖೆಯು 45,000 ಅತಿಥಿ ಶಿಕ್ಷಕರನ್ನು ಆಶ್ರಯಿಸಿದೆ. ಅವರಲ್ಲಿ ಸುಮಾರು 35,000 ಪ್ರಾಥಮಿಕ ಹಂತದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ, ಗಣಿತ ಶಿಕ್ಷಕರಿಗೆ ಬರ: 22 ಲಕ್ಷ ವಿದ್ಯಾರ್ಥಿಗಳಿಗೆ 9 ಸಾವಿರ ಶಿಕ್ಷಕರು!

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರ ತೀವ್ರ ಕೊರತೆ ಇರುವ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವರೆಗಿನ ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಕೇವಲ 8,895 ವಿಜ್ಞಾನ ಮತ್ತು ಗಣಿತ ಶಿಕ್ಷಕರಿದ್ದಾರೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Mon, 23 December 24