9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಆ. 2 ರಿಂದ ಶಾಲೆ ಆರಂಭ? ಆರೋಗ್ಯ ಇಲಾಖೆ ಅನುಮತಿಗೆ ಕಾದಿರುವ ಶಿಕ್ಷಣ ಇಲಾಖೆ

| Updated By: ಸಾಧು ಶ್ರೀನಾಥ್​

Updated on: Jul 23, 2021 | 11:56 AM

ಮೊದಲ ಹಂತದಲ್ಲಿ 9, 10, 11, 12ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸುವ ಯೋಚನೆ ಶಿಕ್ಷಣ ಇಲಾಖೆ ಮುಂದಿದ್ದು, ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ರಚನೆಯಾಗಿರುವ ಕಾರ್ಯಪಡೆ ಹಂತ ಹಂತವಾಗಿ ಶಾಲೆ ಆರಂಭಿಸುವಂತೆ ಸಲಹೆ ನೀಡಿದೆ.

9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಆ. 2 ರಿಂದ ಶಾಲೆ ಆರಂಭ? ಆರೋಗ್ಯ ಇಲಾಖೆ ಅನುಮತಿಗೆ ಕಾದಿರುವ ಶಿಕ್ಷಣ ಇಲಾಖೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಆತಂಕದಿಂದ ಸ್ಥಗಿತಗೊಂಡಿರುವ ಶಾಲಾ ಕಾಲೇಜುಗಳನ್ನು (Schools and Colleges) ಹಂತ ಹಂತವಾಗಿ ತೆರೆಯುವುದಕ್ಕೆ (Reopen) ಶಿಕ್ಷಣ ಇಲಾಖೆ ಸಜ್ಜು ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆ (Education Department) ಪ್ರಧಾನ ಕಾರ್ಯಾದರ್ಶಿ ಉಮಾಶಂಕರ್​ ಅವರಿಗೆ ವಿಸ್ತೃತ ವರದಿಯನ್ನು ಸಲ್ಲಿಸಲಾಗಿದ್ದು, ಇನ್ನು ಎರಡು ದಿನಗಳ ಒಳಗೆ ಅಧಿಕೃತ ತೀರ್ಮಾನ (Decision) ಹೊರಬೀಳುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ಆಗಸ್ಟ್​ 2ರಿಂದ ರಾಜ್ಯದಲ್ಲಿ ಶಾಲೆ ಆರಂಭ ಬಹುತೇಕ ಖಚಿತವಾಗಿದ್ದು, ಇದೀಗ ಆರೋಗ್ಯ ಇಲಾಖೆ (Health Department) ಅಭಿಪ್ರಾಯವನ್ನು ಕೇಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಒಂದುವೇಳೆ ಆರೋಗ್ಯ ಇಲಾಖೆಯೂ ಶಾಲೆ ಆರಂಭಕ್ಕೆ ಅಸ್ತು ಎಂದರೆ ಆಗಸ್ಟ್ 2ರಿಂದ ಶಾಲೆ ತೆರೆಯಲಿವೆ.

ಮೊದಲ ಹಂತದಲ್ಲಿ 9, 10, 11, 12ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸುವ ಯೋಚನೆ ಶಿಕ್ಷಣ ಇಲಾಖೆ ಮುಂದಿದ್ದು, ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ರಚನೆಯಾಗಿರುವ ಕಾರ್ಯಪಡೆ ಹಂತ ಹಂತವಾಗಿ ಶಾಲೆ ಆರಂಭಿಸುವಂತೆ ಸಲಹೆ ನೀಡಿದೆ. ಶಾಲೆ ಆರಂಭ ಮಾಡುವ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯಾದರ್ಶಿ ಉಮಾಶಂಕರ್ ಅವರಿಗೆ ವರದಿಯನ್ನೂ ಸಲ್ಲಿಸಲಾಗಿದೆ.

ಆದರೆ, ಪ್ರಸ್ತುತ ಡೆಲ್ಟಾ ರೂಪಾಂತರಿಯ ಭಯ ಸಂಪೂರ್ಣ ಕಡಿಮೆಯಾಗದ ಕಾರಣ ಹಾಗೂ ಕೊರೊನಾ ಮೂರನೇ ಅಲೆ ಸಾಧ್ಯತೆ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆಯನ್ನೂ ನೀಡಿರುವುದರಿಂದ ಶಿಕ್ಷಣ ಇಲಾಖೆ ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಸಲಹೆ ಪಡೆಯಲು ಸನ್ನದ್ಧವಾಗಿದೆ. ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಮಾಡಲಾಗಿದ್ದು, ಕನಿಷ್ಠ 1 ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡ ಪದವಿ ಕಾಲೇಜಿನ ವಿದ್ಯಾರ್ಥಿಗಳು ಜುಲೈ 26ರಿಂದ ಭೌತಿಕ ತರಗತಿಗಳಿಗೆ ಹಾಜರಾಗಬಹುದು ಎಂದು ಸೂಚಿಸಲಾಗಿದೆ.

ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಇನ್ನೂ ಅಲಭ್ಯವಾಗಿರುವ ಕಾರಣ ಶಿಕ್ಷಣ ಇಲಾಖೆ ಕೊಂಚ ಯೋಚಿಸಿ ಹೆಜ್ಜೆ ಇಡುವಂತಾಗಿದ್ದು, ಎಲ್ಲಾ ಆಯಾಮಗಳಿಂದ ಚರ್ಚಿಸಿದ ನಂತರವಷ್ಟೇ ತರಗತಿಗಳನ್ನು ಆರಂಭಿಸುವ ಸಾಧ್ಯತೆ ಇದೆ. ಕೊರೊನಾ ಎರಡನೇ ಅಲೆ ತಾರಕಕ್ಕೇರಿದ್ದರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೇ ಫಲಿತಾಂಶ ನೀಡಲಾಗಿದ್ದು, ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ನಿನ್ನೆಯಷ್ಟೇ (ಜುಲೈ 22) ಪರೀಕ್ಷೆ ಪೂರ್ಣಗೊಂಡಿದೆ.

ಇದೀಗ ಇನ್ನೂ ವಿಳಂಬ ಮಾಡದೇ ತರಗತಿಗಳನ್ನು ಆರಂಭಿಸಲು ತಯಾರಿ ನಡೆಸಬೇಕು ಎನ್ನುವ ಉತ್ಸಾಹದಲ್ಲಿರುವ ಶಿಕ್ಷಣ ಇಲಾಖೆ ಯಾವೆಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ಆರೋಗ್ಯ ಇಲಾಖೆ ಏನು ಸಲಹೆ ನೀಡಲಿದೆ. ಸರ್ಕಾರ ಅಂತಿಮವಾಗಿ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದಕ್ಕೆ ಇನ್ನೆರೆಡು ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ:
School reopen in Karnataka: ಅಕ್ಟೋಬರ್ ಬಳಿಕ ಶಾಲೆಗಳ ಪುನರಾಂಭದ ಸುಳಿವು ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ 

ಕೊರೊನಾ 3ನೇ ಅಲೆ ಭೀತಿ; ಭೌತಿಕವಾಗಿ ಶಾಲೆ ಆರಂಭ ತಡವಾದರೆ ವಿದ್ಯಾಗಮ-2 ಆರಂಭಕ್ಕೆ ಸಿದ್ಧತೆ

(Karnataka School Reopen likely to be from August 2 but Education Department is waiting for a Nod from Health Department)

Published On - 11:42 am, Fri, 23 July 21