ICSE ISC Result 2021: ವಿದ್ಯಾರ್ಥಿಗಳೇ ಗಮನಿಸಿ- ಐಸಿಎಸ್ಇ ಮತ್ತು ಐಎಸ್ಸಿ ಫಲಿತಾಂಶ ನಾಳೆ ಘೋಷಣೆ
CISCE: ಐಸಿಎಸ್ಇ ಮತ್ತು ಐಎಸ್ಸಿಯ ಹತ್ತು ಮತ್ತು ಹನ್ನೊಂದನೇ ತರಗತಿಯ ಫಲಿತಾಂಶವನ್ನು ನಾಳೆ ಬಿಡುಗಡೆ ಮಾಡುವುದಾಗಿ ಸಿಐಎಸ್ಸಿಇ ತಿಳಿಸಿದೆ.
ನವದೆಹಲಿ: ಐಸಿಎಸ್ಇ ಮತ್ತು ಐಎಸ್ಸಿಯ ಫಲಿತಾಂಶವನ್ನು ನಾಳೆ ಮಧ್ಯಾಹ್ನ ಮೂರು ಗಂಟೆಗೆ ಘೋಷಿಸುವುದಾಗಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್(CISCE) ತಿಳಿಸಿದೆ. ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಐಸಿಎಸ್ಇ ಮತ್ತು ಐಎಸ್ಸಿಯ ಹತ್ತು ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು. ಫಲಿತಾಂಶವು ಕೌನ್ಸಿಲ್ನ ಅಧಿಕೃತ ವೆಬ್ಸೈಟ್, cisce.org ಹಾಗೂ results.cisce.orgಯಲ್ಲಿ ನೋಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
CISCE ಅಡಿಯಲ್ಲಿ ಬರುವ ಶಾಲಾ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಕೌನ್ಸಿಲ್ನ ಕ್ಯಾರೀರ್ಸ್ ಪೋರ್ಟಲ್ನಲ್ಲಿ ಮುಖ್ಯೋಪಾಧ್ಯಾಯ/ ಪ್ರಾಂಶುಪಾಲರ ಲಾಗಿನ್ ಐಡಿ ಬಳಸಿ ವೀಕ್ಷಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ಎಸ್ಎಂಎಸ್ ಮುಖಾಂತರವೂ ಫಲಿತಾಂಶವನ್ನು ನೋಡಬಹುದು. ಅದಕ್ಕಾಗಿ ಅವರ ಐಡಿ ನಂಬರ್ ಅನ್ನು ICSE/ISC (Unique ID) ಮಾದರಿಯಲ್ಲಿ ಬರೆದು 09248082883 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬೇಕು. ಆಗ ಫಲಿತಾಂಶವು ನೇರವಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಐಸಿಎಸ್ಇ ಮತ್ತು ಐಎಸ್ಸಿಯ ಎಲ್ಲಾ ಪರೀಕ್ಷೆಗಳನ್ನು ಕರೊನಾ ಕಾರಣದಿಂದಾಗಿ ರದ್ದುಪಡಿಸಲಾಗಿತ್ತು. ಆಂತರಿಕ ಪರೀಕ್ಷೆಗಳಲ್ಲಿ ಗಳಿಸಿದ ಆಧಾರದ ಮೇಲೆ ಫಲಿತಾಂಶವನ್ನು ಘೋಷಿಸುವುದಾಗಿ ಜೂನ್ನಲ್ಲಿ ಕೌನ್ಸಿಲ್ ತಿಳಿಸಿತ್ತು. ಈ ಕಾರಣದಿಂದಾಗಿ ಯಾವುದೇ ರೀತಿಯ ಮರು ಮೌಲ್ಯಮಾಪನವನ್ನು ನಡೆಸಲಾಗುವುದಿಲ್ಲ ಎಂದು ಕೌನ್ಸಿಲ್ ಸ್ಪಷ್ಟಪಡಿಸಿದೆ.
ಒಂದು ವೇಳೆ ವಿದ್ಯಾರ್ಥಿಗಳಿಗೆ ಅಂಕಗಳ ಕುರಿತು ಅಸಮಾಧಾನವದ್ದಲ್ಲಿ ಅದನ್ನು ವಿಸ್ತಾರವಾಗಿ ಪತ್ರದಲ್ಲಿ ಬರೆದು ಅವರ ಶಾಲಾ- ಕಾಲೇಜಿನ ಪ್ರಾಂಶುಪಾಲರಿಗೆ ನೀಡಲು CISCE ಸೂಚಿಸಿದೆ. ಶಾಲಾ- ಕಾಲೇಜುಗಳು ಅಂತಹ ಪತ್ರಗಳನ್ನು ಪರಾಮರ್ಶಿಸಿ ಅಗತ್ಯವಿದ್ದಲ್ಲಿ ಮಾತ್ರ CISCEಗೆ ಅಗತ್ಯ ದಾಖಲೆ ಮತ್ತು ಸೂಚನೆಗಳೊಂದಿಗೆ ತಲುಪಿಸಬೇಕು ಎಂದು ಕೌನ್ಸಿಲ್ ತಿಳಿಸಿದೆ. ಅಂತಹ ಕೋರಿಕೆಗಳನ್ನು asicse@cisce.org (ಹತ್ತನೇ ತರಗತಿ) ಮತ್ತು asisc@cisce.org (ಹನ್ನೆರಡನೇ ತರಗತಿ) ವಿಳಾಸಗಳಿಗೆ ಆಗಸ್ಟ್ 1ರೊಳಗೆ ತಲುಪಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: NEET UG 2021: ಇದೇ ಮೊದಲ ಬಾರಿಗೆ ದುಬೈನಲ್ಲಿ ನಡೆಯಲಿದೆ ನೀಟ್ ಪ್ರವೇಶ ಪರೀಕ್ಷೆ
(ICSE and ISC results will announce tomorrow at 3pm)