ಬೆಂಗಳೂರು, ಮೇ 9: ಎಸ್‌ಎಸ್‌ಎಲ್‌ಸಿ 2023-24ನೇ ಸಾಲಿನ ಫಲಿತಾಂಶ (SSLC Result) ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ 10ರಷ್ಟು ಕಡಿಮೆ ಫಲಿತಾಂಶ ದಾಖಲಾಗಿದೆ. ಶೇ 20ರಷ್ಟು ಗ್ರೇಸ್ ಮಾರ್ಕ್ (Grace Marks) ನೀಡಿದ ಹೊರತಾಗಿಯೂ ಕಡಿಮೆ ಫಲಿತಾಂಶ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೇರ್ಗಡೆಗೆ ಕನಿಷ್ಠ ಅಂಕವನ್ನು 35ರಿಂದ 25ಕ್ಕೆ ಶಿಕ್ಷಣ ಇಲಾಖೆ ಇಳಿಸಿತ್ತು. ಆದಾಗ್ಯೂ ಫಲಿತಾಂಶದ ಪ್ರಮಾಣ ಇಳಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಒಂದು ವೇಳೆ ಗ್ರೇಸ್ ಮಾರ್ಕ್ ನೀಡದಿದ್ದರೆ ಇಷ್ಟೂ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡು ಫಲಿತಾಂಶ ಪ್ರಮಾಣ ಇನ್ನಷ್ಟು ಕುಸಿಯುತ್ತಿತ್ತು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉಡುಪಿ ಜಿಲ್ಲೆ ಶೇ 94ರ ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಯಾದಗಿರಿ ಜಿಲ್ಲೆ ಶೇ 50.59 ರ ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
625ಕ್ಕೆ 625 ಅಂಕ ಗಳಿಸಿರುವ ಅಂಕಿತಾ ಬಸಪ್ಪ ಕೊನ್ನೂರುಗೆ ಬಾಗಲಕೋಟೆ ಡಿಸಿ ಕೆ.ಎಂ.ಜಾನಕಿ ಅಭಿನಂದನೆ ಸಲ್ಲಿಸಿದ್ದಾರೆ. ಅಂಕಿತಾ 625ಕ್ಕೆ 625 ಅಂಕ ಪಡೆದು ಜಿಲ್ಲೆಯ ಪ್ರತಿಷ್ಠೆ ಹೆಚ್ಚಿಸಿದ್ದಾಳೆ. ಅವಳ ಪ್ರಯತ್ನಕ್ಕೆ ಜಿಲ್ಲಾಡಳಿತದಿಂದ ಹೃತ್ಪೂರ್ವಕ ಶುಭಾಶಯ ಹೇಳುವೆ. ಅಂಕಿತಾ ಸಾಧನೆ ಈಗ 9ನೇ ತರಗತಿ ಓದುತ್ತಿರುವ ಹಾಗೂ ಹೈಸ್ಕೂಲ್ ಮಕ್ಕಳಿಗೆ ಪ್ರೇರಣೆ ಆಗಿದೆ. ಅವಳ ಸಾಧನೆಯಿಂದ ಸ್ಪೂರ್ತಿ ಪಡೆದು, ಅವರೂ ಸಹ ಉತ್ತಮ ಸಾಧನೆ ಮಾಡಲಿದ್ದಾರೆ. ಅಂಕಿತಾರ ಮುಂದಿನ ಉನ್ನತ ಶಿಕ್ಷಣಕ್ಕೆ ಅವರ ಕುಟುಂಬದ ಜೊತೆ ಜಿಲ್ಲಾಡಳಿತ ಸಹ ಸಹಕಾರ ನೀಡಲಿದೆ. ಮುಂದಿನ ವಿದ್ಯಾಭ್ಯಾಸ ಹೀಗೆಯೇ ಅಗ್ರಗಣ್ಯವಾಗಿರಲಿ. ಅವಳ ಕನಸು ನನಸಾಗಲು ಪ್ರಯತ್ನ ಹೀಗೆಯೇ ಸಾಗಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: SSLC ಫಲಿತಾಂಶ ಪ್ರಕಟ, ರಿಸಲ್ಟ್ ನೋಡಲು ಈ ವೆಬ್ ಸೈಟ್ಗಳಿಗೆ ಭೇಟಿ ನೀಡಿ
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ