AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಶೋಧನೆ, ನಾವೀನ್ಯತೆಗೆ ಹೊಸ ಬಲ: ಯುಕೆ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದ!

ತಂತ್ರಜ್ಞಾನ, ಸಂಶೋಧನೆ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಯುಕೆ’ಯ ಯೂನಿವರ್ಸಿಟಿ ಆಫ್ ಯಾರ್ಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ 3 ವರ್ಷಗಳಲ್ಲಿ ಜೈವಿಕ ತಂತ್ರಜ್ಞಾನ, ಕ್ಲೀನ್-ಟೆಕ್ ಹಾಗೂ ತ್ಯಾಜ್ಯ ನಿರ್ವಹಣೆ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸಂಶೋಧನೆ, ನಾವೀನ್ಯತೆಗೆ ಹೊಸ ಬಲ: ಯುಕೆ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದ!
ಸಚಿವ ಪ್ರಿಯಾಂಕ್ ಖರ್ಗೆImage Credit source: PTI
ಅಕ್ಷತಾ ವರ್ಕಾಡಿ
|

Updated on:Oct 22, 2026 | 11:48 AM

Share

ಬೆಂಗಳೂರು: ತಂತ್ರಜ್ಞಾನ, ಸಂಶೋಧನೆ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಪ್ರಸಿದ್ಧ ಯೂನಿವರ್ಸಿಟಿ ಆಫ್ ಯಾರ್ಕ್ (University of York) ನಡುವೆ ಮಹತ್ವದ ಸಹಯೋಗ ಏರ್ಪಟ್ಟಿದೆ. ಎರಡೂ ಸಂಸ್ಥೆಗಳು ನಾವೀನ್ಯತೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸುವ ಸಂಬಂಧ ‘ಉದ್ದೇಶಪತ್ರ’ಕ್ಕೆ (Letter of Intent) ಸಹಿ ಹಾಕಿರುವುದಾಗಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಶೈರ್ ಮೇಯರ್ ಡೇವಿಡ್ ಸ್ಕೇಥ್ ಅವರ ಉಪಸ್ಥಿತಿಯಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಸಹಯೋಗದ ಪ್ರಮುಖ ಕ್ಷೇತ್ರಗಳು:

ಸರ್ಕಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಒಪ್ಪಂದದಡಿ ಜೈವಿಕ ಅರ್ಥವ್ಯವಸ್ಥೆ (Bioeconomy), ಸ್ವಚ್ಛ ತಂತ್ರಜ್ಞಾನ (Clean Technology), ಕೃಷಿ-ತಂತ್ರಜ್ಞಾನ (Agri-tech) ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಇದರೊಂದಿಗೆ ಸುಸ್ಥಿರತೆ, ಘನತ್ಯಾಜ್ಯ ನಿರ್ವಹಣೆ, ನೀರು, ಸಾರಿಗೆ, ಭದ್ರತೆ ಕ್ಷೇತ್ರಗಳಲ್ಲೂ ಸಹಕರಿಸುವ ಕುರಿತು ಚರ್ಚೆಗಳು ನಡೆದಿವೆ. ಈ ಮೂಲಕ ಉಭಯ ವಲಯಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ.

ಕರ್ನಾಟಕ ಮತ್ತು ಯಾರ್ಕ್ ಸಾಮರ್ಥ್ಯದ ಸಮ್ಮಿಲನ:

ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಶೈರ್ ಪ್ರದೇಶಗಳು ಜೈವಿಕ ಅರ್ಥವ್ಯವಸ್ಥೆ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸುಸ್ಥಿರ ರಸಾಯನಶಾಸ್ತ್ರ, ಕೃಷಿ ನಾವೀನ್ಯತೆ ಮತ್ತು ಕ್ಲೀನ್-ಟೆಕ್ ಕ್ಷೇತ್ರಗಳಲ್ಲಿ ಅತ್ಯುತ್ತಮ ಪರಿಣತಿಯನ್ನು ಹೊಂದಿವೆ. ಮತ್ತೊಂದೆಡೆ, ಕರ್ನಾಟಕವು ಜೈವಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಅತ್ಯುತ್ತಮ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಮತ್ತು ಇಂಜಿನಿಯರಿಂಗ್ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಎರಡೂ ಪ್ರದೇಶಗಳ ಶಕ್ತಿಯು ಒಂದಾಗುತ್ತಿರುವುದು ನಾವೀನ್ಯತೆಗೆ ಹೊಸ ಹಾದಿ ತೆರೆಯಲಿದೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ-ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಎರಡೇ ಮುಖ್ಯ ಪರೀಕ್ಷೆ!

3 ವರ್ಷಗಳ ಭವಿಷ್ಯದ ಕ್ರಿಯಾ ಯೋಜನೆ:

ಮುಂದಿನ ಮೂರು ವರ್ಷಗಳಲ್ಲಿ ಜಂಟಿ ನಾವೀನ್ಯತೆ ಕಾರ್ಯಕ್ರಮಗಳು, ಉತ್ಕೃಷ್ಠತಾ ಕೇಂದ್ರಗಳ (Centres of Excellence) ಸ್ಥಾಪನೆ, ಸರ್ಕಾರಿ ಮಟ್ಟದ (G2G) ಪಾಲುದಾರಿಕೆಗಳು ಮತ್ತು ಪ್ರಾಯೋಗಿಕ ಯೋಜನೆಗಳನ್ನು ವೇಗವಾಗಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ವಿಶೇಷವಾಗಿ ಸುಸ್ಥಿರತೆ, ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ (creating economic value from waste) ಯೋಜನೆಗಳ ಮೇಲೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Thu, 22 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More