
ಕೇರಳಿಗರಲ್ಲಿ ಫುಟ್‌ಬಾಲ್ ಆಟದ ಮೇಲಿರುವ ಜಾಗತಿಕ ಮಟ್ಟದ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ. ಇಂದು ಮಧ್ಯರಾತ್ರಿ ನಡೆಯಲಿರುವ ಫಿಫಾ ವಿಶ್ವಕಪ್ 2026ರ (FIFA World Cup 2026) ಮಹಾ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಜುಲೈ 20 ರ ಸೋಮವಾರದಂದು ರಾಜ್ಯದ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಅಧಿಕೃತ ರಜೆ ಘೋಷಿಸಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಈ ಹೈ-ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ವಿಶಿಷ್ಟ ನಿರ್ಧಾರ ಕೈಗೊಳ್ಳಲಾಗಿದೆ.
ಹಾಲಿ ಚಾಂಪಿಯನ್ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಹಾಗೂ ಯುರೋಪ್ ಚಾಂಪಿಯನ್ ಸ್ಪೇನ್ ನಡುವಿನ ಪ್ರಶಸ್ತಿ ಸಮರವು ಭಾರತೀಯ ಕಾಲಮಾನ (IST) ಭಾನುವಾರ ಮಧ್ಯರಾತ್ರಿ 12:30 ಕ್ಕೆ ಆರಂಭವಾಗಲಿದೆ. ಈ ರೋಮಾಂಚಕ ಪಂದ್ಯ ಮುಕ್ತಾಯಗೊಳ್ಳಲು ಮುಂಜಾನೆವರೆಗೂ ಸಮಯ ಹಿಡಿಯಲಿದ್ದು, ಆ ಬಳಿಕ ವಿಜೇತ ತಂಡದ ಅಭಿಮಾನಿಗಳು ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಲಿದ್ದಾರೆ. ಪಂದ್ಯದ ಪ್ರಸಾರದ ಸಮಯದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಡರಾತ್ರಿಯವರೆಗೆ ಎಚ್ಚರವಿರಬೇಕಾಗುತ್ತದೆ. ಇದರಿಂದ ಸೋಮವಾರದ ದಿನಚರಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡು ಈ ರಜೆ ನೀಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಚಿವ ಎನ್. ಶಂಶುದ್ದೀನ್ ಅವರು ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, “ಈಗ ಖುಷಿನಾ ಮಕ್ಕಳೇ?” ಎಂದು ಪ್ರೀತಿಯಿಂದ ಪ್ರಶ್ನಿಸಿದ್ದಾರೆ. ಫುಟ್‌ಬಾಲ್ ಪ್ರೇಮಿಗಳಾದ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಸಂಘಟನೆಗಳಿಂದ ಬಂದ ವ್ಯಾಪಕ ಮನವಿಗಳನ್ನು ಪುರಸ್ಕರಿಸಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ಕಚೇರಿಯು ಈ ಆದೇಶ ಹೊರಡಿಸಿದೆ. ಮಾಜಿ ಶಿಕ್ಷಣ ಸಚಿವರಾದ ವಿ. ಶಿವನ್‌ಕುಟ್ಟಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ತಡರಾತ್ರಿಯ ಪಂದ್ಯದ ನಂತರ ಮಕ್ಕಳಿಗೆ ತರಗತಿಗಳಿಗೆ ಹಾಜರಾಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರಜೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್ನ 21 ರೋಚಕ ಸಂಗತಿಗಳು ನಿಮಗೆ ಗೊತ್ತೇ?
ಸರ್ಕಾರವು ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರೂ, ಸೋಮವಾರ (ಜುಲೈ 20) ಮೊದಲೇ ನಿಗದಿಯಾಗಿರುವ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ (CMO) ಸ್ಪಷ್ಟಪಡಿಸಿದೆ. ಪರೀಕ್ಷೆಗಳು ಎಂದಿನಂತೆ ಜರುಗಲಿವೆ. ರಜೆಯಿಂದಾಗಿ ನಷ್ಟವಾಗುವ ಶೈಕ್ಷಣಿಕ ದಿನವನ್ನು ಸರಿದೂಗಿಸಲು ಮುಂದಿನ ಯಾವುದಾದರೊಂದು ಶನಿವಾರವನ್ನು ಕೆಲಸದ ದಿನವನ್ನಾಗಿ ಪರಿವರ್ತಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಕೇರಳದಲ್ಲಿ ಫುಟ್‌ಬಾಲ್ ಜ್ವರ ನೆತ್ತಿಗೇರಿದ್ದು, ಇಡೀ ರಾಜ್ಯದಲ್ಲಿ ಹಬ್ಬದ ಸಡಗರ ಮನೆಮಾಡಿದೆ. ವಿವಿಧ ಸ್ಪೋರ್ಟ್ಸ್ ಕ್ಲಬ್‌ಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸಾರ್ವಜನಿಕ ಮೈದಾನಗಳು ಹಾಗೂ ಪಾರ್ಕ್‌ಗಳಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಣೆಗಾಗಿ ಬೃಹತ್ ಗಾತ್ರದ ಎಲ್‌ಇಡಿ (LED) ಪರದೆಗಳನ್ನು ಅಳವಡಿಸಿವೆ. ತಿರುವನಂತಪುರಂ ಹಾಗೂ ಕೊಚ್ಚಿಯಂತಹ ನಗರಗಳಲ್ಲಿ ಅಭಿಮಾನಿಗಳ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳ ಸಾಗರವೇ ಹರಿದುಬರುವ ನಿರೀಕ್ಷೆ ಇರುವುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಕೇರಳ ಪೊಲೀಸರು ಕಟ್ಟುನಿಟ್ಟಿನ ಕಣ್ಗಾವಲು ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Sun, 19 July 26