Children Health: ಹುಷಾರಿಲ್ಲದ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರು: ಆರೋಗ್ಯ ನಿಯಮಗಳ ಉಲ್ಲಂಘನೆ, ಸೋಂಕು ಹರಡುವ ಆತಂಕ

ಕೆಲ ಪೋಷಕರು ಇಂಥ ರೋಗ ಲಕ್ಷಣಗಳಿರುವ ಮಕ್ಕಳಿಗೆ ಔಷಧಗಳನ್ನು ನೀಡಿ ಶಾಲೆಗಳಿಗೆ ಕಳಿಸುತ್ತಿರುವುದು ಕಂಡುಬಂದಿದೆ.

Children Health: ಹುಷಾರಿಲ್ಲದ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರು: ಆರೋಗ್ಯ ನಿಯಮಗಳ ಉಲ್ಲಂಘನೆ, ಸೋಂಕು ಹರಡುವ ಆತಂಕ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 23, 2022 | 8:49 AM

ಬೆಂಗಳೂರು: ಮಕ್ಕಳ ಆರೋಗ್ಯದ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ರೂಪಿಸಿರುವ ನಿಯಮಾವಳಿಗಳನ್ನು (School Health Advisories) ಪೋಷಕರು ಸಾರಾಸಗಟಾಗಿ ಉಲ್ಲಂಘಿಸುತ್ತಿರುವುದು ನಗರ ವ್ಯಾಪ್ತಿಯಲ್ಲಿ ಸಾಮಾನ್ಯ ಎನಿಸಿದೆ. ಬೆಂಗಳೂರು ನಗರ ವ್ಯಾಪ್ತಿಯ ಮಕ್ಕಳಲ್ಲಿ (Kids in Bengaluru )ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೂ ಇದು ಕಾರಣವಾಗಿದೆ. ಶೀತ, ನೆಗಡಿ ಮತ್ತು ಜ್ವರದ (Cold, Cough, Fever) ಕ್ಷಣಗಳಿರುವ ಮಕ್ಕಳನ್ನು ಶಾಲೆಗಳಿಗೆ ಕಳಿಸಬಾರದು ಎಂದು ನಿಯಮಗಳು ಹೇಳುತ್ತವೆ. ಆದರೂ ಕೆಲ ಪೋಷಕರು ಇಂಥ ರೋಗ ಲಕ್ಷಣಗಳಿರುವ ಮಕ್ಕಳಿಗೆ ಔಷಧಗಳನ್ನು ನೀಡಿ ಶಾಲೆಗಳಿಗೆ ಕಳಿಸುತ್ತಿರುವುದು ಕಂಡುಬಂದಿದೆ.

ಶಾಲೆಗೆ ಬಂದ ಕೆಲ ಮಕ್ಕಳಲ್ಲಿ ವಾಂತಿ, ಹೊಟ್ಟೆನೋವು, ಬೇಧಿ, ಮೂರ್ಛೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದು ವೈರಲ್ ಸೋಂಕಿನ ಲಕ್ಷಣಗಳು. ಆದರೆ ಪೋಷಕರು ಶಾಲೆಗಳ ಆಡಳಿತ ಮಂಡಳಿಗಳ ಗಮನಕ್ಕೆ ತಾರದೆ ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಿದ್ದಾರೆ ಎಂದು ಹಲವು ಖಾಸಗಿ ಶಾಲೆಗಳ ಸಿಬ್ಬಂದಿ ಹೇಳಿದ್ದಾರೆ.

ಮಕ್ಕಳನ್ನು ಮನೆಗಳಲ್ಲಿ ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಹಲವು ಪೋಷಕರು ಅವರನ್ನು ಶಾಲೆಗಳಿಗೆ ಸಾಗ ಹಾಕುತ್ತಾರೆ. ಮಕ್ಕಳ ಆರೋಗ್ಯ ಸಮಸ್ಯೆ ಗಂಭೀರವಾದುದು ಎಂದು ಅರಿಯದ ಪೋಷಕರು ಅದೊಂದು ಸಾಮಾನ್ಯ ಶೀತ-ನೆಗಡಿಯ ಸಮಸ್ಯೆ ಇರಬಹುದು ಎಂದು ಶಾಲೆಗಳಿಗೆ ಕಳಿಸಿಬಿಡುತ್ತಾರೆ. ಆದರೆ ಮುಂಗಾರು ಮಾರುತಗಳು, ಶೀತಗಾಳಿ ಬೀಸುತ್ತಿರುವ ಈ ದಿನಗಳಲ್ಲಿ ಸಾಮಾನ್ಯ ಶೀತ-ನೆಗಡಿ ಸಹ ಸಾಂಕ್ರಾಮಿಕವಾಗಿ ಹರಡುತ್ತವೆ ಎನ್ನುವುದು ಪೋಷಕರಿಗೆ ತಿಳಿಯುತ್ತಿಲ್ಲ ಎನ್ನುವ ಬೆಂಗಳೂರಿನ ಆಕ್ಸ್​ಫರ್ಡ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್​ನ ಪ್ರಾಂಶುಪಾಲ ಬಿ.ಆರ್.ಸುಪ್ರೀತ್ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ವರದಿ ಮಾಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ, ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಬಹುತೇಕ ಶಾಲೆಗಳು ಇಂಥ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗಳಿಂದ ಮನೆಗಳಿಗೆ ವಾಪಸ್ ಕಳಿಸುತ್ತಿದ್ದಾರೆ. ‘ಶಾಲೆಗಳನ್ನು ಪ್ರವೇಶಿಸುವಾಗ ಆರೋಗ್ಯವಾಗಿ, ಲವಲವಿಕೆಯಿಂದ ಕೂಡಿರುವ ಮಕ್ಕಳು ಮಧ್ಯಾಹ್ನ ಸಮೀಪಿಸುತ್ತಿದ್ದಂತೆ ಮಂಕಾಗಿಬಿಡುತ್ತಾರೆ. ವಿಚಾರಿಸಿದರೆ ಈ ಮಕ್ಕಳಿಗೆ ಹಲವು ದಿನಗಳಿಂದ ಹುಷಾರಿಲ್ಲದಿರುವುದು, ಮನೆಗಳಿಂದ ಕಳಿಸುವಾಗ ಔಷಧಿಗಳನ್ನು ಹಾಕಿ ಕಳಿಸಿರುವುದು ತಿಳಿದುಬರುತ್ತದೆ.

ಮೂರ್ಛೆಯಂಥ ಲಕ್ಷಣಗಳಿಗೆ ಮಾತ್ರ ಶಾಲೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು, ಪೋಷಕರನ್ನು ಶಾಲೆಗಳಿಗೆ ಕರೆಸಿಕೊಂಡು ಮಕ್ಕಳನ್ನು ವಾಪಸ್ ಕಳಿಸಲಾಗುತ್ತಿದೆ. ಕಾಯಿಲೆಯ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳಿಸುವುದು ತಪ್ಪು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಶೀತ, ನೆಗಡಿ, ಕೆಮ್ಮು ಮತ್ತು ಜ್ವರದ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳಿಸಬಾರದು. ಅಂಥ ಮಕ್ಕಳಿಗೆ ಮೂರ್ನಾಲ್ಕು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ಮಕ್ಕಳ ತಜ್ಞರಾದ ಡಾ.ರಾಮಚಂದ್ರ ಸಲಹೆ ಮಾಡುತ್ತಾರೆ.

ಬೆಂಗಳೂರು ನಗರದಲ್ಲಿ ಮತ್ತೆ ಕೊವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕಿದೆ. ಉಸಿರಾಟದ ಸಮಸ್ಯೆ ಕಂಡು ಬಂದರೆ ಕೊವಿಡ್ ಟೆಸ್ಟ್ ಮಾಡಿಸಬೇಕು. ಅಂಥ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹುಷಾರಿಲ್ಲದ ಮಕ್ಕಳನ್ನು ಶಾಲೆಗೆ ಕಳಿಸಬಾರದು ಎಂದು ಅವರು ಸೂಚಿಸುತ್ತಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:45 am, Thu, 23 June 22