ಖಾಕಿಯ ಹಿಂದಿನ ಹೃದಯವಂತಿಕೆ: ಪರೀಕ್ಷೆ ವೇಳೆ ಮಗುನಾ ನೋಡಿಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ತಾಯಿಗೆ ನೆರವಾದ ಪೊಲೀಸ್ ಅಧಿಕಾರಿ

ತೆಲಂಗಾಣದ ನಲ್ಗೊಂಡದಲ್ಲಿ ನಡೆದ ಎಸ್‌ಐ ಪರೀಕ್ಷೆಯ ವೇಳೆ, ಪೊಲೀಸ್ ಅಧಿಕಾರಿ ಶರ್ಪುದ್ದೀನ್ ಮಾನವೀಯತೆ ಮೆರೆದಿದ್ದಾರೆ. ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಪುಟ್ಟ ಮಗುವನ್ನು ಅವರೇ ಆರೈಕೆ ಮಾಡಿ, ತಾಯಿ ನಿರಾತಂಕವಾಗಿ ಪರೀಕ್ಷೆ ಬರೆಯಲು ನೆರವಾದರು. ಕಟ್ಟುನಿಟ್ಟಿನ ಕರ್ತವ್ಯದ ನಡುವೆಯೂ ಜನರ ಕಷ್ಟಕ್ಕೆ ಸ್ಪಂದಿಸುವ ಪೊಲೀಸರ ಸಹೃದಯಿ ಗುಣಕ್ಕೆ ಇದು ಸಾಕ್ಷಿಯಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಖಾಕಿಯ ಹಿಂದಿನ ಹೃದಯವಂತಿಕೆ: ಪರೀಕ್ಷೆ ವೇಳೆ ಮಗುನಾ ನೋಡಿಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ತಾಯಿಗೆ ನೆರವಾದ ಪೊಲೀಸ್ ಅಧಿಕಾರಿ
ಪೊಲೀಸ್ ಅಧಿಕಾರಿ ಶರ್ಪುದ್ದೀನ್

Updated on: Nov 29, 2026 | 2:38 PM

ತೆಲಂಗಾಣ: ಪೊಲೀಸ್ ಎಂದರೆ ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಕಟ್ಟುನಿಟ್ಟಿನ ರಕ್ಷಕರು ಮಾತ್ರವಲ್ಲ, ಬದಲಾಗಿ ಕಷ್ಟದ ಸಮಯದಲ್ಲಿ ಜನರ ಆಸರೆಗೆ ನಿಲ್ಲುವ ಹಲವು ಮಾನವೀಯ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೇ ಒಂದು ಹೃದಯಸ್ಪರ್ಶಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದ್ದು, ದಿಂಡಿ ಮಂಡಲದ ಪೊಲೀಸ್ ಅಧಿಕಾರಿ ಶರ್ಪುದ್ದೀನ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪರೀಕ್ಷೆ ಮತ್ತು ಪುಟ್ಟ ಮಗುವಿನ ನಡುವಿನ ಸಂದಿಗ್ಧತೆ:

ನಲ್ಗೊಂಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಎಸ್‌ಐ (SI) ಪರೀಕ್ಷೆ ಬರೆಯಲು ಮಹಿಳಾ ಅಭ್ಯರ್ಥಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಸುದೀರ್ಘ ಸಿದ್ಧತೆಯೊಂದಿಗೆ ತಮ್ಮ ಭವಿಷ್ಯದ ಕನಸನ್ನು ನನಸಾಗಿಸಲು ಬಂದಿದ್ದ ಅವರಿಗೆ, ಜೊತೆಗೆ ಕುಟುಂಬದ ಸದಸ್ಯರು ಯಾರೂ ಇಲ್ಲದಿರುವುದು ದೊಡ್ಡ ಆತಂಕ ತಂದಿತ್ತು. ಪರೀಕ್ಷಾ ಕೊಠಡಿಯೊಳಗೆ ಹೋದರೆ ಪುಟ್ಟ ಮಗುವನ್ನು ಯಾರ ಬಳಿ ಬಿಡುವುದು, ಒಂದುವೇಳೆ ಪರೀಕ್ಷೆ ತಪ್ಪಿಸಿಕೊಂಡರೆ ಜೀವನದ ಮಹತ್ವದ ಅವಕಾಶ ಕೈತಪ್ಪಿಹೋಗುತ್ತದಲ್ಲ ಎಂಬ ಚಿಂತೆ ಆಕೆಯನ್ನು ಕಾಡುತ್ತಿತ್ತು.

Loading...

ಇದನ್ನೂ ಓದಿ: ಸಣ್ಣ ಊರಿನಿಂದ ಜಾಗತಿಕ ಕಂಪನಿಗೆ; ಅಮೆಜಾನ್‌ನಲ್ಲಿ 46 ಲಕ್ಷ ರೂ. ಸಂಬಳದ ಉದ್ಯೋಗ ಗಿಟ್ಟಿಸಿಕೊಂಡ ಯುವತಿ!

ನೆರವಿಗೆ ಬಂದ ಪೊಲೀಸ್ ಶರ್ಪುದ್ದೀನ್:

ಅದೇ ಸಮಯದಲ್ಲಿ ಪರೀಕ್ಷಾ ಕೇಂದ್ರದ ಬಳಿ ಕರ್ತವ್ಯದಲ್ಲಿದ್ದ ದಿಂಡಿ ಮಂಡಲದ ಪೊಲೀಸ್ ಅಧಿಕಾರಿ ಶರ್ಪುದ್ದೀನ್ ಅವರು ಮಹಿಳೆಯ ಗೊಂದಲ ಮತ್ತು ಕಷ್ಟವನ್ನು ಗಮನಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ತಕ್ಷಣವೇ ಮಾನವೀಯತೆಯಿಂದ ಮುಂದೆ ಬಂದರು. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂಬುದನ್ನು ತಿಳಿದ ಶರ್ಪುದ್ದೀನ್, ಯಾವುದೇ ಹಿಂಜರಿಕೆಯಿಲ್ಲದೆ ಮಗುವನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಂಡರು.

ಮಗುವಿನೊಂದಿಗೆ ಪ್ರೀತಿಯಿಂದ ಆಟವಾಡಿ, ಸಂತೈಸುತ್ತಾ, “ನೀವು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಪರೀಕ್ಷೆ ಬರೆಯಿರಿ” ಎಂದು ತಾಯಿಗೆ ಧೈರ್ಯ ತುಂಬಿದರು. ಪೊಲೀಸ್ ಅಧಿಕಾರಿಯ ಈ ಭರವಸೆಯಿಂದ ನಿರಾಳರಾದ ತಾಯಿ, ಶಾಂತ ಮನಸ್ಸಿನಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದರು. ತಾಯಿ ಪರೀಕ್ಷೆ ಬರೆಯುತ್ತಿರುವಾಗ ಹೊರಗೆ ಮಗುವನ್ನು ಜೋಪಾನವಾಗಿ ನೋಡಿಕೊಳ್ಳುತ್ತಾ ನಿಂತ ಶರ್ಪುದ್ದೀನ್ ಅವರ ನಡೆ ಅಲ್ಲಿದ್ದ ಸಾರ್ವಜನಿಕರು ಮತ್ತು ಇತರರ ಗಮನ ಸೆಳೆಯಿತು.

ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ:

ಸಾಮಾನ್ಯವಾಗಿ ಕರ್ತವ್ಯ ಮತ್ತು ನಿಯಮಗಳಿಗಷ್ಟೇ ಸೀಮಿತವೆಂದು ಭಾವಿಸಲಾಗುವ ಖಾಕಿ ಸಮವಸ್ತ್ರದೊಳಗಿನ ಸೂಕ್ಷ್ಮ ಮತ್ತು ಸಹೃದಯಿ ವ್ಯಕ್ತಿತ್ವವನ್ನು ಈ ಘಟನೆ ಅನಾವರಣಗೊಳಿಸಿದೆ. ತಾಯಿಯೊಬ್ಬಳ ಕನಸಿಗೆ ಬೆಂಬಲವಾಗಿ ನಿಂತು, ಕರ್ತವ್ಯನಿಷ್ಠೆ ಮತ್ತು ಮಾನವೀಯ ವಾತ್ಸಲ್ಯವನ್ನು ಸಮನ್ವಯಗೊಳಿಸಿದ ಶರ್ಪುದ್ದೀನ್ ಅವರ ಕಾರ್ಯವನ್ನು ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಷ್ಟದ ಸಮಯದಲ್ಲಿ ಜನರ ಬೆನ್ನೆಲುಬಾಗಿ ನಿಲ್ಲುವುದೇ ನಿಜವಾದ ಸೇವೆ ಎಂಬುದನ್ನು ಅವರು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:37 pm, Sun, 29 November 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us