ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಮೊದಲ ವರ್ಷದ ಪರೀಕ್ಷೆ ಪಾಸಾಗಲು ಸಿಗಲಿದೆ 5ನೇ ಅವಕಾಶ!

ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಎಂಬಿಬಿಎಸ್ ಮೊದಲ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ, ಅಂದರೆ ಒಟ್ಟು 5 ಅವಕಾಶಗಳನ್ನು ನೀಡಿದೆ. ಕೋವಿಡ್-19 ಮತ್ತು ಇತರ ಸಮಸ್ಯೆಗಳಿಂದ ಅಡ್ಡಿಪಡಿಸಿದ 2019-20ರ ನಂತರದ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಇದು ಒಂದು ಬಾರಿ ಸಡಿಲಿಕೆಯಾಗಿದೆ. ಆದರೂ, ಸಂಪೂರ್ಣ ಎಂಬಿಬಿಎಸ್ ಕೋರ್ಸ್ ಅನ್ನು 10 ವರ್ಷಗಳಲ್ಲಿ ಪೂರ್ಣಗೊಳಿಸುವ ನಿಯಮ ಹಾಗೆಯೇ ಮುಂದುವರಿಯಲಿದೆ.

ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಮೊದಲ ವರ್ಷದ ಪರೀಕ್ಷೆ ಪಾಸಾಗಲು ಸಿಗಲಿದೆ 5ನೇ ಅವಕಾಶ!
MBBS ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

Updated on: Oct 18, 2026 | 3:22 PM

ಮೆಡಿಕಲ್ ಶಿಕ್ಷಣ ಪಡೆಯುತ್ತಿರುವ ಎಂಬಿಬಿಎಸ್ (MBBS) ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Commission – NMC) ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಮೊದಲ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ, ಮೊದಲ ವರ್ಷದ MBBS ಪರೀಕ್ಷೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅವಕಾಶವನ್ನು ನೀಡಲು ಆಯೋಗವು ನಿರ್ಧರಿಸಿದೆ. ಹಿಂದಿನ ನಿಯಮದಂತೆ ವಿದ್ಯಾರ್ಥಿಗಳಿಗೆ ಗರಿಷ್ಠ 4 ಅವಕಾಶಗಳನ್ನು (Attempts) ಮಾತ್ರ ನೀಡಲಾಗುತ್ತಿತ್ತು. ಆದರೆ ಹೊಸ ನಿರ್ಧಾರದ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ ತಮ್ಮ ಮೊದಲ ವರ್ಷದ ವಿಷಯಗಳನ್ನು ಕ್ಲಿಯರ್ ಮಾಡಲು ಒಟ್ಟು 5 ಅವಕಾಶಗಳು ಸಿಗಲಿವೆ.

ಯಾರಿಗೆಲ್ಲಾ ಸಿಗಲಿದೆ ಈ ಹೆಚ್ಚುವರಿ ಅವಕಾಶ?

NMC ನೀಡಿರುವ ಮಾಹಿತಿಯ ಪ್ರಕಾರ, 2019-20ರ ಶೈಕ್ಷಣಿಕ ವರ್ಷದಲ್ಲಿ ಹಾಗೂ ಆ ನಂತರ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಈ ಸಡಿಲಿಕೆ ಅನ್ವಯಿಸಲಿದೆ. ಮೊದಲ ವರ್ಷದ ಕೋರ್ಸ್ ಪೂರ್ಣಗೊಳಿಸಲು ನಿಗದಿಪಡಿಸಲಾಗಿದ್ದ 4 ವರ್ಷಗಳ ಗಡುವನ್ನು ಮೀರಿದ ವಿದ್ಯಾರ್ಥಿಗಳು ಸಹ ಈ ವಿನಾಯಿತಿಯ ಲಾಭ ಪಡೆಯಬಹುದು. ಆದರೆ, ವಿದ್ಯಾರ್ಥಿಯ ಕಾಲೇಜು ಪ್ರವೇಶವು (Admission) ಮಾನ್ಯವಾಗಿರಬೇಕು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ವೈದ್ಯಕೀಯ ಕಾಲೇಜು ಅವರ ಪ್ರವೇಶವನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಿರಬಾರದು.

Loading...

ವಿದ್ಯಾರ್ಥಿಗಳ ನಿರಂತರ ಮನವಿಗೆ ಸ್ಪಂದಿಸಿದ ಆಯೋಗ:

ಸೆಪ್ಟೆಂಬರ್ 23 ರಂದು ನಡೆದ NMCಯ 18 ನೇ ಸಭೆಯಲ್ಲಿ ಈ ಪ್ರಸ್ತಾಪದ ಕುರಿತು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. COVID-19 ಸಾಂಕ್ರಾಮಿಕ ರೋಗ, ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ವೈಯಕ್ತಿಕ ತುರ್ತು ಸಂದರ್ಭಗಳಿಂದಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ಹಾಗೂ ಪಾಲುದಾರರು NMCಗೆ ಸಾಲು ಸಾಲು ಅರ್ಜಿಗಳನ್ನು ಸಲ್ಲಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯೋಗವು ಈ ಸಡಿಲಿಕೆಗೆ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ವಿಶ್ವಬ್ಯಾಂಕ್ ವರದಿ 2026: AI ಬಳಕೆಯಿಂದ ಹೋಮ್‌ವರ್ಕ್‌ನಲ್ಲಿ ಹೆಚ್ಚು ಅಂಕ, ಪರೀಕ್ಷೆಯಲ್ಲಿ ಮಾರ್ಕ್ಸ್ ಕಮ್ಮಿ!

ಇದು ‘ಒಂದು ಬಾರಿಯ’ ವಿಶೇಷ ವಿನಾಯಿತಿ ಮಾತ್ರ:

ಈ ನಿರ್ಧಾರದ ಕುರಿತು NMC ಸ್ಪಷ್ಟನೆ ನೀಡಿದ್ದು, ಇದು ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ನೀಡಲಾದ ಒಂದು ಬಾರಿಯ (One-Time) ವಿಶೇಷ ವಿನಾಯಿತಿಯಾಗಿದೆ. ಇದನ್ನು ಶಾಶ್ವತ ನಿಯಮವೆಂದು ಪರಿಗಣಿಸಲಾಗುವುದಿಲ್ಲ. ಈಗಾಗಲೇ ಈ ಕ್ಷಮಾದಾನದ ಪ್ರಯತ್ನವನ್ನು (Mercy Attempt) ಬಳಸಿಕೊಂಡು ಒಟ್ಟು 5 ಅವಕಾಶಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ 6ನೇ ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

10 ವರ್ಷಗಳ ಒಳಗೆ MBBS ಕೋರ್ಸ್ ಪೂರ್ಣಗೊಳಿಸುವುದು ಕಡ್ಡಾಯ:

ಮೊದಲ ವರ್ಷದ ಪರೀಕ್ಷೆಗೆ ಹೆಚ್ಚುವರಿ ಅವಕಾಶ ನೀಡಲಾಗಿದ್ದರೂ, ಇಡೀ MBBS ಕೋರ್ಸ್ ಪೂರ್ಣಗೊಳಿಸಲು ಇರುವ ಗರಿಷ್ಠ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶ ಪಡೆದ ದಿನಾಂಕದಿಂದ ಗರಿಷ್ಠ 10 ವರ್ಷಗಳ ಒಳಗೆ ಕೋರ್ಸ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಈ ನಿರ್ಧಾರಕ್ಕೆ ಅನುಗುಣವಾಗಿ ಅರ್ಹ ವಿದ್ಯಾರ್ಥಿಗಳ ಪ್ರಕ್ರಿಯೆಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ NMC ನಿರ್ದೇಶನ ನೀಡಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us