ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇಂಗ್ಲೀಷ್- ಕನ್ನಡ ಎರಡೂ ಭಾಷೆಯಲ್ಲಿ ಪರೀಕ್ಷೆ ಬರೆಯಬಹದು
2023ನೇ ಶೈಕ್ಷಣಿಕ ವರ್ಷದಿಂದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಅಥವಾ ಎರಡು ಭಾಷೆಯಲ್ಲಿ ಉತ್ತರ ಬರೆಯಬಹುದು.
ಬೆಂಗಳೂರು: ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪದವಿ (UG) ಮತ್ತು ಸ್ನಾತಕೋತ್ತರ (PG) ವಿದ್ಯಾರ್ಥಿಗಳು ದ್ವಿಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (KSHEC) ಬರುವ ಶೈಕ್ಷಣಿಕ ವರ್ಷ 2023ದಿಂದ ಇದನ್ನು ಅಳವಡಿಸಲು ನಿರ್ಧರಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ. ಉನ್ನತ ಶಿಕ್ಷಣ ಮಂಡಳಿ ಅಡಿಯಲ್ಲಿ ಬರುವ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತದೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಎಸ್‌ಹೆಚ್‌ಇಸಿ 23 ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ತುಂಗಭದ್ರಾ ನದಿ ಆಂಧ್ರದಲ್ಲಿದ್ಯಾ? ಶಿಕ್ಷಣ ಇಲಾಖೆಯಿಂದ ಮತ್ತೊಂದು ಯಡವಟ್ಟು, ವಿವಾದದ ಸುಳಿಯಲ್ಲಿ CBSE ಪಠ್ಯ..!
ವಿದ್ಯಾರ್ಥಿಗಳು ದ್ವಿ ಭಾಷೆಯಲ್ಲಿ ಉತ್ತರ ಬರೆಯಲು ಅವಕಾಶ
ಪ್ರಸಕ್ತ ಸಾಲಿನ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್ನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವ ಭಾಷೆಯಲ್ಲಿ ಬರೆಯುತ್ತೇನೆ ಎಂದು ಮುಂಚಿತವಾಗಿಯೇ ತಿಳಿಸಬೇಕು. ಆದರೆ ಬರುವ ಶೈಕ್ಷಣಿಕ ವರ್ಷದಿಂದ ಹೀಗಾಗುವುದಿಲ್ಲ. ಓರ್ವ ವಿದ್ಯಾರ್ಥಿಯು ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವಾಗ ಒಂದು ಪ್ರಶ್ನೆಗೆ ಕನ್ನಡದಲ್ಲಿ ಮತ್ತೊಂದು ಪ್ರಶ್ನೆಗೆ ಇಂಗ್ಲೀಷ್ನಲ್ಲಿ ಉತ್ತರ ಬರೆಯಬಹುದಾಗಿದೆ.
ಪ್ರಸ್ತುತ ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈಗ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರಿಚಯಿಸಲಾಗುತ್ತಿದೆ ಎಂದು ಡಾ ಸಿ. ಎನ್ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಈ ಸಂಬಂಧ ಕೆಎಸ್‌ಹೆಚ್‌ಇಸಿ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಮಾತನಾಡಿ ವಿದ್ಯಾರ್ಥಿಗಳಿಗೆ ಭಾಷೆಯ ಅಡೆತಡೆಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಲಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ಶೇಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 pm, Sat, 17 December 22